ಬಿಟ್‌ ಕಾಯಿನ್‌ ಹಗರಣ: ಶ್ರೀಕಿ, ಖಂಡೇಲ್‌ವಾಲಾ ವಿರುದ್ಧ ಕೋಕಾ ಕಾಯಿದೆ ರದ್ದುಗೊಳಿಸಿದ ಹೈಕೋರ್ಟ್‌

ಯುನೊಕಾಯಿನ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಅನಧಿಕೃತವಾಗಿ ಅನಾಮಿಕರು ದತ್ತಾಂಶ, ಕಂಪ್ಯೂಟರ್‌ ಹಿಡಿತಕ್ಕೆ ಪಡೆದು 1.14 ಕೋಟಿ ರೂಪಾಯಿ ಮೌಲ್ಯದ 60.06 ಬಿಟಿಸಿಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.
Sriki and Bitcoin
Sriki and Bitcoin
Published on

ಬಹುಕೋಟಿ ಬಿಟ್‌ ಕಾಯಿನ್‌ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ ಮತ್ತು ರಾಬಿನ್‌ ಖಂಡೇಲ್‌ವಾಲಾ ವಿರುದ್ಧ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ–2000) ಹೇರಿ ಸಿಐಡಿಯ ಜಿಡಿಪಿ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ರದ್ದುಪಡಿಸಿದೆ.

ಸಿಐಡಿಯ ಡಿಜಿಪಿ 2024ರ ಮೇ 20ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಶ್ರೀಕೃಷ್ಣ ರಮೇಶ್‌ ಅಲಿಯಾಸ್‌ ಶ್ರೀಕಿ ಹಾಗೂ ಪಶ್ಚಿಮ ಬಂಗಾಳದ ರಾಬಿನ್‌ ಖಂಡೇಲ್‌ವಾಲಾ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ. ವಿಸ್ತೃತ ಆದೇಶ ಇನ್ನಷ್ಟೇ ಪ್ರಕಟವಾಗಬೇಕಿದೆ.

ಅರ್ಜಿದಾರ ಶ್ರೀಕಿ ಪರ ಹಿರಿಯ ವಕೀಲ ಎಂ ಅರುಣ ಶ್ಯಾಮ್‌ ಹಾಗೂ ಖಂಡೇಲ್‌ವಾಲಾ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಆರೋಪಿಗಳಿಗೆ ಜಾಮೀನು ದೊರೆಯಬಾರದು ಎಂಬ ಏಕೈಕ ದುರುದ್ದೇಶದಿಂದ ಕೋಕಾ ಕಾಯಿದೆಯನ್ನು ಕಾನೂನುಬಾಹಿರವಾಗಿ ಅನ್ವಯಿಸಲಾಗಿದೆ. ಪ್ರಕರಣ ಸಂಬಂಧ ತುಮಕೂರು ಪೊಲೀಸರು ಸಿ ರಿಪೋರ್ಟ್‌ ಸಲ್ಲಿಸಿದ್ದರು. ನಂತರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿ, ಆ ಬಳಿಕ ಕೋಕಾ ಕಾಯಿದೆಯನ್ನು ಅನ್ವಯಿಸಲಾಗಿದೆ. ಈ ವೇಳೆ ಸಿಐಡಿ ಡಿಜಿಪಿಯು ಸೂಕ್ತವಾಗಿ ವಿವೇಚನೆ ಮತ್ತು ಕಾನೂನು ಪಾಲನೆ ಮಾಡಿಲ್ಲ. ಆದ್ದರಿಂದ ಕೋಕಾ ಕಾಯಿದೆ ರದ್ದುಪಡಿಸಬೇಕು” ಎಂದು ಕೋರಿದರು.

ಈ ವಾದ ಪುರಸ್ಕರಿಸಿದ ಪೀಠವು ಅರ್ಜಿದಾರರ ವಿರುದ್ಧ ಕೋಕಾ ಕಾಯಿದೆ ಅನ್ವಯಿಸಿ ಸಿಐಡಿ ಡಿಜಿಪಿ ಹೊರಡಿಸಿದ್ದ ಆದೇಶ ರದ್ದುಪಡಿಸಿದೆ.

Also Read
ಬಿಟ್‌ ಕಾಯಿನ್‌ ಹಗರಣ: ಶ್ರೀಕಿ ಸೇರಿ ನಾಲ್ವರಿಗೆ ಅಧೀನ ನ್ಯಾಯಾಲಯಕ್ಕೆ ಹಾಜರಾತಿಯಿಂದ ವಿನಾಯಿತಿ ನೀಡಿದ ಹೈಕೋರ್ಟ್‌

ಪ್ರಕರಣದ ಹಿನ್ನೆಲೆ: ಬಿಟ್‌ ಕಾಯಿನ್‌ ಖರೀದಿ, ಮಾರಾಟ ಮತ್ತು ಸಂಗ್ರಹ ಕುರಿತಾದ ಕ್ರಿಪ್ಟೊ ಕರೆನ್ಸಿಗೆ ಸಂಬಂಧಿಸಿದ ಭಾರತದ ಪ್ರಮುಖ ಕಂಪೆನಿಗಳಲ್ಲಿ ಒಂದಾದ ಯುನೊಕಾಯಿನ್‌ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ಅನಧಿಕೃತವಾಗಿ ಅನಾಮಿಕರು ದತ್ತಾಂಶ, ಕಂಪ್ಯೂಟರ್‌ ಹಿಡಿತಕ್ಕೆ ಪಡೆದು 1.14 ಕೋಟಿ ರೂಪಾಯಿ ಮೌಲ್ಯದ 60.06 ಬಿಟಿಸಿಗಳನ್ನು ಕಳವು ಮಾಡಿದ್ದರು. ಇದನ್ನು ಆಧರಿಸಿ ತುಮಕೂರು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ಐಪಿಸಿ ಸೆಕ್ಷನ್‌ 420, ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 66, 67 ಮತ್ತು 68ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಸಿ ರಿಪೋರ್ಟ್‌ ಸಲ್ಲಿಸಿ, ಅಪರಾಧ ನಡೆದಿರುವುದು ನಿಜ. ಆದರೆ, ಯಾರು ಅಪರಾಧಿಗಳು ಎಂಬುದು ಪತ್ತೆಯಾಗಿಲ್ಲ ಎಂದು ತಿಳಿಸಿದ್ದರು. ನಂತರ ಇದನ್ನು ಸೈಬರ್‌ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು. 2023ರಲ್ಲಿ ಜುಲೈನಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ತದನಂತರ ಶ್ರೀಕಿಯನ್ನು ಬಂಧಿಸಲಾಗಿತ್ತು. ನಂತರ ಕೋಕಾ ಕಾಯಿದೆ ಅನ್ವಯಿಸಿ, ರಾಬಿನ್‌ ಅನ್ನು ಬಂಧಿಸಲಾಗಿತ್ತು.

Kannada Bar & Bench
kannada.barandbench.com