ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅಕ್ಟೋಬರ್ 5ರವರೆಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶನಿವಾರ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ಅನುಸಾರ ಮುನಿರತ್ನ ಅವರನ್ನು ಪೊಲೀಸರು ಶುಕ್ರವಾರ (ಸೆ.20) ಬೆಳಿಗ್ಗೆ ವಶಕ್ಕೆ ಪಡೆದಿದ್ದರು. ಇಂದು ಮುನಿರತ್ನ ಅವರನ್ನು ವಿಶೇಷ ಮ್ಯಾಜಿಸ್ಟ್ರೇಟ್ ಕೆ ಎಂ ಶಿವಕುಮಾರ್ ಮುಂದೆ ಹಾಜರುಪಡಿಸಿದರು.
ಕೆಲಕಾಲ ಮುನಿರತ್ನ ಪರ ವಕೀಲರ ವಾದ ಆಲಿಸಿದ ಮ್ಯಾಜಿಸ್ಟ್ರೇಟ್ ಆರೋಪಿಯನ್ನು ಅಕ್ಟೋಬರ್ 5 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ವಿಚಾರಣೆ ವೇಳೆ ಮುನಿರತ್ನ ಪರ ವಕೀಲರು, "ಈ ಪ್ರಕರಣದಲ್ಲಿ ಸುದ್ದಿ ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿ ಅನಪೇಕ್ಷಿತವಾಗಿದೆ" ಎಂದು ಆರೋಪಿಸಿದರು.
"ಎಫ್ಐಆರ್ ಆಗಿದ್ದು ಗುರುವಾರ ರಾತ್ರಿ 9.30ಕ್ಕೆ ಮರುದಿನ ಬೆಳಿಗ್ಗೆಯೇ ಈ ಎಫ್ಐಆರ್ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿತ್ತು. ಎಫ್ಐಆರ್ ದಾಖಲಾಗುವ ಮುನ್ನವೇ ಮಾಧ್ಯಮಗಳಲ್ಲಿ ಎಲ್ಲವೂ ಬಿತ್ತರಗೊಂಡು ಬಿಡುತ್ತದೆ. ಪ್ರಕರಣವನ್ನು ಮಾಧ್ಯಮದವರು ತನಿಖೆ ಮಾಡುತ್ತಾರೆಯೋ ಅಥವಾ ಪೊಲೀಸರೋ ಎಂಬುದೇ ಗೊತ್ತಾಗುತ್ತಿಲ್ಲ. ಈ ಮಾಹಿತಿಯೆಲ್ಲಾ ಹೇಗೆ ಸೋರಿಕೆ ಆಗುತ್ತಿದೆ ಎಂಬ ಬಗ್ಗೆ ದೂರು ದಾಖಲಿಸಿಕೊಳ್ಳಬೇಕು" ಎಂದು ಮ್ಯಾಜಿಸ್ಟ್ರೇಟ್‌ಗೆ ಮನವಿ ಮಾಡಿದರು.
ಇದಕ್ಕೆ ಮ್ಯಾಜಿಸ್ಟ್ರೇಟ್ ಶಿವಕುಮಾರ್ ಅವರು “ಈ ಸಂಬಂಧ ನಿಮ್ಮ ದೂರು ಸಲ್ಲಿಸಿ” ಎಂದು ಸೂಚಿಸಿದರು.
ಈ ನಡುವೆ ಆರೋಪಿ ಮುನಿರತ್ನ ಅವರು ಕೆಲ ಕ್ಷಣಗಳ ಕಾಲ ಭಾವುಕರಾಗಿ ನ್ಯಾಯಾಧೀಶರಿಗೆ, "ಎರಡು ನಿಮಿಷ ಮಾತಾಡುತ್ತೇನೆ ಸಾರ್" ಎಂದು ಮನವಿ ಮಾಡಿದ್ದಾಗಿ ತಿಳಿದುಬಂದಿದೆ.
“ದೂರು ನೀಡಿದವರು ನನ್ನ ಜೊತೆಗೇ ಇದ್ದವರು. ಈಗ ಅವರಿಂದಲೇ ದೂರು ಕೊಡಿಸಲಾಗುತ್ತಿದೆ. ಒಂದು ಕೇಸಿನಲ್ಲಿ ಜಾಮೀನು ಸಿಗುತ್ತಿದ್ದಂತೆಯೇ ಮತ್ತೊಂದು ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ. ರಾಜಕೀಯ ದುರುದ್ದೇಶದಿಂದ ಪ್ರಕರಣಗಳ ಮೇಲೆ ಪ್ರಕರಣ ದಾಖಲಿಸಿ ನನ್ನ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಶಾಸಕನಾಗಿರುವ ಕಾರಣದಿಂದಲೇ ಈ ರೀತಿ ಪ್ರಕರಣಗಳನ್ನು ದಾಖಲಾಗುವಂತೆ ಮಾಡಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ಈ ರೀತಿಯ ದೂರು ಕೊಡಿಸಲಾಗುತ್ತಿದೆ. ಈ ದೂರನ್ನು ಯಾವಾಗ ಬೇಕಾದರೂ ನೀಡಬಹುದಿತ್ತು. ನಾನು ನಾಲ್ಕು ಬಾರಿ ಶಾಸಕನಾಗಿರುವವನು. ಸಚಿವನಾಗಿದ್ದವನು. ನನಗೆ ನೀಡಲಾಗುತ್ತಿರುವ ಈ ರೀತಿಯ ಕಿರುಕುಳದಿಂದ ಬೇಸತ್ತಿದ್ದೇನೆ. ಬೇಕಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧವಿದ್ದೇನೆ” ಎಂದರು.
ಇದಕ್ಕೆ ಮ್ಯಾಜಿಸ್ಟ್ರೇಟ್ " (ರಾಜೀನಾಮೆಯನ್ನು) ಎಲ್ಲಿ ಕೊಡಬೇಕೊ ಅಲ್ಲಿ ಕೊಡಿ” ಎಂದು ಪ್ರತಿಕ್ರಿಯಿಸಿ, ಮುನಿರತ್ನ ಅವರ ವೈದ್ಯಕೀಯ ಪರೀಕ್ಷೆ ವರದಿಯನ್ನು ಪರಿಶೀಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.
ಪ್ರಕರಣದ ಹಿನ್ನೆಲೆ: ಬಿಜೆಪಿ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಯಲ್ಲಿ ಬುಧವಾರ ಮಾಜಿ ಸಚಿವ ಮುನಿರತ್ನ ಸೇರಿ ಆರು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮುನಿರತ್ನ, ಅವರ ಅಂಗರಕ್ಷಕ ವಿಜಯಕುಮಾರ್, ಸುಧಾಕರ್, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ್ ಮತ್ತು ಲೋಕಿ ಎಂಬವರನ್ನು ಆರೋಪಿಗಳನ್ನಾಗಿಸಲಾಗಿದ್ದು, ಐಪಿಸಿ ಸೆಕ್ಷನ್‌ಗಳಾದ 354A, 354C, 376, 506, 504, 120(b), 149, 384, 406, 308 ಅಡಿ ಪ್ರಕರಣ ದಾಖಲಿಸಲಾಗಿದೆ.