ಚಲನಚಿತ್ರದಲ್ಲಿನ ಆಕ್ಷೇಪಾರ್ಹ ಭಾಗ ತೆಗೆಯಲು 'ಹಮಾರೆ ಬಾರಾ' ಚಿತ್ರದ ನಿರ್ಮಾಪಕರು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ [ಅಜರ್ ಬಾಷಾ ತಾಂಬೋಲಿ ಮತ್ತು ರವಿ ಎಸ್ ಗುಪ್ತಾ ಇನ್ನಿತರರ ನಡುವಣ ಪ್ರಕರಣ].
ಸಿನಿಮಾ ವೀಕ್ಷಿಸಿದ ನ್ಯಾಯಮೂರ್ತಿಗಳಾದ ಬಿ ಪಿ ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರಿದ್ದ ಪೀಠ ಕೆಲ ಬದಲಾವಣೆಗಳನ್ನು ಸೂಚಿಸಿತು. ಇದಕ್ಕೆ ಚಿತ್ರ ತಯಾರಕರು ಮತ್ತು ಅರ್ಜಿದಾರರಿಬ್ಬರೂ ಒಪ್ಪಿದರು.
ನ್ಯಾಯಾಲಯ ಸೂಚಿಸಿದಂತೆ ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು ಮತ್ತು ಕೇಂದ್ರೀಯ ಚಲನಚಿತ್ರ ಪ್ರಮಾಣಪತ್ರ ಮಂಡಳಿಯಿಂದ (ಸಿಬಿಎಫ್‌ಸಿ) ಪ್ರಮಾಣಪತ್ರ ಪಡೆಯಲಾಗುವುದು ಎಂದು ತಯಾರಕರು ತಿಳಿಸಿದರು.
ಚಿತ್ರದಲ್ಲಿ ಕುರಾನ್‌ಅನ್ನು ತಿರುಚಲಾಗಿದ್ದು, ಇಸ್ಲಾಮ್ ನಂಬಿಕೆಗಳನ್ನು ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡಲಾಗಿದೆ. ಹೀಗಾಗಿ ಚಿತ್ರ ಬಿಡುಗಡೆ ನಿಷೇಧಿಸುವಂತೆ ಕೋರಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಜೂನ್ 7 ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಜೂನ್ 14ಕ್ಕೆ ಮುಂದಕ್ಕೆ ಹೋಗಿತ್ತು. ಇದೀಗ ಜೂನ್ 21 ರಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಸಿಬಿಎಫ್‌ಸಿ ಪ್ರಮಾಣಪತ್ರ ಪಡೆಯುವ ಮುನ್ನವೇ ಟ್ರೇಲರ್ ಬಿಡುಗಡೆ ಮಾಡಿದ್ದ ಚಿತ್ರದ ನಿರ್ಮಾಪಕರಿಗೆ ನ್ಯಾಯಾಲಯ ₹ 5 ಲಕ್ಷ ದಂಡ ವಿಧಿಸಿದೆ.
ಈ ತಿಂಗಳ ಆರಂಭದಲ್ಲಿ ಸಿನಿಮಾ ಬಿಡುಗಡೆ ಮುಂದೂಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆಕ್ಷೇಪಾರ್ಹ ಭಾಗಗಳನ್ನು ತೆಗೆದರಷ್ಟೇ ಚಿತ್ರ ಬಿಡುಗಡೆಗೆ ಅನುಮತಿಸಲಾಗುವುದು ಎಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆಗ ಚಿತ್ರ ಬಿಡುಗಡೆಗೆ ತಡೆ ನೀಡಿದ ಸುಪ್ರೀಂ ಕೋರ್ಟ್ ಈ ಕುರಿತಂತೆ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಹೈಕೋರ್ಟ್‌ಗೆ ಸೂಚಿಸಿತ್ತು.