ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಿಂದ ಪಕ್ಷೇತರವಾಗಿ ಆಯ್ಕೆಯಾಗಿದ್ದ ಸಂಸದೆ ನವನೀತ್ ಕೌರ್ ರಾಣಾ ಅವರು ವ್ಯವಸ್ಥಿತವಾಗಿ ವಂಚಿಸುವ ಮೂಲಕ ಪರಿಶಿಷ್ಟ ಜಾತಿಗೆ ಸೇರುವ ಮೋಚಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದ್ದು, ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸುವುದರೊಂದಿಗೆ ಅದನ್ನು ವಶಪಡಿಸಿಕೊಂಡಿದೆ (ಆನಂದ್ರ ವಿಠೋಬ ಅದ್ಸುಲ್ ವರ್ಸಸ್ ಮಹಾರಾಷ್ಟ್ರ ರಾಜ್ಯ ಮತ್ತು ಇತರರು ಮತ್ತು ಸಂಬಂಧಿತ ವಿಚಾರಗಳು).
ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ರಾಣಾ ಅವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಆರ್ ಡಿ ಧನೂಕ ಮತ್ತು ವಿ ಜಿ ಬಿಷ್ಟ್ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.
“ನಿರ್ದಿಷ್ಟ ಜಾತಿಗೆ ಸೇರದ ವ್ಯಕ್ತಿಗೆ ನೀಡಲಾದ ತಪ್ಪು ಜಾತಿ ಸಿಂಧುತ್ವ ಪ್ರಮಾಣ ಪತ್ರದಿಂದಾಗಿ ಅಂತಹ ಜಾತಿಯ ಮೀಸಲು ವರ್ಗಕ್ಕೆ ಸೇರಿದ ನಿಜವಾದ ಮತ್ತು ಅರ್ಹ ವ್ಯಕ್ತಿಗಳಿಗೆ ಭಾರತದ ಸಂವಿಧಾನದಲ್ಲಿ ಕಲ್ಪಿಸಲಾಗಿರುವ ಎಲ್ಲಾ ಪ್ರಯೋಜನಗಳನ್ನು ಕಸಿದುಕೊಂಡಂತಾಗುತ್ತದೆ” ಎಂದು ಪೀಠ ಹೇಳಿದೆ. ಅಲ್ಲದೇ, ಮಹಾರಾಷ್ಟ್ರ ಕಾನೂನು ಸೇವಾ ಪ್ರಾಧಿಕಾರಕ್ಕೆ ರೂ. 2 ಲಕ್ಷ ರೂಪಾಯಿ ಠೇವಣಿ ಸಲ್ಲಿಸುವಂತೆ ರಾಣಾ ಅವರಿಗೆ ನ್ಯಾಯಾಲಯ ನಿರ್ದೇಶಿಸಿದೆ.
“ಮೂರನೇ ಪ್ರತಿವಾದಿಯಾದ ರಾಣಾ ಅವರು ಪರಿಶಿಷ್ಟ ಜಾತಿಗೆ ಸೇರಿದ ಪ್ರಮಾಣ ಪತ್ರ ಪಡೆದುಕೊಳ್ಳಲು ನೀಡಿರುವ ಕಾರಣಗಳು ಸುಳ್ಳುಗಳಿಂದ ಕೂಡಿವೆ. ಪರಿಶಿಷ್ಟ ಜಾತಿಗೆ ಸೇರದಿದ್ದರೂ ಆ ಸಮುದಾಯವರಿಗೆ ದಕ್ಕಬೇಕಾದ ಸವಲತ್ತುಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಅವರು ತಪ್ಪೆಸಗಿದ್ದಾರೆ” ಎಂದು ಪೀಠವು ತೀರ್ಮಾನಕ್ಕೆ ಬಂದಿದೆ.
ರಾಣಾ ಅವರ ಜಾತಿ ಪ್ರಮಾಣ ಪತ್ರವನ್ನು ಪ್ರಶ್ನಿಸಿ ಶಿವಸೇನಾ ಮಾಜಿ ಸಂಸದ ಆನಂದ್ರ ವಿಠೋಬ ಅದ್ಸುಲ್ ಅವರು ಸಲ್ಲಿಸಿದ್ದ ಮನವಿಯನ್ನು ಆಧರಿಸಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಕಾಂಗ್ರೆಸ್ ಮತ್ತು ಎನ್‌ಸಿಪಿ ಬೆಂಬಲ ಪಡೆದು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ರಾಣಾ ಅವರು ಪಕ್ಷೇತರರಾಗಿ ಸ್ಪರ್ಧಿಸಿ ಲೋಸಕಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಮುಂಬೈನ ಉಪ ದಂಡಾಧಿಕಾರಿ ಅವರು ರಾಣಾ ಅವರಿಗೆ ಜಾತಿ ಪ್ರಮಾಣ ಪತ್ರ ನೀಡಿದ್ದು, ಮುಂಬೈ ಉಪನಗರದ ಜಿಲ್ಲಾ ಜಾತಿ ಪ್ರಮಾಣ ಪತ್ರ ಪರಿಶೀಲನಾ ಸಮಿತಿಯು ಅದನ್ನು ಸಿಂಧುಗೊಳಿಸಿತ್ತು.