ಬ್ಯಾಂಕ್ ವಂಚನೆ ಕುರಿತಂತೆ ಆರ್‌ಬಿಐ ಹೊರಡಿಸಿದ್ದ ಸುತ್ತೋಲೆಗೆ ತಡೆ ನೀಡಿಲ್ಲ: ಬಾಂಬೆ ಹೈಕೋರ್ಟ್ ಸ್ಪಷ್ಟನೆ
ಬ್ಯಾಂಕ್‌ಗಳಿಂದಾಗುವ ವಂಚನೆಗೆ ಸಂಬಂಧಿಸಿದಂತೆ 2016ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ವಾಣಿಜ್ಯ ಬ್ಯಾಂಕ್‌ಗಳು ಮತ್ತು ಆಯ್ದ ಎಫ್‌ಐಗಳಿಂದ ವಂಚನೆ ವರ್ಗೀಕರಣ ಮತ್ತು ವರದಿ ಮಾಡುವಿಕೆ) ನೀಡಿದ್ದ ನಿರ್ದೇಶನಗಳಿಗೆ (ಮಾಸ್ಟರ್ ಸುತ್ತೋಲೆ) ತಾನು ತಡೆ ನೀಡಿಲ್ಲ ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ [ಎಸ್‌ಎಸ್ ಹೇಮಾನಿ ಮತ್ತು ಆರ್‌ಬಿಐ ಇನ್ನಿತರರ ನಡುವಣ ಪ್ರಕರಣ].
ಈ ಸಂಬಂಧ ನ್ಯಾಯಮೂರ್ತಿಗಳಾದ ಜಿ.ಎಸ್.ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠ ಇಂದು ಪ್ರಕಟಿಸಿದ 9 ಪುಟಗಳ ಆದೇಶದಲ್ಲಿ ಸ್ಪಷ್ಟನೆ ನೀಡಿದೆ.
ನಿನ್ನೆ ವಿಚಾರಣೆ ವೇಳೆ ವಿಭಾಗೀಯ ಪೀಠ ಮಾಸ್ಟರ್ ಸುತ್ತೋಲೆ ಆಧರಿಸಿ ಮುಂದಿನ ಕ್ರಮ ಕೈಗೊಳ್ಳದಂತೆ ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಈ ಸುತ್ತೋಲೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಅಂತಿಮವಾಗಿ ವಿಚಾರಣೆ ನಡೆಸುವವರೆಗೆ ನ್ಯಾಯಾಲಯ ಸುತ್ತೋಲೆಯ ಪರಿಣಾಮವನ್ನು ತಡೆಹಿಡಿದಿದೆ ಎಂದು ವರದಿಯಾಗಿತ್ತು.
ಆದರೆ, ವಿಭಾಗೀಯ ಪೀಠ ಮಾಸ್ಟರ್ ಸುತ್ತೋಲೆಯ ಕಾರ್ಯಾಚರಣೆಗೆ ತಡೆ ನೀಡಿಲ್ಲ ಎಂದು ಇಂದು ಪ್ರಕಟಿಸಿದ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಮಾಸ್ಟರ್ ಸುತ್ತೋಲೆಯಲ್ಲಿ ತಾನು ನೀಡಿರುವ ನಿರ್ದೇಶನಗಳು ಪ್ರಕರಣದ ಕುರಿತು ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿರದ ಬ್ಯಾಂಕ್ ಕ್ರಮಗಳಿಗೆ ಮಾತ್ರ ಸೀಮಿತ ಎಂದು ನ್ಯಾಯಾಲಯ ವಿವರಿಸಿದೆ. ಈ ಆದೇಶ ಸೆಪ್ಟೆಂಬರ್ 11, 2023ರವರೆಗೆ ಮುಂದುವರಿಯುತ್ತದೆ ಎಂದು ನ್ಯಾಯಾಲಯ ತಿಳಿಸಿದೆ. ಇದೇ ವೇಳೆ ಆರ್‌ಬಿಐ ಸುತ್ತೋಲೆ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಬಾಕಿ ಇರುವ ಸಂದರ್ಭದಲ್ಲಿ ಬ್ಯಾಂಕುಗಳು ತೆಗೆದುಕೊಳ್ಳಬಹುದಾದ ಕ್ರಮಗಳನ್ನೂ ಸಹ ವಿಭಾಗೀಯ ಪೀಠ ಸೂಚಿಸಿತು.
ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಹೊಂದಿಕೆಯಾಗದ, ಮಾಸ್ಟರ್ ಸುತ್ತೋಲೆಯ ಅಡಿಯಲ್ಲಿ ಇದಾಗಲೇ ಜಾರಿಗೊಳಿಸಲಾದ ಯಾವುದೇ ಆದೇಶಗಳನ್ನು ತೆಗೆದುಹಾಕಲು, ಹಿಂತೆಗೆದುಕೊಳ್ಳಲು ಅಥವಾ ರದ್ದುಗೊಳಿಸಲು ನ್ಯಾಯಾಲಯ ಎಲ್ಲಾ ಬ್ಯಾಂಕ್‌ಗಳಿಗೆ ಸ್ವಾತಂತ್ರ್ಯ ನೀಡಿದೆ.