Kangana_Ranaut
Kangana_Ranaut

ಕಂಗನಾ V. ಬಿಎಂಸಿ: ಕಟ್ಟಡ ಧ್ವಂಸ ಕಾರ್ಯಾಚರಣೆ ಹಿಂದೆ ದುರುದ್ದೇಶ ಗೋಚರಿಸುತ್ತದೆ ಎಂದ ಬಾಂಬೆ ಹೈಕೋರ್ಟ್‌

ಕಂಗನಾ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಕಟ್ಟಡ ತೆರವುಗೊಳಿಸುವ ಯಾವುದೇ ಚಟುವಟಿಕೆ ನಡೆಸದಂತೆ ಬಿಎಂಸಿಗೆ ಸೂಚಿಸಿದೆ. ಪ್ರಕರಣದ ವಿವರವಾದ ವಿಚಾರಣೆ ಗುರುವಾರ ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿದೆ.
Published on

ನಟಿ ಕಂಗನಾ ರನೌತ್ ಅವರಿಗೆ ಸೇರಿದ ಬಾಂದ್ರಾದಲ್ಲಿನ ಬಂಗಲೆ ಕೆಡವದಂತೆ ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಗೆ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ.

ನ್ಯಾಯಮೂರ್ತಿಗಳಾದ ಎಸ್.ಜೆ. ಕಥಾವಲ್ಲಾ ಮತ್ತು ಆರ್.ಐ. ಚಾಗ್ಲಾ ಅವರಿದ್ದ ನ್ಯಾಯಪೀಠ ಈ ಕುರಿತು ಬುಧವಾರ ವಿಚಾರಣೆ ನಡೆಸಿತು. ಮೇಲ್ನೋಟಕ್ಕೇ ಕಟ್ಟಡ ಧ್ವಂಸದ ಕಾರ್ಯಾಚರಣೆಯ ಹಿಂದೆ ದುರುದ್ದೇಶವಿರುವುದು ಕಂಡುಬರುತ್ತದೆ ಎಂದು ಪೀಠವು ಹೇಳಿತು. ‌

ಮುಂದುವರೆದು, “ಇದೇ ರೀತಿಯ ತ್ವರಿತತೆಯಿಂದ ಬೃಹನ್‌ ಮುಂಬೈ ಮುನಿಸಿಪಲ್‌ ಕಾರ್ಪೊರೇಷನ್‌ ಏನಾದರೂ ನಗರದಲ್ಲಿರುವ ಅನಧಿಕೃತ ನಿರ್ಮಾಣಗಳ ತೆರವಿಗೆ ಮುಂದಾಗಿದ್ದರೆ ಈ ನಗರವು ಬೇರೆಯದೇ ಆದ ರೂಪ ಪಡೆದಿರುತ್ತಿತ್ತು,” ಎಂದು ನ್ಯಾಯಾಲಯ ಬಿಎಂಸಿಗೆ ಚಾಟಿ ಬೀಸಿತು. ಪ್ರಕರಣದ ವಿವರವಾದ ವಿಚಾರಣೆ ಗುರುವಾರ ಮಧ್ಯಾಹ್ನ 3ಗಂಟೆಗೆ ನಿಗದಿಯಾಗಿದೆ.

ವರದಿಗಳ ಪ್ರಕಾರ, ಬುಧವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಕಟ್ಟಡ ತೆರವು ಕಾರ್ಯ ಆರಂಭವಾಯಿತು.

ಬಂಗಲೆಯ ಆವರಣದಲ್ಲಿ ಅನುಮತಿ ಪಡೆಯದೇ ಅನೇಕ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಬಿಎಂಸಿ ನೋಟಿಸ್ ನೀಡಿತ್ತು. ಆದರೆ ಕಂಗನಾ ಇದನ್ನು ನಿರಾಕರಿಸಿದ್ದರು. ತಾವು ಮಹಾರಾಷ್ಟ್ರದ ಶಿವಸೇನೆ ಆಡಳಿತದ ವಿರುದ್ಧ ಧ್ವನಿ ಎತ್ತಿದ ಪರಿಣಾಮ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

Kannada Bar & Bench
kannada.barandbench.com