ಜನರಲ್ ಮೋಟಾರ್ಸ್‌ಗೆ ₹ 9,656 ಕೋಟಿ ನಷ್ಟ: ಉತ್ಪಾದನಾ ಘಟಕ ಮುಚ್ಚಲು ಅನುಮತಿಸಿದ್ದ ಆದೇಶ ಎತ್ತಿಹಿಡಿದ ಬಾಂಬೆ ಹೈಕೋರ್ಟ್

ಜಿಎಂ ಆರ್ಥಿಕವಾಗಿ ಬಲಶಾಲಿಯಾಗಲು ಮತ್ತು ವ್ಯವಹಾರದಲ್ಲಿ ಸ್ವಾವಲಂಬಿಯಾಗಲು ತನ್ನೆಲ್ಲಾ ಸಂಪನ್ಮೂಲಗಳನ್ನು ಬರಿದು ಮಾಡಿದೆ ಎಂದು ಕೈಗಾರಿಕಾ ನ್ಯಾಯಮಂಡಳಿ ಹೇಳಿತ್ತು.
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್

ತಾನು ₹ 9,000 ಕೋಟಿಗಿಂತ ಹೆಚ್ಚು ನಷ್ಟ ಅನುಭವಿಸಿರುವುದಾಗಿ ಜನರಲ್‌ ಮೋಟಾರ್ಸ್‌ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ತಲೇಗಾಂವ್‌ನಲ್ಲಿರುವ ಕಂಪೆನಿಯ ವಾಹನ ತಯಾರಿಕಾ ಘಟಕ ಮುಚ್ಚಲು ಅನುಮತಿಸಿದ್ದ ಕೈಗಾರಿಕಾ ನ್ಯಾಯಮಂಡಳಿಯ ಆದೇಶವನ್ನು ಬಾಂಬೆ ಹೈಕೋರ್ಟ್‌ ಈಚೆಗೆ ಎತ್ತಿ ಹಿಡಿದಿದೆ [ಜನರಲ್‌ ಮೋಟಾರ್ಸ್‌ ನೌಕರರ ಒಕ್ಕೂಟ ಮತ್ತು ಜನರಲ್‌ ಮೋಟಾರ್ಸ್‌ ಕಂಪೆನಿ ಪ್ರೈವೇಟ್‌ ಲಿಮಿಟೆಡ್‌ ನಡುವಣ ಪ್ರಕರಣ].

ಉಂಟಾದ ನಷ್ಟದ ಆಧಾರದಲ್ಲಿ ಕಾನೂನಿನ ಪ್ರಕಾರ ಕಂಪೆನಿ ತನ್ನ ಸಂಸ್ಥೆ ಮುಚ್ಚುವುದಕ್ಕಾಗಿ ನ್ಯಾಯಾಲಯದ ಮೊರೆ ಹೋದರೆ ಆಗ ಕಾರ್ಮಿಕರ ನಿರುದ್ಯೋಗದ ಸಾಧ್ಯತೆಯ ಕಾರಣಕ್ಕೆ ಕಂಪೆನಿ ತನ್ನ ವ್ಯವಹಾರ ಮುನ್ನಡೆಸಬೇಕು, ಅದನ್ನು ಮುಚ್ಚಬಾರದು ಎನ್ನಲಾಗದು ಎಂದು ನ್ಯಾ. ಮಿಲಿಂದ್‌ ಜಾಧವ್‌ ತಿಳಿಸಿದರು.

"ಪ್ರಸ್ತುತ ಪ್ರಕರಣದಲ್ಲಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕಂಪೆನಿ ತನ್ನ ಸಂಸ್ಥೆ ಸ್ಥಗಿತಗೊಳಿಸುವ ಸುಮಾರು ಒಂದು ದಶಕದ ಮೊದಲೇ ಅವರು ಹೊರಗೆ ಹೆಜ್ಜೆ ಇಟ್ಟಿದ್ದರು. ಪ್ರಸ್ತುತ ಪ್ರಕರಣದಲ್ಲಿ ಗಮನಿಸಬೇಕಾದ ಅಂಶ ಎಂದರೆ ಕಂಪೆನಿ ಕಳೆದ 28 ವರ್ಷಗಳಲ್ಲಿ ಗಮನಾರ್ಹ ನಷ್ಟ ಅನುಭವಿಸಿದ್ದು 2021-2022ರ ಆರ್ಥಿಕ ವರ್ಷದ ಕೊನೆಯಲ್ಲಿ, ಒಟ್ಟು ನಷ್ಟ 9656.87 ಕೋಟಿ ರೂಪಾಯಿಯಷ್ಟಾಗಿದೆ" ಎಂದು ನ್ಯಾಯಾಲಯ ನುಡಿಯಿತು.

ನ್ಯಾಯಮೂರ್ತಿ ಮಿಲಿಂದ್ ಜಾಧವ್
ನ್ಯಾಯಮೂರ್ತಿ ಮಿಲಿಂದ್ ಜಾಧವ್

ಜಿಎಂ ಆರ್ಥಿಕವಾಗಿ ಬಲಶಾಲಿಯಾಗಲು ಮತ್ತು ವ್ಯವಹಾರದಲ್ಲಿ ಸ್ವಾವಲಂಬಿಯಾಗಲು ತನ್ನೆಲ್ಲಾ ಸಂಪನ್ಮೂಲಗಳನ್ನು ಬರಿದು ಮಾಡಿಕೊಂಡಿತು. ಈ ಕ್ರಮಗಳು ಫಲ ನೀಡದ ಕಾರಣ, ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಕೈಗಾರಿಕಾ ನ್ಯಾಯಮಂಡಳಿ ಹೇಳಿದ್ದನ್ನು ಹೈಕೋರ್ಟ್‌ ಗಮನಿಸಿತು.

ಸೇವಾ ಷರತ್ತುಗಳನ್ನು ಬದಲಾಯಿಸಿ ಅನ್ಯಾಯಯುತ ಕಾರ್ಮಿಕ ಕ್ರಮ (ಯುಎಲ್‌ಪಿ) ಕೈಗೊಳ್ಳಲಾಗಿದೆ ಎಂದು ಆರೋಪಿಸಿ ಜನರಲ್ ಮೋಟಾರ್ಸ್ ನೌಕರರ ಒಕ್ಕೂಟ ಅಕ್ಟೋಬರ್ 27, 2020ರಂದು ದೂರು ದಾಖಲಿಸಿತ್ತು. ಆದರೆ ಡಿಸೆಂಬರ್ 22, 2020ರಂದು ಪುಣೆಯ ಕೈಗಾರಿಕಾ ನ್ಯಾಯಾಲಯ ಮಧ್ಯಂತರ ಪರಿಹಾರ ತಿರಸ್ಕರಿಸಿತು.

ರೂ 8,500 ಕೋಟಿ ನಷ್ಟ ಉಂಟಾಗಿರುವ ಹಿನ್ನೆಲೆಯಲ್ಲಿ ತನ್ನ ತಲೇಗಾಂವ್ ಸ್ಥಾವರ ಮುಚ್ಚಲು ಅನುಮತಿ ಕೋರಿ ಜನರಲ್ ಮೋಟಾರ್ಸ್ ನವೆಂಬರ್ 20, 2020ರಂದು ಅರ್ಜಿ ಸಲ್ಲಿಸಿತ್ತು. ತನ್ನ ತಲೇಗಾಂವ್ ಸ್ಥಾವರದಲ್ಲಿ ಉತ್ಪಾದನೆ ಕೊನೆಗೊಳಿಸುವುದಾಗಿ ಡಿಸೆಂಬರ್ 24, 2020ರಂದು ಕಂಪೆನಿ ಘೋಷಿಸಿತು. ಈ ಮಧ್ಯೆ ನೌಕರರ ಒಕ್ಕೂಟದ ದೂರನ್ನು , ಕೈಗಾರಿಕಾ ನ್ಯಾಯಮಂಡಳಿ ಡಿಸೆಂಬರ್ 22, 2020ರಂದು ತಿರಸ್ಕರಿಸಿತು. ಕಂಪನಿಯು ನಷ್ಟದಿಂದ ಚೇತರಿಸಿಕೊಳ್ಳಬಹುದು ಎಂಬ ಕಾರಣಕ್ಕೆ ಮುಚ್ಚುವಿಕೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಮಹಾರಾಷ್ಟ್ರ ಸರ್ಕಾರ ತಿರಸ್ಕರಿಸಿತು, ಕಂಪನಿ ಆ ಬಳಿಕ ರಾಜ್ಯ ಸರ್ಕಾರದ ಮುಂದೆ ಪರಿಶೀಲನಾ ಅರ್ಜಿ ಸಲ್ಲಿಸಿತು. ಮಾರ್ಚ್ 18, 2021ರಂದು ಕೈಗಾರಿಕಾ ನ್ಯಾಯಮಂಡಳಿಯ ಮುಂದೆ ರಾಜ್ಯ ಸರ್ಕಾರ ಪ್ರಕರಣ ಪ್ರಸ್ತಾಪಿಸಿತು.

ಕಂಪನಿಯ ತಲೇಗಾಂವ್ ಸ್ಥಾವರದಲ್ಲಿ ಹ್ಯುಂಡೈ ಮೋಟಾರ್ಸ್ ಪರವಾಗಿ ಯಾವುದೇ ಮೂರನೇ ಪಕ್ಷದ ಹಕ್ಕುಗಳನ್ನು ರಚಿಸದಂತೆ ಜಿಎಂ ವಿರುದ್ಧ ಆದೇಶವನ್ನು ಕೋರಿ ಯೂನಿಯನ್ ಕೈಗಾರಿಕಾ ನ್ಯಾಯಾಲಯಕ್ಕೆ ಫೆಬ್ರವರಿ 21, 2023ರಂದು ಅರ್ಜಿ ಸಲ್ಲಿಸಿತು. ನ್ಯಾಯಮಂಡಳಿ ಇದನ್ನು ಮಾರ್ಚ್ 8, 2023ರಂದು ತಿರಸ್ಕರಿಸಿತು.

ಏಪ್ರಿಲ್ 30, 2021 ರಿಂದ ಜಾರಿಗೆ ಬರುವಂತೆ ಕಂಪನಿಯನ್ನು ಮುಚ್ಚಲು ಅನುಮತಿಸಿ ಜೂನ್ 30, 2023ರಂದು ತೀರ್ಪು ನೀಡಲಾಯಿತು. ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪ್ರಸ್ತುತ ರಿಟ್‌ ಅರ್ಜಿ ಸಲ್ಲಿಸಲಾಗಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
General Motors Employees Union v. General Motors Pvt Ltd.pdf
Preview
Kannada Bar & Bench
kannada.barandbench.com