ಬಿಜೆಪಿ ಟಿಕೆಟ್‌ ಹಗರಣ: ಚೈತ್ರಾ ಸುದ್ದಿ ಪ್ರಕಟಿಸುವಾಗ ಕುಂದಾಪುರ ಹೆಸರು ಬಳಕೆಗೆ ಆಕ್ಷೇಪಿಸಿ ದಾವೆ

ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಶಾಪ್‌ ಹೋಟೆಲ್ ಮಾಲೀಕರು ಆದ ಕುಂದಾಪುರ ಮೂಲದ ಗಣೇಶ್‌ ಶೆಟ್ಟಿ ದಾವೆ ಹೂಡಿದ್ದಾರೆ. ದಾವೆಯು ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಬೇಕಿದೆ.
Chaitra Kundapur
Chaitra Kundapur
Published on

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಐದು ಕೋಟಿ ರೂಪಾಯಿ ಪಡೆದು ಉದ್ಯಮಿಯೊಬ್ಬರಿಗೆ ವಂಚಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಹಿಂದೂಪರ ಸಂಘಟನೆಯ ಚೈತ್ರಾ ಅವರಿಗೆ ಸಂಬಂಧಿಸಿದಂತೆ ಸುದ್ದಿ ಪ್ರಕಟ ಹಾಗೂ ಪ್ರಸಾರ ಮಾಡುವಾಗ ಕುಂದಾಪುರ ಹೆಸರು ಉಲ್ಲೇಖಿಸದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರುವಂತೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ ವ್ಯಕ್ತಿಯೊಬ್ಬರು ದಾವೆ ಹೂಡಿದ್ದಾರೆ.

ಬೆಂಗಳೂರಿನ ಬಸವನಗುಡಿಯಲ್ಲಿ ಕಾಫಿ ಶಾಪ್‌ ಹೋಟೆಲ್ ಮಾಲೀಕರು ಆದ ಕುಂದಾಪುರ ಮೂಲದ ಗಣೇಶ್‌ ಶೆಟ್ಟಿ ಮೂಲ ದಾವೆ ಹೂಡಿದ್ದಾರೆ. ದಾವೆಯು ಇನ್ನಷ್ಟೇ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಬೇಕಿದೆ.

ಕುಂದಾಪುರವು ಉಡುಪಿ ಜಿಲ್ಲೆಯ ಪ್ರಮುಖ ಪಟ್ಟಣವಾಗಿದೆ. 10 ಮತ್ತು 11ನೇ ಶತಮಾನದಲ್ಲಿ ಅಲುಪು ರಾಜವಂಶಸ್ಥರಾದ ಕುಂದವರ್ಮ ಅವರು ಕುಂದಾಪುರದಲ್ಲಿ ಆಳ್ವಿಕೆ ನಡೆಸಿದ್ದು. ಐತಿಹಾಸಿಕ ಕುಂದೇಶ್ವರ ದೇವಸ್ಥಾನ ಸಹ ನಿರ್ಮಿಸಿದ್ದಾರೆ. ಕದಂಬರು, ಚಾಲುಕ್ಯ, ಹೊಯ್ಸಳ, ವಿಜಯನಗರ ಅರಸರು ಕುಂದಾಪುರ ಪಟ್ಟಣದ ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಂತರ ಪೋರ್ಚಗೀಸರು, ಜರ್ಮನ್ನರು, ಟಿಪ್ಪುಸುಲ್ತಾನ್‌, ಬ್ರಿಟಿಷರು ಕುಂದಾಪುರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅನೇಕ ಐತಿಹಾಸಿಕ ದೇವಸ್ಥಾಗಳಿಂದ ಕುಂದಾಪುರ ಖ್ಯಾತಿ ಪಡೆದಿದೆ ಎಂದು ದಾವೆಯಲ್ಲಿ ವಿವರಿಸಲಾಗಿದೆ.

ವಂಚನೆ ಆರೋಪದಲ್ಲಿ ಚೈತ್ರಾ ಹಾಗೂ ಇತರೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೈತ್ರ ಸಹ ಕುಂದಾಪುರದ ಮೂಲದವರಾಗಿದ್ದಾರೆ. ಆದರೆ, ಈ ವಂಚನೆ ಪ್ರಕರಣಕ್ಕೆ ಮಾಧ್ಯಮಗಳು ಚೈತ್ರಾ ಹೆಸರು ಬಳುಸುವಾಗ ಕುಂದಾಪುರ ಎಂಬುದಾಗಿ ಉಲ್ಲೇಖಿಸುತ್ತಿವೆ. ಇದರಿಂದ ಕುಂದಾಪುರ ಪಟ್ಟಣದ ಹೆಸರು ಮತ್ತು ಘನತೆಗೆ ಧಕ್ಕೆಯಾಗುತ್ತಿದೆ. ಕುಂದಾಪುರ ಎಂದು ಉಲ್ಲೇಖಿಸಿ ಮಾಧ್ಯಮಗಳು ಸುದ್ದಿ ಪ್ರಕಟಿಸುವುದು ಅವಹೇಳನಕಾರಿಯಾಗಿದೆ ಎಂದು ದಾವೆಯಲ್ಲಿ ಆಕ್ಷೇಪಿಸಲಾಗಿದೆ.

Also Read
ಚೈತ್ರಾ ವಂಚನೆ ಪ್ರಕರಣ: ಅಭಿನವ ಹಾಲಶ್ರೀಯನ್ನು 10 ದಿನ ಸಿಸಿಬಿ ಕಸ್ಟಡಿಗೆ ನೀಡಿದ ಎಸಿಎಂಎಂ ನ್ಯಾಯಾಲಯ

ಮಾಧ್ಯಮಗಳು ತಮ್ಮ ಟಿಆರ್‌ಪಿ, ಲೈಕ್ಸ್ ಮತ್ತು ವ್ಯೂಸ್‌ ಹೆಚ್ಚಿಸುವ ಉದ್ದೇಶದಿಂದ ಕುಂದಾಪುರ ಹೆಸರು ಬಳಸುತ್ತಿವೆ. ಕುಂದಾಪುರ ಪಟ್ಟಣದಲ್ಲಿ ಜನಿಸಿರುವ ದಾವೆದಾರರು ಕಳೆದ 23 ವರ್ಷಗಳಿಂದ ಬೆಂಗಳೂರಿನ ಬಸನಗುಡಿಯಲ್ಲಿ ಕಾಫಿ ಶಾಪ್‌ ನಡೆಸುತ್ತಿದ್ದಾರೆ. ನಿತ್ಯ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಶಾಪ್‌ಗೆ ಭೇಟಿ ನೀಡುತ್ತಾರೆ. ಚೈತ್ರಾ ಪ್ರಕರಣ ಬೆಳಕಿಗೆ ಬಂದ ನಂತರ ಗ್ರಾಹಕರು ಕುಂದಾಪುರ ಬಗ್ಗೆ ವಿಚಾರಿಸತೊಡಗಿದ್ದಾರೆ. ಇದರಿಂದ ಕುಂದಾಪುರ ದೂಷಣೆಗೆ ಒಳಗಾಗುತ್ತಿದೆ. ಈ ಒಂದು ಘಟನೆಯಿಂದ ಅಲ್ಲಿನ ಭವಿಷ್ಯದ ಪೀಳಿಗೆಯನ್ನು ಕೆಟ್ಟ ದೃಷ್ಟಿಯಿಂದ ನೋಡುವಂತಾಗಬಹುದು ಎಂದು ದಾವೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಚೈತ್ರಾ ಬಗ್ಗೆ ಸುದ್ದಿ ಪ್ರಸಾರ ಮಾಡುವಾಗ ಕುಂದಾಪುರ ಎಂದು ಉಲ್ಲೇಖಿಸದಂತೆ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ ಮಾಡಬೇಕು. ಈಗಾಗಲೇ ಕುಂದಾಪುರ ಹೆಸರು ಉಲ್ಲೇಖಿಸಿ ಪ್ರಸಾರ ಮಾಡಿರುವ ಸುದ್ದಿ, ವೀಡಿಯೋ, ಲೇಖನ, ಪೋಸ್ಟ್, ಲಿಂಕ್‌ಗಳನ್ನು ಶಾಶ್ವತವಾಗಿ ತೆಗೆದುಹಾಕುವಂತೆ ಸೂಚಿಸಬೇಕು ಎಂದು ದಾವೆದಾರ ಕೋರಿದ್ದಾರೆ. ದಾವೆದಾರ ಪರ ವಕೀಲ ಎಚ್‌ ಪವನ ಚಂದ್ರ ಶೆಟ್ಟಿ ವಕಾಲತ್ತು ಹಾಕಿದ್ದಾರೆ.

Kannada Bar & Bench
kannada.barandbench.com