ದಾವಣಗೆರೆ ಎಸ್‌ಪಿ ವಿರುದ್ಧ ಟೀಕೆ: ಶಾಸಕ ಹರೀಶ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ

ಹರೀಶ್‌ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 79 (ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವುದು) ಹಾಗೂ 132 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ದಾವಣಗೆರೆ ಎಸ್‌ಪಿ ವಿರುದ್ಧ ಟೀಕೆ: ಶಾಸಕ ಹರೀಶ್‌ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಹೈಕೋರ್ಟ್‌ ನಿರ್ದೇಶನ
Published on

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಿ ಪಿ ಹರೀಶ್ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಆದೇಶಿಸಿದ್ದು, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಶಾಸಕ ಬಿ ಪಿ ಹರೀಶ್ ಅವರು ಎಫ್‌ಐಆರ್ ರದ್ದತಿ ಕೋರಿ ಸಲ್ಲಿಸಿರುವ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲ ಪಿ ವೆಂಕಟೇಶ್ ದಳವಾಯಿ ಅವರು “ಬಿ ಪಿ ಹರೀಶ್ ಅವರು ಪೊಲೀಸ್‌ ವರಿಷ್ಠಾಧಿಕಾರಿ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ. ಸ್ಥಳೀಯ ಸಚಿವರು ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಇತರ ಉನ್ನತಮಟ್ಟದ ಅಧಿಕಾರಿಗಳಿಗೆ ಗೌರವ ನೀಡದೆ ಮನಬಂದಂತೆ ನಡೆಸಿಕೊಳ್ಳುತ್ತಾರೆ ಎಂಬ ನೆಲೆಯಲ್ಲಿ ಹಾಗೆ ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿ ಈಗಾಗಲೇ ಪತ್ರಿಕಾ ಪ್ರಕಟನೆಯೂ ಹೊರಡಿಸಲಾಗಿದೆ” ಎಂದು ವಿವರಿಸಿದರು.

“ಹರೀಶ್‌ ಅವರು ವರಿಷ್ಠಾಧಿಕಾರಿಯ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಬದಲಿಗೆ ವ್ಯವಸ್ಥೆ ಟೀಕಿಸುವ ಬರದಲ್ಲಿ ಈ ರೀತಿ ಹೇಳಿಕೆ ನೀಡಿದ್ದಾರೆ. ಇದೀಗ ಘಟನೆಗೆ ರಾಜಕೀಯ ಸ್ವರೂಪ ನೀಡಿ ದುರುದ್ದೇಶದಿಂದ ಪ್ರಕರಣ ದಾಖಲಿಸಲಾಗಿದೆ. ಈ ಮುಖೇನ ಕಾನೂನು ಪ್ರಕ್ರಿಯೆ ದುರುಪಯೋಗಪಡಿಸಿಕೊಳ್ಳಲಾಗಿದೆ. ಹೀಗಾಗಿ, ಮೇಲಿನ ಎಲ್ಲ ಅಂಶ ಪರಿಗಣಿಸಿ ಎಫ್‌ಐಆರ್ ರದ್ದುಪಡಿಸಬೇಕು” ಎಂದು ಕೋರಿದರು.

ವಾದ ಆಲಿಸಿದ ಪೀಠವು ಅರ್ಜಿದಾರರ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ನಿರ್ದೇಶಿಸಿ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಪ್ರಕರಣದ ಹಿನ್ನೆಲೆ: ಹರಿಹರ ಶಾಸಕ ಬಿ ಪಿ ಹರೀಶ್‌ ಅವರು ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ದಾವಣಗೆರೆ ಪೊಲೀಸ್‌ ವರಿಷ್ಠಾಧಿಕಾರಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. "ಪೊಲೀಸ್‌ ವರಿಷ್ಠಾಧಿಕಾರಿ ಶಾಸಕರಿಗೆ ಬೆಲೆಯನ್ನೇ ಕೊಡುವುದಿಲ್ಲ. ಶಾಸಕರು ಸಭೆಯಲ್ಲಿ ಇದ್ದರೆ ಮುಖ ತಿರುಗಿಸಿ ಕೂರುತ್ತಾರೆ. ಗಂಟೆಗಟ್ಟಲೆ ಶಾಮನೂರು ಮನೆಯ ಬಾಗಿಲನ್ನು ನಾಯಿಯ ರೀತಿ ಕಾಯುತ್ತಾರೆ. ಪೊಲೀಸ್‌ ವರಿಷ್ಠಾಧಿಕಾರಿ ಶಾಮನೂರು ಕುಟುಂಬದ ಪೊಮೆರಿಯನ್ ನಾಯಿಯಂತೆ ವರ್ತಿಸುತ್ತಾರೆ. ಇವರಿಗೆ ಅಧಿಕಾರದಲ್ಲಿರುವವರು ಮಾತ್ರ ಮುಖ್ಯವಾಗಿ ಕಾಣುತ್ತಾರೆ ಎನ್ನಿಸುತ್ತದೆ. ಎಲ್ಲಾ ಜನಪ್ರತಿನಿಧಿಗಳನ್ನು ಸಮಾನವಾಗಿ ಕಾಣುವ ದೃಷ್ಟಿಕೋನ ಇಲ್ಲ. ಈ ಅಧಿಕಾರ ತಾತ್ಕಾಲಿಕ ಅನ್ನುವುದನ್ನು ಎಸ್‌ಪಿ ಅರಿತುಕೊಳ್ಳಬೇಕು" ಎಂದು ಟೀಕಿಸಿದ್ದರು.

ಇದರ ಬೆನ್ನಲ್ಲೇ ತಮ್ಮ ಕುರಿತು ಹರೀಶ್‌ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅರ್ಜಿದಾರರ  ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ದೂರು ಆಧರಿಸಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 79 (ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವುದು) ಹಾಗೂ 132 (ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

Kannada Bar & Bench
kannada.barandbench.com