ಅತ್ಯಾಚಾರ ಎಫ್ಐಆರ್ ರದ್ದು ಕೋರಿದ್ದ ಟಿ-ಸೀರಿಸ್ ಎಂಡಿ ಭೂಷಣ್ ಕುಮಾರ್‌ಗೆ ಅರ್ಜಿ ಹಿಂಪಡೆಲು ಬಾಂಬೆ ಹೈಕೋರ್ಟ್ ಅನುಮತಿ

ತನ್ನ ವಿರುದ್ಧದ ಎಫ್ಐಆರ್ ತನಿಖೆ ಮುಕ್ತಾಯಗೊಳಿಸುವಂತೆ ಕೋರಿ ಪೊಲೀಸರು ಸಲ್ಲಿಸಿದ ಬಿ- ವರದಿಯನ್ನು ಮುಂಬೈನ ಮ್ಯಾಜಿಸ್ಟ್ರೇಟ್ ಸ್ವೀಕರಿಸಿದ್ದಾರೆ ಎಂದು ಕುಮಾರ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
Bhushan Kumar and Bombay High Court
Bhushan Kumar and Bombay High Court

ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ನೀಡಿದ ಮುಕ್ತಾಯ ವರದಿಯನ್ನು ಮ್ಯಾಜಿಸ್ಟ್ರೇಟ್ ಸ್ವೀಕರಿಸಿರುವುದನ್ನು ಪರಿಗಣಿಸಿ ಅತ್ಯಾಚಾರ ಪ್ರಕರಣದಲ್ಲಿ ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಬಾಂಬೆ ಹೈಕೋರ್ಟ್ ಗುರುವಾರ ಟಿ-ಸೀರೀಸ್‌ನ ವ್ಯವಸ್ಥಾಪಕ ನಿರ್ದೇಶಕ ಭೂಷಣ್‌ ಕುಮಾರ್‌ ಅನುಮತಿಸಿದ್ದಾರೆ.

ಮುಂಬೈ ಪೊಲೀಸರು 2023 ರ ನವೆಂಬರ್ 9 ರಂದು ಸಲ್ಲಿಸಿದ ಬಿ ವರದಿಯನ್ನು (ಮುಕ್ತಾಯ ವರದಿ) ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ವೀಕರಿಸಿದ್ದಾರೆ ಎಂದು ಕುಮಾರ್ ಪರ ವಕೀಲ ನಿರಂಜನ್ ಮುಂಡರಗಿ ಅವರು ನ್ಯಾಯಮೂರ್ತಿಗಳಾದ ಪಿ ಡಿ ನಾಯಕ್ ಮತ್ತು ಎನ್‌ ಆರ್‌ ಬೋರ್ಕರ್‌ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ವಿವರಿಸಿದರು.

ಪೊಲೀಸರು ತನಿಖೆಯಲ್ಲಿ ಯಾವುದೇ ಮೇಲ್ನೋಟದ ಪುರಾವೆ ಕಂಡುಕೊಂಡಿಲ್ಲ ಅಥವಾ ಎಫ್ಐಆರ್ ಅನ್ನು ದುರುದ್ದೇಶಪೂರಿತವಾಗಿ ದಾಖಲಿಸಲಾಗಿದೆ ಎಂದು ಬಿ ವರದಿಯಲ್ಲಿ ವಿವರಿಸಲಾಗಿದೆ.

ಬಿ ವರದಿಯನ್ನು ಅಂಗೀಕರಿಸುವುದರೊಂದಿಗೆ ತನಿಖೆ ಮತ್ತು ಎಫ್ಐಆರ್ ಮುಕ್ತಾಯಗೊಳಿಸಲಾಗಿದ್ದು, ಕುಮಾರ್ ಅವರ ಎಫ್‌ಐಆರ್‌ ರದ್ದತಿ ಅರ್ಜಿಯು ಅಮಾನ್ಯವಾಗಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಪೀಠವು ಈ ವಾದ ಅಂಗೀಕರಿಸಿದ್ದು, ಅರ್ಜಿ ಹಿಂತೆಗೆದುಕೊಳ್ಳಲು ಕುಮಾರ್‌ಗೆ ಅನುಮತಿ ನೀಡಿತು.

2017ರಿಂದ ನಡೆದಿರುವ ಘಟನೆಗಳನ್ನು ಉಲ್ಲೇಖಿಸಿ ಕುಮಾರ್ ವಿರುದ್ಧ ಜುಲೈ 2021ರಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಈ ವಿಷಯ ಕುರಿತು ಅಂತಿಮ ವರದಿಯನ್ನು ಮೊದಲು 2022ರಲ್ಲಿ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.

ಸ್ಥಳೀಯ ಮುಖಂಡ ಮಲ್ಲಿಕಾರ್ಜುನ ಪೂಜಾರಿ ಅವರು ಅಂತಿಮ ವರದಿಯ ವಿರುದ್ಧ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು. ಮಹಿಳೆಗೆ (ದೂರುದಾರ) ಎಫ್ಐಆರ್ ದಾಖಲಿಸಲು ಸಹಾಯ ಮಾಡಿದ್ದರು. ಆದರೆ, ನಂತರ ಆಕೆ ಹಿಂದೆ ಸರಿದು ವಿಚಾರಣೆಯನ್ನು ಮುಕ್ತಾಯಗೊಳಿಸಲು ಒಪ್ಪಿಗೆ ನೀಡಿದರು ಎನ್ನುವ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಾಯಿತು.

ಮ್ಯಾಜಿಸ್ಟ್ರೇಟ್ ಆರಂಭದಲ್ಲಿ ಏಪ್ರಿಲ್ 2022ರಲ್ಲಿ ಅಂತಿಮ ವರದಿಯನ್ನು ತಿರಸ್ಕರಿಸಿದ್ದರು . ನಂತರ ಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. 2023ರ ಏಪ್ರಿಲ್ 26ರಂದು ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸುತ್ತಿದ್ದಾಗ ವಿಭಾಗೀಯ ಪೀಠವು ಎಫ್ಐಆರ್ ಅನ್ನು ರದ್ದುಗೊಳಿಸಲು ದೂರುದಾರರು ಒಪ್ಪಿಗೆ ನೀಡಿದ್ದಾರೆ ಎಂಬ ಒಂದೇ ಒಂದು ಕಾರಣದಿಂದ ಎಫ್ಐಆರ್ ರದ್ದುಗೊಳಿಸಲಾಗದು ಎಂದು ಅಭಿಪ್ರಾಯಪಟ್ಟಿತ್ತು.

ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 2023ರಲ್ಲಿ ಬಿ ವರದಿ ಸಲ್ಲಿಸಿದ್ದರು. ಈ ಬಾರಿ ಅಂಧೇರಿ ಮ್ಯಾಜಿಸ್ಟ್ರೇಟ್‌ ಇದನ್ನು ಒಪ್ಪಿದ್ದರು. ಈ ಹಿನ್ನೆಲೆಯಲ್ಲಿ ಎಫ್‌ಐಆರ್‌ ರದ್ದುಗೊಳಿಸಲು ಕೋರಿದ್ದ ಅರ್ಜಿ ತನ್ನು ಉದ್ದೇಶವನ್ನು ಕಳೆದುಕೊಂಡ ಪರಿಣಾಮ ಅರ್ಜಿಯನ್ನು ಹಿಂಪಡೆಯಲು ಭೂಷಣ್‌ ಪರ ವಕೀಲರು ಹೈಕೋರ್ಟ್‌ ಅನುಮತಿ ಕೋರಿದ್ದರು.

ಎಫ್ಐಆರ್‌, ಸಂತ್ರಸ್ತ ಮಹಿಳೆಯ ಒಪ್ಪಿಗೆ ಅಫಿಡವಿಟ್ ಮತ್ತು ಮ್ಯಾಜಿಸ್ಟ್ರೇಟ್ ಅವರ ವಿವರವಾದ ಆದೇಶವನ್ನು ಪೀಠ ಪರಿಶೀಲಿಸಿ ಅಂತಿಮವಾಗಿ ಅರ್ಜಿ ಹಿಂಪಡೆಯಲು ಅನುಮತಿಸಿತು.

ಹಿನ್ನೆಲೆ: ತನ್ನನ್ನು ಕಲಾವಿದೆ ಎಂದು ಗುರುತಿಸಿಕೊಂಡಿದ್ದ ಯುವತಿಯೊಬ್ಬರು ಭೂಷಣ್‌ ಅವರ ವಿರುದ್ಧ ಅತ್ಯಾಚಾರದ ಆರೋಪ ಮಾಡಿ ದೂರು ದಾಖಲಿಸಿದ್ದರು. ತಮ್ಮ ವಿವಿಧ ಪ್ರಾಜೆಕ್ಟ್‌ಗಳಲ್ಲಿ ಕೆಲಸವನ್ನು ನಿಡುವುದಾಗಿ ತಿಳಿಸಿದ್ದ ಭೂಷಣ್‌ ತಮ್ಮ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಮೊದಲಿಗೆ ದೂರಿದ್ದರು. ಬಿ ವರದಿ ವೇಳೆ ಅವರು ಪ್ರಕರಣವನ್ನು ಮುಕ್ತಾಯಗೊಳಿಸಲು ತಮ್ಮ ಸಮ್ಮತಿಯನ್ನು ನೀಡಿದ್ದರು.

Related Stories

No stories found.
Kannada Bar & Bench
kannada.barandbench.com