ಕೋವಿಡ್ ಮಾರ್ಗಸೂಚಿ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗದು: ಬಿಜೆಪಿ ಹೇಳಿಕೆಗೆ ಹೈಕೋರ್ಟ್ ಅಸಮಾಧಾನ

"ಆಕ್ಷೇಪಣೆ ಸಲ್ಲಿಸಲು ನಿಮಗೆ 10 ದಿನಗಳ ಸಮಯ ಬೇಕಾಗಿಲ್ಲ. ಇದು ಸರಳ ವಿಷಯ, ನೀವು ಮಾರ್ಗಸೂಚಿಗಳನ್ನು ನೀಡಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಹೇಳಬೇಕಾಗಿದೆ. ನೀವು ಮಾರ್ಗಸೂಚಿಗಳನ್ನು ನೀಡಿಲ್ಲದಿದ್ದರೆ ಈಗ ನೀಡಿ" ಎಂದು ನ್ಯಾಯಾಲಯ ಹೇಳಿದೆ.
BJP
BJP

ರಾಜಕೀಯ ಸಮಾವೇಶಗಳಲ್ಲಿ ಪಾಲ್ಗೊಳ್ಳುವಾಗ ಅನುಸರಿಸಬೇಕಾದ ಕೋವಿಡ್‌-19 ಮಾರ್ಗಸೂಚಿಯನ್ನು ದಾಖಲೆಯಲ್ಲಿ ಸಲ್ಲಿಸಲು ಭಾರತೀಯ ಜನತಾ ಪಕ್ಷದ (ಬಿಜೆಪಿ) ವಿಫಲವಾದ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಶುಕ್ರವಾರ ಖಾರವಾಗಿ ಪ್ರತಿಕ್ರಿಯಿಸಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ "ನಿಮ್ಮ ಪಕ್ಷದ ಕಾರ್ಯಕರ್ತರಿಗೆ ನೀವು ಯಾವ ನಿರ್ದೇಶನಗಳನ್ನು ನೀಡಿದ್ದೀರಿ?" ಎಂದು ಪ್ರಶ್ನಿಸಿತು. ಪಕ್ಷ ಹೊರಡಿಸಿದ ಮಾರ್ಗಸೂಚಿಗಳನ್ನು ತಿಳಿಸುವ ಅಫಿಡವಿಟ್‌ ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶ ಬೇಕು ಎಂದು ಬಿಜೆಪಿ ಪರ ವಕೀಲರು ತಿಳಿಸಿದಾಗ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯವು "ಆಕ್ಷೇಪಣೆ ಸಲ್ಲಿಸಲು ನಿಮಗೆ 10 ದಿನಗಳ ಸಮಯ ಬೇಕಾಗಿಲ್ಲ. ಇದು ಸರಳ ವಿಷಯ, ನೀವು ಮಾರ್ಗಸೂಚಿಗಳನ್ನು ನೀಡಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಹೇಳಬೇಕಾಗಿದೆ. ನೀವು ಮಾರ್ಗಸೂಚಿಗಳನ್ನು ನೀಡಿಲ್ಲದಿದ್ದರೆ ಈಗ ನೀಡಿ" ಎಂದಿತು.

Also Read
ಕೋವಿಡ್‌ ವೇಳೆ ಸಮಾವೇಶ ನಡೆಸಿಯೇ ಇಲ್ಲ ಎಂದ ಆಡಳಿತ ಪಕ್ಷ ಬಿಜೆಪಿಗೆ ಹೈಕೋರ್ಟ್‌ನಿಂದ ತರಾಟೆ

“ಕೋವಿಡ್‌-19 ಹಿನ್ನೆಲೆಯಲ್ಲಿ ಮುಖಗವಸುಗಳನ್ನು ಧರಿಸಲು ಪಕ್ಷದ ಸದಸ್ಯರಿಗೆ ನಿರ್ದೇಶನ ನೀಡಲಾಗಿದೆಯೇ ಎಂದಷ್ಟೇ 5 ನೇ ಪ್ರತಿವಾದಿ ಬಿಜೆಪಿ ಹೇಳಬೇಕಾಗಿದೆ. ಇಂತಹ ಸರಳ ಹೇಳಿಕೆ ನೀಡಲು ನಾವು ಎರಡು ವಾರಗಳ ಸಮಯವನ್ನು ನೀಡಲು ಸಾಧ್ಯವಿಲ್ಲ. ಹೇಳಿಕೆ ಸಲ್ಲಿಸಲು ಒಂದು ವಾರ ಕಾಲಾವಕಾಶ ನೀಡಬಹುದಷ್ಟೇ” ಎಂದು ಹೇಳಿತು.

ರಾಜ್ಯದಲ್ಲಿ ಕೋವಿಡ್‌ -19 ಮಾರ್ಗಸೂಚಿಗಳನ್ನು ಸರಿಯಾಗಿ ಜಾರಿಗೊಳಿಸಬೇಕೆಂದು ಕೋರಿ ಲೆಟ್ಜ್‌ಕಿಟ್‌ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ರಾಜಕೀಯ ಪಕ್ಷಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವಿಫಲವಾಗಿವೆ ಎಂಬ ಹಿನ್ನೆಲೆಯಲ್ಲಿ 2020 ರ ನವೆಂಬರ್‌ನಲ್ಲಿ ನ್ಯಾಯಾಲಯ ಬಿಜೆಪಿ, ಸಿಪಿಐ, ಜೆಡಿ (ಎಸ್), ಸಿಪಿಐ (ಎಂ), ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಕನ್ನಡ ಚಳವಳಿ ವಾಟಾಳ್‌ ಪಕ್ಷಕ್ಕೆ ನೋಟಿಸ್ ನೀಡಿತ್ತು.

ಕೋವಿಡ್‌ -19 ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಮೆರವಣಿಗೆ ಅಥವಾ ಸಮಾವೇಶ ನಡೆಸಿಲ್ಲ ಎಂದು ಬಿಜೆಪಿ ಸಲ್ಲಿಸಿದ ಅಫಿಡವಿಟ್ ಹೈಕೋರ್ಟ್‌ ಕೋಪಕ್ಕೆ ಕಾರಣವಾಗಿತ್ತು. ಅಂತಹ ಸಭೆ ಸಮಾವೇಶಗಳು ನಡೆದ ಛಾಯಾಚಿತ್ರಗಳು ಪೀಠದ ಬಳಿ ಇದ್ದುದು ಬಿಜೆಪಿ ವ್ಯತಿರಿಕ್ತ ಹೇಳಿಕೆ ನೀಡುತ್ತಿದೆ ಎಂದು ಸಾಬೀತಾಗಿತ್ತು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 22ಕ್ಕೆ ನಿಗದಿಯಾಗಿದೆ.

Related Stories

No stories found.
Kannada Bar & Bench
kannada.barandbench.com