ಬೆಂಗಳೂರಿನ ಬಿಜೆಪಿ ಕಚೇರಿ ಮುಂದೆ ಸಂಭವಿಸಿದ್ದ ಸ್ಫೋಟ ಪ್ರಕರಣ: ಕಿಚನ್‌ ಬುಹಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

“ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆ ರಕ್ಷಿಸುವ ಕರ್ತವ್ಯಗಳಿಗೆ ವಿರುದ್ಧವಾಗಿ ಆರೋಪಿ ವರ್ತಿಸಿದ್ದಾನೆ” ಎಂದಿರುವ ಹೈಕೋರ್ಟ್‌.
BJP
BJP
Published on

ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿ ಎದುರು 2013ರಲ್ಲಿ ನಡೆದಿದ್ದ ಬಾಂಬ್‌ ಸ್ಫೋಟ ಪ್ರಕರಣದ ಮೂರನೇ ಆರೋಪಿಯಾದ ತಮಿಳುನಾಡು ತಿರುನವೆಲ್ಲಿ ನಿವಾಸಿ ಕಿಚನ್‌ ಬುಹಾರಿ ಅಲಿಯಾಸ್‌ ಕಿಚನ್‌ ಬುಗಾರಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ನಿರಾಕರಿಸಿದೆ.

ಪ್ರಕರಣ ಸಂಬಂಧ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ 2024ರ ಫೆಬ್ರವರಿ 23ರಂದು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯ ಹೊರಡಿಸಿದ ಆದೇಶ ರದ್ದುಪಡಿಸಬೇಕು ಮತ್ತು ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ಕಿಚನ್‌ ಬುಹಾರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ ಎಸ್‌ ಮುದಗಲ್ ಮತ್ತು ಟಿ ವೆಂಕಟೇಶ್‌ ನಾಯ್ಕ್‌ ಅವರ ವಿಭಾಗೀಯ ಪೀಠವು ವಜಾಗೊಳಿಸಿದೆ.

“ಮೇಲ್ಮನವಿದಾರ ಪ್ರಕರಣದ ಮಾಸ್ಟರ್‌ ಮೈಂಡ್‌ ಆಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಆರೋಪ ಪಟ್ಟಿಯ ದಾಖಲೆಗಳು ಮೇಲ್ನೋಟಕ್ಕೆ ತೋರಿಸುತ್ತವೆ. ಭಾರತದ ಸಾರ್ವಭೌಮತ್ವ, ಏಕತೆ ಮತ್ತು ಸಮಗ್ರತೆ ರಕ್ಷಿಸುವ ಕರ್ತವ್ಯಗಳಿಗೆ ವಿರುದ್ಧವಾಗಿ ಆರೋಪಿ ವರ್ತಿಸಿದ್ದಾನೆ. ಭಾರತದಲ್ಲಿ ಜನತೆ ಧಾರ್ಮಿಕ ವೈವಿಧ್ಯತೆಗಳನ್ನು ಮೀರಿ ಭ್ರಾತೃತ್ವದ ಮನೋಭಾವ ಹೊಂದಿದ್ದಾರೆ, ಸಂಯೋಜಿತ ಸಂಸ್ಕೃತಿ  ಗೌರವಿಸಲು ಮತ್ತು ಸಂರಕ್ಷಿಸಲು, ಸಾರ್ವಜನಿಕ ಆಸ್ತಿ ರಕ್ಷಿಸಲು ಮತ್ತು ಹಿಂಸೆ ತ್ಯಜಿಸಲು ಮೇಲ್ಮನವಿದಾರ ವಿಫಲನಾಗಿದ್ದಾನೆ ಎಂಬುದನ್ನು ದಾಖಲೆಗಳು ತೋರಿಸುತ್ತವೆ. ಹೀಗಾಗಿ, ಆರೋಪಿಯ ಜಾಮೀನು ಅರ್ಜಿ ತಿರಸ್ಕರಿಸಿರುವ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ದೋಷಗಳಿಲ್ಲ” ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಮಲ್ಲೇಶ್ವರದಲ್ಲಿ ಬಿಜೆಪಿ ಕಚೇರಿ ಎದುರು 2013ರ ಏಪ್ರಿಲ್‌ 17ರಂದು ಬಾಂಬ್‌ ಸ್ಫೋಟ ಪ್ರಕರಣ ಸಂಭವಿಸಿತ್ತು. ವೈಯಾಲಿಕಾವಲ್‌ ಠಾಣಾ ಪೊಲೀಸರು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣವು ಎನ್‌ಐಎ ತನಿಖೆಗೆ ವರ್ಗಾವಣೆಯಾಗಿತ್ತು. ಪ್ರಕರಣ ಸಂಬಂಧ ಒಟ್ಟು 23 ಆರೋಪಿಗಳನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಸದ್ಯ ಪ್ರಕರಣವನ್ನು ಎನ್‌ಐಎ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ.

ಪ್ರಕರಣದಲ್ಲಿ ಕಿಚನ್‌ ಬುಹಾರಿ ಮೂರನೇ ಆರೋಪಿಯಾಗಿದ್ದು, ನಿಷೇಧಿತ ಸಂಘಟನೆಯ ಅಲ್‌-ಉಮ್ಮಾ ಸಂಘಟನೆಯ ಸದಸ್ಯನಾಗಿದ್ದು, ಮೂಲಭೂತ ಧಾರ್ಮಿಕ ಸಿದ್ಧಾಂತಗಳಿಂದ ಪ್ರೇರಿತಗೊಂಡು ಜಿಹಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದ. ಭಾರತದ ವಿರುದ್ಧ ಯುದ್ಧ ಮಾಡಲು ಸಂಚು ರೂಪಿಸಿದ್ದ. ಈ ಪ್ರಕರಣದ ಮಾಸ್ಟರ್ ಮೈಂಡ್‌ ಕಿಚನ್‌ ಬುಹಾರಿಯಾಗಿದ್ದು, ಬಾಂಬ್‌ ಸ್ಫೋಟಿಸುವ ಹೊಣೆ ಹೊತ್ತಿದ್ದ. ಇತರೆ ಆರೋಪಿಗಳಿಂದ ಸ್ಫೋಟಕ ಸಾಮಗ್ರಿ ಖರೀದಿಸಿ ಸಂಗ್ರಹಣೆ ಮಾಡಿದ್ದ. ಅದನ್ನು ತಮಿಳುನಾಡಿನ ಕೊಯಮತ್ತೂರಿನಿಂದ ಈರೋಡ್‌ಗೆ ಕಾರಿನಲ್ಲಿ ಸಾಗಿಸಿ ಒಂಭನೇ ಆರೋಪಿಗೆ ನೀಡಿದ್ದ ಎಂಬ ಆರೋಪ ಮೇಲ್ಮನವಿದಾರ ಮೇಲಿದೆ.

ಘಟನೆಯಲ್ಲಿ 12 ಕೆಎಸ್‌ಆರ್‌ಪಿ ಪೊಲೀಸ್‌ ಸಿಬ್ಬಂದಿ, ಆರು ನಾಗರಿಕರು ಗಾಯಗೊಂಡಿದ್ದರು. ಹಲವು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಹಾನಿಗೊಳಗಾಗಿದ್ದವು. ಅರ್ಜಿದಾರರ ಪರವಾಗಿ ವಕೀಲ ಎಸ್‌ ಬಾಲಕೃಷ್ಣನ್‌, ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ವಿಜಯಕುಮಾರ್‌ ಮಜಗೆ ವಾದಿಸಿದರು.

Attachment
PDF
Kichan Bhuhari Vs State of Karnataka
Preview
Kannada Bar & Bench
kannada.barandbench.com