ಮಹಾರಾಷ್ಟ್ರದ ಕರಾವಳಿ ಪ್ರದೇಶವಾದ ಅಲಿಬಾಗ್‌ನಲ್ಲಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪತ್ನಿ ರಶ್ಮಿ ಒಡೆತನದ ಆಸ್ತಿ ಬಗ್ಗೆ ನ್ಯಾಯಾಲಯದ ಉಸ್ತುವಾರಿಯಲ್ಲಿ ಅಧಿಕಾರಿಗಳಿಂದ ತನಿಖೆ ನಡೆಯಬೇಕು ಎಂದು ಕೋರಿ ಬಿಜೆಪಿ ನಾಯಕ ಕಿರೀಟ್ ಸೋಮೈಯ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ [ಕಿರೀಟ್ ಜಯಂತಿಲಾಲ್ ಸೋಮಯ್ಯ ಮತ್ತು ಉದ್ಧವ್ ಠಾಕ್ರೆ ನಡುವಣ ಪ್ರಕರಣ].
ಅಲಿಬಾಗ್‌ನಲ್ಲಿರುವ ಆಸ್ತಿಯೊಂದರಲ್ಲಿ ನಡೆದಿರುವ ಅಕ್ರಮ ಮತ್ತು ಅವ್ಯವಹಾರಗಳ ನೈಜ ಸ್ವರೂಪ ನಿರ್ಧರಿಸಲು ನ್ಯಾಯಾಲಯದ ಮಧ್ಯಪ್ರವೇಶ ಅಗತ್ಯವಿದೆ ಎಂದು ಸೋಮೈಯ ಪ್ರತಿಪಾದಿಸಿದ್ದಾರೆ. ಸಿಎಂ ಠಾಕ್ರೆ, ಅವರ ಪತ್ನಿ ರಶ್ಮಿ ಠಾಕ್ರೆ, ವಿಧಾನಸಭೆ ಸದಸ್ಯ (ಎಂಎಲ್‌ಎ) ರವೀಂದ್ರ ವೈಕರ್ ಮತ್ತು ಅವರ ಪತ್ನಿ ಮನಿಶಾ ವೈಕರ್ ವಿರುದ್ಧವೂ ಆರೋಪ ಮಾಡಲಾಗಿದೆ.
ಅರ್ಜಿಯ ಪ್ರಮುಖ ಅಂಶಗಳು
ಜನಪ್ರತಿನಿಧಿ ಕಾಯಿದೆ ಪ್ರಕಾರ ಚುನಾವಣೆಗೆ ಮುನ್ನ ತಮ್ಮ ಅಫಿಡವಿಟ್ ಸಲ್ಲಿಸುವಾಗ ಆಸ್ತಿ ತೆರಿಗೆಗೆ ಸಂಬಂಧಿಸಿದ ದಾಖಲೆಗಳನ್ನು ಸಿಎಂ ಮತ್ತು ವೈಕರ್ ಅವರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ.
ಆಸ್ತಿಯಲ್ಲಿರುವ ಶಾಶ್ವತ ನಿರ್ಮಿತಿಗಳನ್ನು ಅಗತ್ಯ ಮಂಜೂರಾತಿ ಮತ್ತು ಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಿಸಲಾಗಿದೆ.
ಆಸ್ತಿಯು ಕರಾವಳಿ ಸಮುದ್ರ ತೀರಪ್ರದೇಶದಿಂದ 100 ಮೀಟರ್ ಒಳಗೆ ಇರುವುದರಿಂದ ಆ ನಿರ್ಮಾಣ ಕರಾವಳಿ ನಿಯಂತ್ರಣ ವಲಯದ ನಿಯಮಗಳಿಗೆ ವಿರುದ್ಧವಾಗಿದೆ.
ಕ್ರಮಕ್ಕೆ ಒತ್ತಾಯಿಸಿ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರೂ ಪ್ರತಿವಾದಿಗಳು ಮಹಾರಾಷ್ಟ್ರದ ಶಾಸಕಾಂಗ ಸಭೆಯ ಸದಸ್ಯರಾಗಿರುವುದರಿಂದ ಅವರ ವಿರುದ್ಧ ದೂರಿನ ಮೇಲೆ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ರಾಜ್ಯ ಮತ್ತು ಸ್ಥಳೀಯ ಅಧಿಕಾರಿಗಳ ನಡೆ ಸಂವಿಧಾನದ 14, 19 ಮತ್ತು 21ನೇ ವಿಧಿಯ ಪ್ರಕಾರ ಒದಗಿಸಲಾದ ಹಕ್ಕುಗಳ ಉಲ್ಲಂಘನೆಯಾಗಿದೆ. ಹೀಗಾಗಿ ಬೇರೆ ಮಾರ್ಗವಿಲ್ಲದೆ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಆಸ್ತಿಯ ಬಗ್ಗೆ ತನಿಖೆ ನಡೆಸಿ ತಮ್ಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರದ ಸ್ವತಂತ್ರ ಅಧಿಕಾರಿಗಳನ್ನು ಕಿರೀಟ್ ಕೋರಿದ್ದಾರೆ.