ಕರ್ನಾಟಕ ಸರ್ಕಾರದ ಉದ್ದಿಮೆಯಾದ ಡಿ ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್) ನಕಲಿ ದಾಖಲೆ ಸೃಷ್ಟಿಸಿ ₹47.10 ಕೋಟಿ ಹಗರಣ ನಡೆಸಿರುವ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ದೂರು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿಯ ವಿಧಾನ ಪರಿಷತ್ ಮಾಜಿ ಸದಸ್ಯ ಡಿ ಎಸ್ ವೀರಯ್ಯ ಹಿಂಪಡೆದಿದ್ದಾರೆ.
ಡಿಡಿಯುಟಿಟಿಎಲ್‌ಯು ವ್ಯವಸ್ಥಾಪಕ ನಿರ್ದೇಶಕ ಸಿ ಎನ್ ಶಿವಪ್ರಕಾಶ್ ಅವರು ಬೆಂಗಳೂರಿನ ವಿಲ್ಸನ್ ಗಾರ್ಡನ್ ಠಾಣೆಗೆ ನೀಡಿರುವ ದೂರು ರದ್ದುಪಡಿಸುವಂತೆ ಕೋರಿ ವೀರಯ್ಯ ಸಲ್ಲಿಸಿದ್ದ ಅರ್ಜಿಯು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠದ ಮುಂದೆ ಈಚೆಗೆ ವಿಚಾರಣೆಗೆ ಪಟ್ಟಿಯಾಗಿತ್ತು.
ಈಗಾಗಲೇ ಪ್ರಕರಣದಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ವಿಚಾರಣಾಧೀನ ನ್ಯಾಯಾಲಯವು ಆರೋಪ ಪಟ್ಟಿಯ ಸಂಜ್ಞೇಯವನ್ನು ಇನ್ನಷ್ಟೇ ಪರಿಗಣಿಸಬೇಕಿದೆ. ಈ ಹಂತದಲ್ಲಿ ವೀರಯ್ಯ ಅವರು ಸಲ್ಲಿಸಿರುವ ಅರ್ಜಿ ಊರ್ಜಿತವಾಗದ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆಯಲು ನ್ಯಾಯಾಲಯ ಅನುಮತಿಸಿತು. ಜುಲೈ 12ರಂದು ವೀರಯ್ಯ ಅವರನ್ನು ಸಿಐಡಿ ಬಂಧಿಸಿತ್ತು. ಆನಂತರ ಅವರಿಗೆ ವಿಶೇಷ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಪ್ರಕರಣದ ಹಿನ್ನೆಲೆ: ಡಿ ದೇವರಾಜ್ ಅರಸ್ ಟ್ರಕ್ ಟರ್ಮಿನಲ್ಸ್ ಲಿಮಿಟೆಡ್ ಕಂಪೆನಿ ವತಿಯಿಂದ ನಿರ್ಮಿಸುವ ಎಲ್ಲಾ ಟ್ರಕ್ ಟರ್ಮಿನಲ್‌ಗಳಲ್ಲಿ ಮತ್ತು ಟ್ರಕ್ ಟರ್ಮಿನಲ್‌ಗಳಿಗಾಗಿ ಪಡೆದಿರುವ ಜಮೀನಿನಲ್ಲಿ ಕೆಲವು ದುರಸ್ತಿ ಮತ್ತು ನಿರ್ವಹಣೆ ಕಾಮಗಾರಿ ನಡೆಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯಿದೆಗೆ (ಕೆಪಿಟಿಟಿ) ವಿರುದ್ಧವಾಗಿ ಡಿ ಎಸ್ ವೀರಯ್ಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತುಂಡು ಗುತ್ತಿಗೆ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಶಿವಪ್ರಕಾಶ್ ದೂರು ದಾಖಲಿಸಿದ್ದರು.
ತಾನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜವಾಬ್ದಾರಿಯನ್ನು 19-11-2022ರಂದು ವಹಿಸಿಕೊಂಡಿದ್ದು, ಕಂಪನಿಯ ಆಡಳಿತದಲ್ಲಿ ಕಂಡು ಬಂದಿದ್ದ ನ್ಯೂನತೆ ಹಾಗೂ ಅಭಿವೃದ್ಧಿ ಕಾರ್ಯದ ವೆಚ್ಚದ ವಿವರ ಪರಿಶೀಲಿಸಲಾಗಿ ₹47.10 ಕೋಟಿ ಮೌಲ್ಯದ ಅಭಿವೃದ್ಧಿ ಕೆಲಸಗಳು ಅನುಮಾನಸ್ಪದವಾಗಿದ್ದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ 2022 ಮತ್ತು 2023ರಲ್ಲಿ ಮೂರು ಬಾರಿ ಸವಿವರ ವರದಿ ಸಲ್ಲಿಸಿದ್ದು ಜೊತೆಗೆ ಕ್ರಮಕೈಗೊಳ್ಳುವಂತೆ ಕೋರಿದ್ದೇನೆ ಎಂದು ಶಿವಪ್ರಕಾಶ್ ದೂರಿನಲ್ಲಿ ತಿಳಿಸಿದ್ದರು.
ಮಂಡಳಿಯ ಅಧಿಕಾರೇತರ ನಿರ್ದೇಶಕರು ತುಂಡು ಗುತ್ತಿಗೆ ಕುರಿತ ವಿಷಯ ಮತ್ತು ನಿರ್ಣಯಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂಬ ವಿಚಾರ ಬಹಿರಂಗವಾಗಿತ್ತು. 194ನೇ ನಿರ್ದೇಶಕ ಮಂಡಳಿ ಸಭೆಯ ನಡಾವಳಿಯಲ್ಲಿನ ಕಾರ್ಯಸೂಚಿ 28ಕ್ಕೆ ಸಂಬಂಧಿಸಿದ ನಿರ್ಣಯವನ್ನು ಕುತಂತ್ರಿಗಳು ಕೆಟಿಪಿಪಿ ಕಾಯಿದೆ ಉಲ್ಲಂಘಿಸಿ, ಕಂಪೆನಿ ಹಣ ದೋಚುವ ಸಲುವಾಗಿ ತಿರುಚಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ದಾಖಲೆಗಳನ್ನು ಪರಿಶೀಲಿಸಿದಾಗ ಕಂಪೆನಿ ಹಣ ದೋಚಿರುವುದು, ಅಪರಾಧಿಕ ನಂಬಿಕೆ ದ್ರೋಹ ಮಾಡಿರುವುದು, ಟೆಂಡರ್ ಕರೆಯದೇ ತುಂಡು ಗುತ್ತಿಗೆಗೆ ಅವಕಾಶ ಇಲ್ಲದಿದ್ದರೂ ಮಂಡಳಿಯ ಸಭೆಯ ನಡಾವಳಿ ತಿರುಚಿ, ಕೆಟಿಪಿಪಿ ಕಾಯಿದೆ ಉಲ್ಲಂಘಿಸಿ ಸುಮಾರು 775 ಕಡತಗಳನ್ನು ಸೃಷ್ಟಿಸಿ ಕಂಪೆನಿಗೆ ಸುಮಾರು ₹47.10 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಶಿವಪ್ರಕಾಶ್ ಅವರು 2023ರ ಸೆಪ್ಟೆಂಬರ್ 23ರಂದು ನೀಡಿದ್ದ ದೂರಿನಲ್ಲಿ ವಿವರಿಸಿದ್ದರು.
ಈ ದೂರಿನ ಅನ್ವಯ ವಿಲ್ಸನ್ ಗಾರ್ಡನ್ ಠಾಣೆಯ ಪೊಲೀಸರು ಐಪಿಸಿ ಸೆಕ್ಷನ್‌ಗಳಾದ 120ಬಿ (ಕ್ರಿಮಿನಲ್ ಪಿತೂರಿ), 409 (ಸಾರ್ವಜನಿಕ ಅಧಿಕಾರಿಯಿಂದ ನಂಬಿಕೆ ದ್ರೋಹ), 420 (ವಂಚನೆ), 465 (ನಕಲಿ ದಾಖಲೆ ಸೃಷ್ಟಿ) ಮತ್ತು 468 (ವಂಚಿಸುವ ದೃಷ್ಟಿಯಿಂದ ನಕಲಿ ಕೃತ್ಯ) ಅಡಿ ಅನಾಮಿಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.