ಕಳೆದ ವರ್ಷ ದಾಖಲಾಗಿದ್ದ ಅಶ್ಲೀಲ ಚಿತ್ರ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನಿಗಾಗಿ ಬಾಂಬೆ ಹೈಕೋರ್ಟ್‌ ಕದತಟ್ಟಿದ ಕುಂದ್ರಾ

ಸೆಷನ್ಸ್‌ ನ್ಯಾಯಾಲಯ ನಿರೀಕ್ಷಣಾ ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರು ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
Raj Kundra and Bombay HC
Raj Kundra and Bombay HC
Published on

ಕೆಲವು ಆನ್‌ಲೈನ್‌ ವೇದಿಕೆಗಳಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಮಾಡಿದ್ದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ 2020ರಲ್ಲಿ ದಾಖಲಾಗಿರುವ ಎಫ್‌ಐಆರ್‌ ಸಂಬಂಧ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರು ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಒಟಿಟಿ ವೇದಿಕೆಗಳಲ್ಲಿ ಕಾಮೋದ್ರೇಕ ನಗ್ನ ವಿಡಿಯೊ ಪ್ರಸಾರ ಮಾಡಲಾಗುತ್ತಿರುವ ಸಂಬಂಧ ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಇಲಾಖೆಯ ನಿವೃತ್ತ ಅಧಿಕಾರಿ ನೀಡಿದ ದೂರನ್ನು ಆಧರಿಸಿ ಮುಂಬೈ ಪೊಲೀಸ್‌ನ ಸೈಬರ್‌ ಅಪರಾಧ ವಿಭಾಗವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಎಫ್‌ಐಆರ್‌ ದಾಖಲಿಸಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 292, 293 (ಅಶ್ಲೀಲ ಸಾಮಗ್ರಿಗಳ ಮಾರಾಟ), ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ಗಳಾದ 66ಇ, 67, 67ಎ (ಲೈಂಗಿಕ ಚಟುವಟಿಕೆಗಳ ಪ್ರಸರಣ) ಮತ್ತು ಮಹಿಳೆಯನ್ನು ಅಸಭ್ಯವಾಗಿ ಬಿಂಬಿಸುವುದರ ನಿಷೇಧ ಕಾಯಿದೆಯ ವಿವಿಧ ನಿಬಂಧನೆಗಳ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಪ್ರಕರಣದಲ್ಲಿ ತಪ್ಪಾಗಿ ನನ್ನನ್ನು ಸಿಲುಕಿಸಲಾಗಿದ್ದು, ಸೈಬರ್‌ ಪೊಲೀಸ್‌ ವಿಭಾಗವು ಅಪರಾಧವನ್ನು ನನಗೆ ತಳುಕು ಹಾಕಲು ಪ್ರಯತ್ನಿಸುತ್ತಿದೆ ಎಂದಿರುವ ಕುಂದ್ರಾ ಅವರು ತಾರೆಯರು, ಕಲಾವಿದರು, ಸೃಜನಶೀಲರಿಗೆ ತಮ್ಮ ಅಭಿಮಾನಿಗಳ ಜೊತೆ ಸಂಪರ್ಕ ಸಾಧಿಸುವ ಡಿಜಿಟಲ್‌ ವೇದಿಕೆಯಲ್ಲಿ ಹೂಡಿಕೆ ಮಾಡುವವಂತೆ ಸೌರಭ್‌ ಕುಶ್ವಾ ಎಂಬವರು ಸಲಹೆ ನೀಡಿದ್ದರು ಎಂದು ಹೇಳಿದ್ದಾರೆ. ಹೀಗಾಗಿ, 2019ರ ಫೆಬ್ರವರಿಯಿಂದ 2019ರ ಡಿಸೆಂಬರ್‌ ಅವಧಿಯಲ್ಲಿ ನಿಷ್ಕ್ರಿಯ ಪಾಲುದಾರನಾಗಿ ಹೂಡಿಕೆ ಮಾಡಿದ್ದಾಗಿ ತಿಳಿಸಿದ್ದಾರೆ.

ತಾವು ಹೂಡಿಕೆ ಮಾಡಿದ್ದ ಸಂಸ್ಥೆಯು ಹಾಟ್‌ಶಾಟ್ಸ್ ಎಂಬ ಅಪ್ಲಿಕೇಶನ್‌ ರೂಪಿಸಿದ್ದು, ಇದಕ್ಕೂ ಅಪರಾಧದ ವ್ಯಾಪ್ತಿಗೆ ಬರುವ ಅಶ್ಲೀಲ ಚಿತ್ರ ಮತ್ತು ವಿಡಿಯೊಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆರೋಪಿತ ಅಪರಾಧಗಳಿಗೆ ಸಂಬಂಧಿಸಿದಂತೆ ಹಾಟ್‌ಶಾಟ್‌ ಅಪ್ಲಿಕೇಶನ್‌ ವಿರುದ್ಧ ಆರೋಪ ಮಾಡಲು ಒಂದೇ ಒಂದು ಸಾಕ್ಷಿ ಪ್ರಾಸಿಕ್ಯೂಷನ್‌ ಬಳಿ ಇಲ್ಲ. ಈ ಪ್ರಕರಣದಲ್ಲಿ ಆಪಾದಿತರಾಗಿರುವ ಯಾವುದೇ ನಟಿಯರು ಈ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಲಿಲ್ಲ ಎಂದಿದ್ದಾರೆ.

Also Read
ಅಶ್ಲೀಲ ಚಿತ್ರ ಪ್ರಕರಣ: ಪೊಲೀಸ್‌ ವಶಕ್ಕೆ ನೀಡಿದ್ದನ್ನು ಪ್ರಶ್ನಿಸಿದ್ದ ಕುಂದ್ರಾ ಮನವಿ ವಜಾ ಮಾಡಿದ ಬಾಂಬೆ ಹೈಕೋರ್ಟ್‌

“ಈಗ ಮಾತ್ರ, ಯಾವ ಕಾರಣಕ್ಕಾಗಿ ತನಿಖಾ ಸಂಸ್ಥೆಗಳು ಅರ್ಜಿದಾರರನ್ನು (ಕುಂದ್ರಾ) ಬಲಿಪಶು ಮಾಡುತ್ತಿವೆ ಎಂಬುದು ಅವುಗಳಿಗೆ ಮಾತ್ರ ಗೊತ್ತು” ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

2021ರಲ್ಲಿ ಇದೇ ತೆರನಾದ ಅಶ್ಲೀಲ ಚಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ ಹಿನ್ನೆಲೆಯಲ್ಲಿ ಕುಂದ್ರಾ ಅವರನ್ನು ಬಂಧಿಸಲಾಗಿದೆ. 2021ರಲ್ಲಿ ದಾಖಲಿಸಲಾಗಿರುವ ಪ್ರಕರಣದ ಆರೋಪ ಪಟ್ಟಿ ಮತ್ತು ಸದ್ಯದ ಎಫ್‌ಐಆರ್‌ನಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ, ಈ ಪ್ರಕರಣದಲ್ಲೂ ತಮ್ಮನ್ನು ಬಂಧಿಸುವ ಸಾಧ್ಯತೆ ಎಂದು ಕುಂದ್ರಾ ಆತಂಕ ವ್ಯಕ್ತಪಡಿಸಿದ್ದಾರೆ.

Kannada Bar & Bench
kannada.barandbench.com