ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಟ್ವಿಟರ್ ಮರುಪರಿಶೀಲನಾ ಸಮಿತಿಯ ಮುಂದೆ ಹಾಜರಾಗಿಲ್ಲ ಎಂದು ಕೇಂದ್ರ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
ವ್ಯಕ್ತಿಗತವಾಗಿ ಖಾತೆಗಳನ್ನು ನಿಷೇಧಿಸುವಂತೆ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಜಾರಿ ಮಾಡಿರುವ ನಿರ್ಬಂಧ ಆದೇಶಗಳನ್ನು ಪ್ರಶ್ನಿಸಿ ಟ್ವಿಟರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆರ್ ಶಂಕರನಾರಾಯಣ್ ಅವರು ಟ್ವಿಟರ್‌ನಂಥ ಮಧ್ಯಸ್ಥ ವೇದಿಕೆಗಳ ಜವಾಬ್ದಾರಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇಂಗ್ಲೆಂಡ್ ಮತ್ತು ಭಾರತದಲ್ಲಿನ ಕಾನೂನುಗಳ ವ್ಯತ್ಯಾಸವನ್ನು ಪೀಠಕ್ಕೆ ವಿವರಿಸಲಾಯಿತು.
ಆಕ್ಷೇಪಾರ್ಹವಾದ ವಿಚಾರ ಪ್ರಕಟಿಸಿದ್ದಕ್ಕಾಗಿ ಯಾರೆಲ್ಲರ ಖಾತೆಗಳನ್ನು ನಿರ್ಬಂಧಿಸಲಾಗಿದೆ ಎಂಬುದರ ಮಾಹಿತಿಯನ್ನು ನ್ಯಾಯಾಲಯಕ್ಕೆ ಸರ್ಕಾರ ನೀಡಿತು. ಯಾವ ವಿಧಾನದಲ್ಲಿ ಟ್ವಿಟರ್‌ಗೆ ನೋಟಿಸ್ ನೀಡಲಾಗಿದೆ ಎಂಬುದನ್ನೂ ಪೀಠಕ್ಕೆ ವಿವರಿಸಲಾಯಿತು. ಇನ್ನಷ್ಟು ವಿಶ್ಲೇಷಣೆ ಮತ್ತು ವಿವರಣೆ ನೀಡಲು ಕೇಂದ್ರ ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ವಿಚಾರಣೆ ಮುಂದೂಡಲಾಯಿತು.