ಬಿಜೆಪಿ ಕಚೇರಿ ಬಳಿ ಬಾಂಬ್‌ ಸ್ಫೋಟಕ್ಕೆ ಪರಿಕರ ಪೂರೈಸಿದ್ದ ಆರೋಪಿಯ ಜಾಮೀನು ಮನವಿ ವಜಾ ಮಾಡಿದ ಎನ್‌ಐಎ ನ್ಯಾಯಾಲಯ

ಬಂಧನದ ಸಂದರ್ಭದಲ್ಲಿ ತಾನು ಪಂಚಾಯಿತಿಯೊಂದರ ಉಪಾಧ್ಯಕ್ಷನಾಗಿದ್ದು, ಬಿಜೆಪಿಯ ಮಿತ್ರ ಪಕ್ಷವಾದ ಎಐಎಡಿಎಂಕೆ ಸದಸ್ಯನಾಗಿದ್ದೇನೆ; ಬಿಜೆಪಿಯ ಯಾವುದೇ ನಿರ್ಧಾರಗಳಿಂದ ನಾನು ಬಾಧಿತನಾದವನಲ್ಲ ಎಂದು ಆರೋಪಿಯ ಜಾಮೀನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
City civil court, Bengaluru
City civil court, Bengaluru

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯ ಸಮೀಪ 2013ರಲ್ಲಿ ನಡೆದಿದ್ದ ಬಾಂಬ್‌ ಸ್ಫೋಟದ ಪ್ರಕರಣದ ಆರೋಪಿಗೆ ಜಾಮೀನು ನೀಡಲು ಎನ್‌ಐಎ ವಿಶೇಷ ನ್ಯಾಯಾಲಯ ಈಚೆಗೆ ನಿರಾಕರಿಸಿದೆ.

ತಮಿಳುನಾಡಿನ ತಿರುನಲ್ವೇಲಿಯ ಪದುಕುಡಿ ಗ್ರಾಮದ ನಿವಾಸಿ ಡೇನಿಯಲ್‌ ಪ್ರಕಾಶ್‌ ಸಲ್ಲಿಸಿದ್ದ ಜಾಮೀನು ಮನವಿಯ ವಿಚಾರಣೆಯನ್ನು 69ನೇ ಹೆಚ್ಚುವರಿ ನಗರ ಸಿವಿಲ್‌ ಮತ್ತು ಸತ್ರ ಹಾಗೂ ರಾಷ್ಟ್ರೀಯ ತನಿಖಾ ದಳದ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಗಂಗಾಧರ ಸಿ ಎಂ ಅವರು ವಜಾ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಅಡಿ ತಮಿಳುನಾಡು ಸರ್ಕಾರವು ನಿಷೇಧಿಸಿರುವ ಅಲ್‌ ಉಮ್ಮಾ ಸಂಘಟನೆಯ ಸದಸ್ಯರಾದ ಆರೋಪಿಗಳು ವಿವಿಧ ಕಡೆ ಬಾಂಬ್‌ ಸ್ಫೋಟ ನಡೆಸುವ ಮೂಲಕ ಭಾರತದ ಮೇಲೆ ಯುದ್ಧ ಸಾರಿದ್ದರು. ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು 2012 ಮತ್ತು 2013ರಲ್ಲಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಆರೋಪಿಗಳು ಹಲವು ಸಭೆಗಳನ್ನು ನಡೆಸಿದ್ದರು.

ಈ ಕಾರ್ಯಯೋಜನೆ ಭಾಗವಾಗಿ 2013ರ ಏಪ್ರಿಲ್‌ 17 ಬೆಳಗ್ಗೆ 10.20ರ ಸುಮಾರಿಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯ ಮುಂದೆ ಬಾಂಬ್‌ ಸ್ಫೋಟಿಸಿದ್ದರು. ಘಟನೆಯಲ್ಲಿ 12 ಕೆಎಸ್‌ಆರ್‌ಪಿ ಪೊಲೀಸ್‌ ಸಿಬ್ಬಂದಿ ಮತ್ತು 6 ನಾಗರಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಬಾಂಬ್‌ ಸ್ಫೋಟ ಪ್ರಕರಣದಲ್ಲಿ 16ನೇ ಆರೋಪಿಗೆ 21ನೇ ಆರೋಪಿಯಾದ ಡೇನಿಯಲ್‌ ಪ್ರಕಾಶ್‌ ಸ್ಫೋಟಕಗಳನ್ನು ಪೂರೈಸಿದ ಆರೋಪವಿದೆ.

ಐಪಿಸಿ ಸೆಕ್ಷನ್‌ಗಳಾದ 307, 332, 333, 435, ಸ್ಫೋಟಕ ಪರಿಕರಗಳ ಕಾಯಿದೆ 1908ರ ಸೆಕ್ಷನ್‌ಗಳಾದ 3 ಮತ್ತು 5, ಸಾರ್ವಜನಿಕ ಆಸ್ತಿಗೆ ಹಾನಿ ಕಾಯಿದೆ ಸೆಕ್ಷನ್‌ 4 ಅಡಿ ಆರೋಪಿ ಡೇನಿಯಲ್‌ ಪ್ರಕಾಶ್‌ ವಿರುದ್ಧ ಆರೋಪ ನಿಗದಿ ಮಾಡಲಾಗಿದೆ.

ಬಂಧನದ ಸಂದರ್ಭದಲ್ಲಿ ತಾನು ಪಂಚಾಯಿತಿಯೊಂದರ ಉಪಾಧ್ಯಕ್ಷನಾಗಿದ್ದು, ಬಿಜೆಪಿಯ ಮಿತ್ರ ಪಕ್ಷವಾದ ಎಐಎಡಿಎಂಕೆ ಸದಸ್ಯನಾಗಿದ್ದು, ಬಿಜೆಪಿಯ ಯಾವುದೇ ನಿರ್ಧಾರಗಳಿಂದ ಬಾಧಿತನಾದವನಲ್ಲ. ಕ್ರೈಸ್ತ ಧರ್ಮದ ಅನುಯಾಯಿಯಾದ ತಾನು ಚರ್ಚ್‌ನ ಸಕ್ರಿಯ ಸದಸ್ಯನಾಗಿದ್ದು, ಯಾವುದೇ ಕಾರಣಕ್ಕೂ ಉಗ್ರ ಸಂಘಟನೆಯಾದ ಅಲ್‌ ಉಮ್ಮಾ ಸದಸ್ಯನಲ್ಲ. ಪ್ರಕರಣದ ವಿಚಾರಣೆ ಆರಂಭವಾಗಿದ್ದು, ಪ್ರಾಸಿಕ್ಯೂಷನ್‌ ಬಳಿ 200 ಸಾಕ್ಷ್ಯಗಳಿವೆ. ಈವರೆಗೆ ಒಂದೂ ಸಾಕ್ಷಿಯ ವಿಚಾರಣೆ ಮುಗಿದಿಲ್ಲ. ಸದ್ಯಕ್ಕೆ ವಿಚಾರಣೆ ಪೂರ್ಣಗೊಳ್ಳುವ ಯಾವುದೇ ಸುಳಿವಿಲ್ಲ. ಹೀಗಾಗಿ ತನಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಇದಕ್ಕೆ ಪ್ರಾಸಿಕ್ಯೂಷನ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಆರೋಪಿಯನ್ನು ಬಿಡುಗಡೆ ಮಾಡಿದರೆ ಸಾಕ್ಷಿಗಳನ್ನು ಬೆದರಿಸುವ, ಪರಾರಿಯಾಗುವ ಸಾಧ್ಯತೆ ಇದೆ. ಅಲ್ಲದೆ, ಆರೋಪಿಯ ವಿರುದ್ಧ ಸ್ಫೋಟಕಗಳನ್ನು ಒದಗಿಸಿರುವ ಇಂತಹದ್ದೇ ಹೀನ ಪ್ರಕರಣವೊಂದು ತಮಿಳುನಾಡಿನ ನ್ಯಾಯಾಲಯದ ಮುಂದಿದೆ ಎನ್ನುವುದನ್ನು ನ್ಯಾಯಾಲಯದ ಗಮನಕ್ಕೆ ತಂದಿತು. ಪ್ರಾಸಿಕ್ಯೂಷನ್‌ ವಾದವನ್ನು ಪರಿಗಣಿಸಿದ ನ್ಯಾಯಾಲಯವು ಆರೋಪಿಯು ತನ್ನ ನ್ಯಾಯಿಕ ವ್ಯಾಪ್ತಿಯಿಂದ ಹೊರಗಿರುವ ತಮಿಳುನಾಡಿನ ಶಾಶ್ವತ ನಿವಾಸಿ ಎನ್ನವುದನ್ನೂ ಸಹ ಗಣನೆಗೆ ತೆಗೆದುಕೊಂಡಿತು. ಈ ಎಲ್ಲ ಆಧಾರದಲ್ಲಿ ಅಂತಿಮವಾಗಿ ಡೇನಿಯಲ್‌ ಪ್ರಕಾಶ್‌ ಜಾಮೀನು ಮನವಿಯನ್ನು ನ್ಯಾಯಾಲಯ ವಜಾ ಮಾಡಿತು.

Attachment
PDF
State of Karnataka V. Daniel Prakash.pdf
Preview

Related Stories

No stories found.
Kannada Bar & Bench
kannada.barandbench.com