BTC and Karnataka HC
BTC and Karnataka HC

ಬೆಂಗಳೂರು ಟರ್ಫ್‌ ಕ್ಲಬ್‌ ಮೂಲಸೌಕರ್ಯ: ಕರ್ನಾಟಕ ಹೈಕೋರ್ಟ್‌ಗೆ ಪರಿಶೀಲನಾ ವರದಿ ಸಲ್ಲಿಕೆ

ಎಡಬ್ಲ್ಯುಬಿಐ ನೇಮಿಸುವ ಇನ್‌ಸ್ಪೆಕ್ಟರ್‌ ಅವರು ಬಿಟಿಸಿಯಲ್ಲಿ ಕೈಗೊಳ್ಳಲಾಗಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದರೆ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿರುವ ವಿಚಾರಗಳ ಸತ್ಯಾಸತ್ಯತೆ ತಿಳಿಯುತ್ತದೆ ಎಂದು ಹೇಳಿದ್ದ ಕ್ಯೂಪಾ.

ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ (ಬಿಟಿಸಿ) ಕುದುರೆ ಲಾಯ ನವೀಕರಣ ಮತ್ತು ಕುದುರೆಗಳ ಯೋಗ ಕ್ಷೇಮ ಸುಧಾರಣೆಗೆ ಸಂಬಂಧಿಸಿದಂತೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (ಎಡಬ್ಲ್ಯುಬಿಐ) ನೇಮಿಸಿದ್ದ ಇನ್‌ಸ್ಪೆಕ್ಟರ್‌ ಪರಿಶೀಲನೆ ನಡೆಸಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಎಡಬ್ಲ್ಯುಬಿಐ ಈಚೆಗೆ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಬಿಟಿಸಿಯಲ್ಲಿ ಓಟದ ಪ್ರದರ್ಶನಕ್ಕೆ (ಪರ್ಫಾರ್ಮಿಂಗ್) ಬಳಸಲಾಗುವ ಪ್ರಾಣಿಗಳ ದೃಷ್ಟಿಯಿಂದ ರೂಪಿಸಲಾಗಿರುವ ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದು ಕಂಪ್ಯಾಷನ್ ಆನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯೂಪಾ) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು.

“ನ್ಯಾಯಾಲಯದ ನಿರ್ದೇಶನದಂತೆ ಎಡಬ್ಲ್ಯುಬಿಐ ನೇಮಿಸಿದ್ದ ಇನ್‌ಸ್ಪೆಕ್ಟರ್‌ ಅವರು ಜನವರಿ 19ರಂದು ಪರಿಶೀಲನೆ ನಡೆಸಿದ್ದು, ಫೆಬ್ರವರಿ 15ರಂದು ಹೈಕೋರ್ಟ್‌ನ ರಿಜಿಸ್ಟ್ರಿಗೆ ವರದಿ ಸಲ್ಲಿಸಿದ್ದಾರೆ. ಅದನ್ನು ಅಧಿಕೃತವಾಗಿ ಪೀಠದ ಮುಂದೆ ಮಂಡಿಸಲಾಗಿಲ್ಲ. ಇನ್‌ಸ್ಪೆಕ್ಟರ್‌ ಅವರ ಪರಿಶೀಲನಾ ವರದಿಯನ್ನು ಬೆಂಗಳೂರು ಟರ್ಫ್‌ ಕ್ಲಬ್‌ ಪ್ರತಿನಿಧಿಸಿರುವ ವಕೀಲರಿಗೆ ಪೂರೈಸಬೇಕು” ಎಂದು ಪೀಠವು ಆದೇಶ ಮಾಡಿದ್ದು, ವಿಚಾರಣೆಯನ್ನು ಮಾರ್ಚ್‌ 7ಕ್ಕೆ ಮುಂದೂಡಿದೆ.

ಕಳೆದ ವಿಚಾರಣೆಯ ವೇಳೆ ಪೀಠವು “ಅರ್ಜಿದಾರರ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಕುದುರೆ ಲಾಯಗಳ ನವೀಕರಣ ಸೇರಿ ಕುದುರೆಗಳ ಯೋಗಕ್ಷೇಮ ಸುಧಾರಣೆಗೆ ಮೂಲಸೌಕರ್ಯ ಕಲ್ಪಿಸಲಾಗಿದ್ದು, ಬಹುತೇಕ ನಿರ್ದೇಶನಗಳನ್ನು ಪಾಲಿಸಲಾಗಿದೆ ಎಂದು ಬಿಟಿಸಿ ಅಫಿಡವಿಟ್‌ ಸಲ್ಲಿಸಿದೆ. ಬಿಟಿಸಿಯಲ್ಲಿ ಕೈಗೊಳ್ಳಲಾಗಿರುವ ಸುಧಾರಣಾ ಕ್ರಮಗಳ ಪರಿಶೀಲನೆಗೆ ಎಡಬ್ಲ್ಯುಬಿಐ ಇನ್‌ಸ್ಪೆಕ್ಟರ್‌ ನೇಮಿಸಿ ಮೂರು ವಾರಗಳಲ್ಲಿ ವರದಿ ಸಲ್ಲಿಸಬೇಕು” ಎಂದು ಆದೇಶಿಸಿತ್ತು.

ಬಿಟಿಸಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಸ್‌ ಎಸ್‌ ನಾಗಾನಂದ್‌ ಅವರು “ಬಿಟಿಸಿಯಲ್ಲಿ ಸುಧಾರಣೆಯ ಮಾಹಿತಿಯನ್ನು ಪ್ರತಿವಾದಿಗಳಿಗೆ ನೀಡಲಾಗಿದೆ. ಕುದುರೆ ಲಾಯಗಳ ಮೇಲ್ಛಾವಣಿ ಬದಲಾಯಿಸಬೇಕು ಎಂದು ಅರ್ಜಿದಾರರು ಹೇಳಿದ್ದಾರೆ. ಈ ಮಧ್ಯೆ, ನಾವು ಕುದುರೆಗಳ ಸಂಖ್ಯೆಯನ್ನೂ ಕಡಿತಗೊಳಿಸಿದ್ದೇವೆ. ಲಾಯದ ಕೆಲಸ ನಡೆಸಲು ವಸ್ತುಗಳು ಸಿಗುತ್ತಿಲ್ಲ. ಈ ಕೆಲಸ ಮಾಡಲು ಕನಿಷ್ಠ 1ರಿಂದ 1.5 ವರ್ಷ ಬೇಕಿದೆ” ಎಂದಿದ್ದರು.

Also Read
ಟರ್ಫ್‌ ಕ್ಲಬ್‌ ಸೌಲಭ್ಯ ಪರಿಶೀಲನೆಗೆ ಇನ್‌ಸ್ಪೆಕ್ಟರ್‌ ನೇಮಿಸಲು ಎಡಬ್ಲುಬಿಐಗೆ ಹೈಕೋರ್ಟ್‌ ನಿರ್ದೇಶನ

ಕ್ಯೂಪಾ ಪ್ರತಿನಿಧಿಸಿದ್ದ ವಕೀಲ ಅಲ್ವಿನ್‌ ಸೆಬಾಸ್ಟಿಯನ್‌ ಅವರು “ಇನ್ಸ್‌ಪೆಕ್ಟರ್ ಡಾ. ಕ್ಯಾಪ್ಟನ್‌ ರವಿ ರಾಯದುರ್ಗ ಅವರ ವರದಿಯಲ್ಲಿ ಸುಸಜ್ಜಿತವಾದ ಶಸ್ತ್ರಚಿಕಿತ್ಸಾ ವ್ಯವಸ್ಥೆ ಹೊಂದಬೇಕು ಎಂದು ಹೇಳಲಾಗಿದೆ. ಈ ಬಗ್ಗೆ ಬಿಟಿಸಿ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಪ್ರಸ್ತಾಪಿಸಲಾಗಿಲ್ಲ. ಮೂಲಸೌಕರ್ಯ ಕಲ್ಪಿಸಲು ಬಿಟಿಸಿಗೆ ಒಂದೂವರೆ ವರ್ಷ ಬೇಕು ಎಂದು ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಹಾಲಿ ಇರುವ ಕುದುರೆಗಳಿಗೆ ಪುನರ್ವಸತಿ ಎಲ್ಲಿ ಕಲ್ಪಿಸಲಾಗುತ್ತದೆ? ಈ ನಡುವೆ ರೇಸ್‌ ಮುಂದುವರಿಯುತ್ತದೆ. ಇದೆನ್ನೆಲ್ಲಾ ಹೇಗೆ ನಿಭಾಯಿಸಲಾಗುತ್ತದೆ. ಎಡಬ್ಲುಬಿಐ ನೇಮಿಸುವ ಇನ್‌ಸ್ಪೆಕ್ಟರ್‌ ಅವರು ಬಿಟಿಸಿಯಲ್ಲಿ ಕೈಗೊಳ್ಳಲಾಗಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದರೆ ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿರುವ ವಿಚಾರಗಳ ಸತ್ಯಾಸತ್ಯತೆ ತಿಳಿಯುತ್ತದೆ” ಎಂದಿದ್ದರು.

Related Stories

No stories found.
Kannada Bar & Bench
kannada.barandbench.com