ಆರೋಪ ಮುಕ್ತಿ ಕೋರಿ ಶಾಸಕ ಮುನಿರತ್ನ ಮಧ್ಯಂತರ ಅರ್ಜಿ; ಆಕ್ಷೇಪಣೆ ಸಲ್ಲಿಸಲು ವಿಶೇಷ ನ್ಯಾಯಾಲಯ ಆದೇಶ

ಮುನಿರತ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವೇಲು ನಾಯ್ಕರ್‌ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
BJP MLA Muniratna and Bengaluru City Civil Court
BJP MLA Muniratna and Bengaluru City Civil Court
Published on

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಎಸ್‌ಸಿ–ಎಸ್‌ಟಿ) ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ನಿರ್ದೋಷಿಯಾಗಿದ್ದು, ಆರೋಪಮುಕ್ತಗೊಳಿಸಬೇಕು ಎಂದು ಕೋರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಸಲ್ಲಿಸಿರುವ ಮಧ್ಯಂತರ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ದೂರುದಾರ ವೇಲು ನಾಯ್ಕರ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಗುರುವಾರ ಆದೇಶಿಸಿದೆ.

ಶಾಸಕ ಮುನಿರತ್ನ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ನಡೆಸಿದರು. ಈ ಹಿಂದೆ ನ್ಯಾಯಾಲಯವು ದೂರುದಾರ ವೇಲು ನಾಯ್ಕರ್‌ಗೆ ನೋಟಿಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ವೇಲು ನಾಯ್ಕರ್‌ ಪರ ಹಿರಿಯ ವಕೀಲ ಸಿ ಎಚ್‌ ಹನುಮಂತರಾಯ ಅವರು ಖುದ್ದು ಹಾಜರಾಗಿ ವಕಾಲತ್ತು ಸಲ್ಲಿಸಿದರು.

ವಕಾಲತ್ತು ಸ್ವೀಕರಿಸಿದ ಪೀಠವು ಪ್ರಕರಣದಿಂದ ಕೈಬಿಡಬೇಕು ಎಂದು ಕೋರಿ ಆರೋಪಿ ಮುನಿರತ್ನ ಸಲ್ಲಿಸಿರುವ ಅರ್ಜಿಗೆ ದೂರುದಾರರು ಆಕ್ಷೇಪಣೆ ಸಲ್ಲಿಸಬೇಕು ಎಂದು ಆದೇಶಿಸಿ ವಿಚಾರಣೆ ಮುಂದೂಡಿತು. ವಿಚಾರಣೆ ವೇಳೆ ಆರೋಪಿ ಮುನಿರತ್ನ ಖುದ್ದು ಹಾಜರಿದ್ದರು.

Also Read
ಜಾತಿ ನಿಂದನೆ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಜಾಮೀನು ಮಂಜೂರು; ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮತ್ತೆ ಬಂಧನದ ಭೀತಿ

ಪ್ರಕರಣದ ಹಿನ್ನೆಲೆ: ಘನತ್ಯಾಜ್ಯ ಸಂಗ್ರಹದ ಕಸ ವಿಲೇವಾರಿ ಮಾಡುವ ಗುತ್ತಿಗೆದಾರನಾಗಿ ಕಾರ್ಯ ನಿರ್ವಹಿಸುವ ಪರಿಶಿಷ್ಟ ಜಾತಿಗೆ ಸೇರಿದ ನನ್ನನ್ನು ಮುನಿರತ್ನ ಅವರು ವೈಯಾಲಿ ಕಾವಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ 2024ರ ಮೇ 18ರಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವೇಲು ನಾಯ್ಕರ್‌ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಅಡಿ ಮುನಿರತ್ನ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ.

ವಿಶೇಷ ತನಿಖಾ ತಂಡವು (ಎಸ್‌ಐಟಿ) ಆರೋಪಿ ಮುನಿರತ್ನ ವಿರುದ್ಧ, ಎಸ್‌ಸಿ–ಎಸ್‌ಟಿ ದೌರ್ಜನ್ಯ ತಡೆ ಕಾಯಿದೆ–1989ರ ಸೆಕ್ಷನ್‌ಗಳಾದ 3(1)(ಆರ್‌), 3(1)(ಎಸ್‌), 31(ಯು), 3(2)(ವಿಎ), ಐಪಿಸಿ ಸೆಕ್ಷನ್‌ಗಳಾದ 153 ಎ(1)(ಎ)(ಬಿ), 504 ಮತ್ತು 506ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ.

Kannada Bar & Bench
kannada.barandbench.com