

ಉಡುಪಿಯ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ ಪೂಜಾರಿ ಅವರಿಂದ ಐದು ಕೋಟಿ ರೂಪಾಯಿ ಪಡೆದಿರುವ ಪ್ರಕರಣದಲ್ಲಿ ಉಭಯ ಪಕ್ಷಕಾರರು ಸಂಧಾನ ಮಾಡಿಕೊಳ್ಳಲು ಕರ್ನಾಟಕ ಹೈಕೋರ್ಟ್ ಮಂಗಳವಾರ ಹತ್ತು ದಿನ ಕಾಲಾವಕಾಶ ನೀಡಿದೆ. ಆದರೆ, "ಪೂಜಾರಿ ಅವರು ಹೆಚ್ಚಿಗೆ ಹಣಕ್ಕೆ ಬೇಡಿಕೆ ಇಡಲಾಗದು. ಹಣ ಬರಬೇಕು ಅಷ್ಟೆ. ಸಂಧಾನ ಮಾಡಿಕೊಂಡು ಬನ್ನಿ" ಎಂದು ನ್ಯಾಯಾಲಯವು ಮೌಖಿಕವಾಗಿ ಹೇಳಿದೆ.
ತನಿಖೆಯ ವೇಳೆ ಜಫ್ತಿ ಮಾಡಲಾಗಿರುವ ಹಣವನ್ನು ತಮ್ಮ ವಶಕ್ಕೆ ನೀಡಬೇಕು ಎಂದು ದೂರುದಾರ ಪೂಜಾರಿ ಮತ್ತು ಆರೋಪಿಯಾಗಿರುವ ವಿಜಯನಗರ ಜಿಲ್ಲೆ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಸಲ್ಲಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ಏಕಸದಸ್ಯ ಪೀಠ ನಡೆಸಿತು.
ಪೂಜಾರಿ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎ ಎಸ್ ಚಂದ್ರಮೌಳಿ ಅವರು “ಪೂಜಾರಿ ಅವರಿಗೆ ತನಿಖೆಯ ವೇಳೆ ಜಫ್ತಿ ಮಾಡಿರುವ ಹಣವನ್ನು ಮಧ್ಯಂತರ ಕಸ್ಟಡಿಯ ರೂಪದಲ್ಲಿ ನೀಡಬೇಕು ಎಂದು ಕೋರಿದ್ದೇವೆ. ಗೋವಿಂದ ಪೂಜಾರಿ ದೂರು ನೀಡಿದ್ದು, ಚೈತ್ರಾ ಕುಂದಾಪುರ ಮತ್ತಿತರರು ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಹಣ ಪಡೆದಿದ್ದಾರೆ. ತನಿಖೆ ನಡೆಸಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ. ತನಿಖೆಯ ಸಂದರ್ಭದಲ್ಲಿ ವಿವಿಧ ವ್ಯಕ್ತಿಗಳಿಂದ ಹಣ ಜಫ್ತಿ ಮಾಡಲಾಗಿದೆ. ಹೀಗಾಗಿ, ಜಫ್ತಿ ಮಾಡಲಾದ ಹಣವನ್ನು ಮಧ್ಯಂತರ ಕಸ್ಟಡಿಯನ್ನು ನಮಗೆ ನೀಡುವಂತೆ ಕೋರಿದ್ದೇವೆ” ಎಂದರು.
ಆಗ ಪೀಠವು “ಹಣವನ್ನು ಆರೋಪಿಗಳಿಗೆ ನೀಡಿರುವುದಕ್ಕೆ ಯಾವುದೇ ದಾಖಲೆ ಸಲ್ಲಿಸಿಲ್ಲ. ಆರೋಪಿಗಳಿಗೆ ಹಣ ನೀಡಿರುವುದಕ್ಕೆ ಏನು ದಾಖಲೆ ಇದೆ? ಅವರ ಬಳಿ ಬೇರೆ ಹಣ ಇರಬಹುದು. ಆರೋಪ ಪಟ್ಟಿ ಸಲ್ಲಿಸಿರಬಹುದು, ಅವರು ದೋಷಿ ಎಂದು ಸಾಬೀತಾಗಿಲ್ಲ. ದೂರುದಾರರು ಆರೋಪಿಗಳಿಗೆ ನೀಡಿರುವ ಹಣವನ್ನು ಜಫ್ತಿ ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿಲ್ಲ” ಎಂದಿತು.
ಈ ಮಧ್ಯೆ ಪೀಠವು “ಐವತ್ತು ಲಕ್ಷ ಪೂಜಾರಿ ಅವರಿಗೆ, ಐವತ್ತು ಲಕ್ಷ ಸ್ವಾಮೀಜಿ ಅವರಿಗೆ ನೀಡೋಣ. ಇಬ್ಬರೂ ಬ್ಯಾಂಕ್ ಗ್ಯಾರಂಟಿ ನೀಡಬೇಕು” ಎಂದಿತು.
ಆಗ ಚಂದ್ರಮೌಳಿ ಅವರು “ನಾವು ಆದಾಯ ತೆರಿಗೆ ತೋರಿಸಿದ್ದೇನೆ. ಏನೆಲ್ಲಾ ದಾಖಲೆ ನೀಡಬೇಕು ಅದೆಲ್ಲವನ್ನೂ ನೀಡಿದ್ದೇನೆ. ಪೂಜಾರಿ ಅವರು ಬ್ಯಾಂಕ್ ಭದ್ರತೆ ನೀಡಲು ಸಿದ್ಧರಿದ್ದಾರೆ. ಎಷ್ಟು ವರ್ಷಗಳ ಕಾಲ ನಾವು ಕಾಯಬೇಕು? ಪೂಜಾರಿ ಅವರು ಶೇ.24ರಷ್ಟು ಬಡ್ಡಿ ಪಾವತಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ನಿಶ್ಚಿತ ಠೇವಣಿ ಇಡಲಾಗಿದ್ದು, ಶೇ.6ರಷ್ಟು ಬರುತ್ತಿದೆ. ಉಳಿದ ಹಣ ಎಲ್ಲಿಂದ ಬರಿಸಲಿ? ಮಠದ ಸ್ವಾಮೀಜಿ ಹಣ ಬಿಡುಗಡೆ ಕೋರುತ್ತಿದ್ದಾರೆ. ಅವರು ಹೇಗೆ ಹಣ ಬಿಡುಗಡೆ ಕೇಳಲಾಗುತ್ತದೆ? ಸ್ವಾಮೀಜಿ ಹೊರತುಪಡಿಸಿ ಯಾರೂ ನ್ಯಾಯಾಲಯದ ಮುಂದೆ ಬಂದಿಲ್ಲ. ನಾವು ಹಣ ಕೊಟ್ಟಿರುವುದು ತನಿಖೆಯಲ್ಲಿ ಬಯಲಾಗಿದೆ. ಆರೋಪ ಪಟ್ಟಿ ಸಲ್ಲಿಸಲಾಗಿದೆ” ಎಂದರು.
ಸ್ವಾಮೀಜಿ ಪರ ವಕೀಲ ಸುಯೋಗ್ ಹೇರಳೆ ಅವರು “ಸಂಧಾನ ಮಾತುಕತೆ ನಡೆದಿದೆ. ಹತ್ತು ಲಕ್ಷ ರೂಪಾಯಿ ವ್ಯತ್ಯಾಸಕ್ಕೆ ಪೂಜಾರಿ ಅವರು ಒಪ್ಪುತ್ತಿಲ್ಲ. ಹಣ ಬಿಡುಗಡೆ ಮಾಡುವುದಕ್ಕೆ ನಮ್ಮ ಅಡ್ಡಿಯಿಲ್ಲ. ಆದರೆ, ನಮ್ಮ ವಿರುದ್ಧದ ಪ್ರಕರಣ ರದ್ದತಿಗೆ ಅವರು ಒಪ್ಪುತ್ತಿಲ್ಲ. ಹೆಚ್ಚುವರಿಯಾಗಿ ಬಡ್ಡಿಯ ರೂಪದಲ್ಲಿ 10 ಲಕ್ಷ ಸೇರಿಸಿಕೊಡಬೇಕು ಎನ್ನುತ್ತಿದ್ದಾರೆ” ಎಂದರು.
ಇದನ್ನು ಆಲಿಸಿದ ಪೀಠವು “ಗೋವಿಂದ ಪೂಜಾರಿ ಅವರು ಹೆಚ್ಚಿಗೆ ಹಣಕ್ಕೆ ಬೇಡಿಕೆ ಇಡಲಾಗದು. ಪ್ರಕರಣ ವಜಾವೋ, ಸಂಧಾನವೋ ನೋಡಿ. ನಿಮ್ಮ ಹಣ ನಿಮಗೆ ಬರಬೇಕು ಅಷ್ಟೆ. ಸಂಧಾನ ಮಾಡಿಕೊಂಡು ಬನ್ನಿ” ಎಂದು ಮೌಖಿಕವಾಗಿ ಹೇಳಿ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ಮುಂದೂಡಿತು.