ಶಾಸಕ ಹರೀಶ್‌ ಪೂಂಜಾರಿಂದ ಕೋಮು ದ್ವೇಷ ಪ್ರಕರಣ ರದ್ದತಿ ಮನವಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಅರ್ಜಿದಾರರ ಪರ ವಕೀಲರು ಸರ್ವೋತ್ತಮ್‌ ನಾಯಕ್‌ ಅವರು “ಪ್ರಮಾಣೀಕೃತ ದೂರಿನ ಪ್ರತಿಗೆ ಅರ್ಜಿ ಸಲ್ಲಿಸಿದ್ದೇವೆ” ಎಂದರು. ವಿಶೇಷ ಸರ್ಕಾರಿ ಅಭಿಯೋಜಕರು “ತಾವೇ ದೂರಿನ ಪ್ರತಿ ಮತ್ತು ಎಫ್‌ಐಆರ್‌ ಸಲ್ಲಿಸುತ್ತೇವೆ” ಎಂದು ಮಾಹಿತಿ ನೀಡಿದರು.
ಶಾಸಕ ಹರೀಶ್‌ ಪೂಂಜಾರಿಂದ ಕೋಮು ದ್ವೇಷ ಪ್ರಕರಣ ರದ್ದತಿ ಮನವಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌
Published on

ಕೋಮು ದ್ವೇಷ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್‌ ಪೂಂಜಾ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ದೂರುದಾರಿಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿ ಮಾಡಿದೆ.

ಎಫ್‌ಐಆರ್‌ ರದ್ದತಿ ಕೋರಿ ಹರೀಶ್‌ ಪೂಂಜಾ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ನಡೆಸಿದ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ರಜಾಕಾಲೀನ ಪೀಠವು ಉಪ್ಪಿನಂಗಡಿ ಪೊಲೀಸರಿಗೆ ನೋಟಿಸ್‌ ಮತ್ತು ದೂರುದಾರ ತೆಕ್ಕಾರುವಿನ ಎಸ್‌ ಬಿ ಇಬ್ರಾಹಿಂಗೆ ತುರ್ತು ನೋಟಿಸ್‌ ಜಾರಿ ಮಾಡಿದ್ದು, ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಸರ್ವೋತ್ತಮ್‌ ನಾಯಕ್‌ ಅವರು ಪ್ರಮಾಣೀಕೃತ ದೂರಿನ ಪ್ರತಿಗೆ ಅರ್ಜಿ ಸಲ್ಲಿಸಿದ್ದೇವೆ ಎಂದರು.

ವಿಶೇಷ ಸರ್ಕಾರಿ ಅಭಿಯೋಜಕರು “ತಾವೇ ದೂರಿನ ಪ್ರತಿ ಮತ್ತು ಎಫ್‌ಐಆರ್‌ ಸಲ್ಲಿಸುತ್ತೇವೆ” ಎಂದು ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತು.

Also Read
ಕೋಮು ದ್ವೇಷ ಪ್ರಕರಣ ರದ್ದತಿ ಕೋರಿ ಹೈಕೋರ್ಟ್‌ ಕದತಟ್ಟಿದ ಬಿಜೆಪಿ ಶಾಸಕ ಹರೀಶ್‌ ಪೂಂಜಾ

ಪ್ರಕರಣದ ಹಿನ್ನೆಲೆ: ಇಬ್ರಾಹಿಂ ಉಪ್ಪಿನಂಗಡಿ ನೀಡಿರುವ ದೂರಿನಲ್ಲಿ, ತೆಕ್ಕಾರುವಿನ ಭಟ್ರಬೈಲು ಎಂಬಲ್ಲಿ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮ ಕಲಶೋತ್ಸವದಲ್ಲಿ ಮೇ 3ರಂದು ಹರೀಶ್‌ ಪೂಂಜಾ ಅವರು ರಾತ್ರಿ 9-9.30ರ ವೇಳೆಗೆ ತುಳು ಭಾಷೆಯಲ್ಲಿ “ತೆಕ್ಕಾರಿನ ಕಂತ್ರಿ ಬ್ಯಾರಿಗಳು ಟ್ಯೂಬ್‌ಲೈಟ್‌ ಹೊಡೆದಿದ್ದಾರೆ. ಜನರೇಟರ್‌ನ ಡೀಸೆಲ್‌ ಕದ್ದಿದ್ದಾರೆ ಎಂಬ ಬಗ್ಗೆ ಸ್ಥಳೀಯರಿಂದ ಮಾಹಿತಿ ಬಂದಿದೆ. ಬ್ರಹ್ಮ ಕಲಶೋತ್ಸವ ಮುಗಿಯುವ ವೇಳೆಗೆ ಕದ್ದಿರುವವರು ಯಾರು ಎಂಬ ಮಾಹಿತಿ ಬರುತ್ತದೆ. ನಮ್ಮಲ್ಲಿ ಸೌಹಾರ್ದತೆ ಬೇಕು ಎಂದು ಹೇಳುತ್ತಾರೆ. ನಾವು ಮಸೀದಿಗೆ ಹೋಗಿ ಆಮಂತ್ರಣ ಕೊಟ್ಟಿದ್ದರಿಂದ ಬ್ಯಾರಿಗಳು ಟ್ಯೂಬ್‌ ಹೊಡೆದಿದ್ದಾರೆ. ಅವರಿಗೆ ಆಮಂತ್ರಣ ನೀಡಬಾರದಿತ್ತು. ಕಾರ್ಯಕ್ರಮಕ್ಕೆ ಕರೆಯಬಾರದಿತ್ತು. ನಾವು ಹಿಂದೂಗಳು, ಹಿಂದೂಗಳೇ ಅವರನ್ನು ಸೇರಿಸಬಾರದು. ಪ್ರಸ್ತುತ ತೆಕ್ಕಾರಿನಲ್ಲಿ 1,200 ಮುಸ್ಲಿಮರಿದ್ದು, ನಾವು 150 ಮನೆಯವರು ಇದ್ದೇವೆ. 10 ವರ್ಷ ಕಳೆದರೆ 5 ಸಾವಿರ ಜನರಾಗುತ್ತಾರೆ. ಮುಸ್ಲಿಮರು ಐದು ಸಾವಿರ ಅಲ್ಲ 10 ಸಾವಿರ ಆದರೂ ಅವರನ್ನು ಹೆದರಿಸಿ, ನೀವು ಸನಾತನ ಹಿಂದೂ ಧರ್ಮವನ್ನು ಪಾಲನೆ ಮಾಡಿ, ದೇವರ ಪೂಜೆ ಮಾಡಿಕೊಂಡ ಬರಬೇಕು" ಎಂದು ಹೇಳಿದ್ದಾರೆ. ಆ ಮೂಲಕ ಸಮುದಾಯಗಳ ನಡುವೆ ದ್ವೇಷ ಹರಿಡಿದ್ದಾರೆ ಎನ್ನಲಾಗಿದೆ.

ಈ ಸಂಬಂಧದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲೂ ವೀಕ್ಷಿಸಿರುವುದಾಗಿ ಇಬ್ರಾಹಿಂ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನು ಆಧರಿಸಿ ಪೊಲೀಸರು ಹರೀಶ್‌ ಪೂಂಜಾ ವಿರುದ್ಧ ಬಿಎನ್‌ಎಸ್‌ ಸೆಕ್ಷನ್‌ 196 (ಧರ್ಮದ ಆಧಾರದಲ್ಲಿ ದ್ವೇಷ ಹರಡುವುದು), 353(2) (ದ್ವೇಷ ಹರಡಲು ಸುಳ್ಳು ಸುದ್ದಿ ಹಂಚಿಕೆ) ಅಡಿ ಶಾಸಕ ಪೂಂಜಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Kannada Bar & Bench
kannada.barandbench.com