ನ್ಯಾಯಾಂಗ ನಿಂದನೆ ವಿಚಾರಣೆಗೆ ನ್ಯಾಯಾಲಯ ಅಮೂಲ್ಯ ಸಮಯ ವ್ಯಯಿಸಬಾರದು, ಟೀಕೆಗೆ ಮುಕ್ತವಾಗಿರಬೇಕು: ನ್ಯಾ. ಶಿಂಧೆ

“ಟೀಕೆಗೆ ನ್ಯಾಯಾಂಗ ಮುಕ್ತವಾಗಿಬೇಕು. ನ್ಯಾಯಾಲಯದ ಸಮಯ ವ್ಯಯಿಸುವುದರಿಂದ ನ್ಯಾಯಾಂಗ ನಿಂದನಾ ಪ್ರಕ್ರಿಯೆ ತಡೆಯಬೇಕು. ಇದರಿಂದ ಕಾನೂನಿನ ಕ್ಲಿಷ್ಟ ಪ್ರಶ್ನೆಗಳನ್ನು ಎತ್ತಲಾಗದು” ಎಂದು ನ್ಯಾಯಪೀಠ ಹೇಳಿದೆ.
ನ್ಯಾಯಾಂಗ ನಿಂದನೆ ವಿಚಾರಣೆಗೆ ನ್ಯಾಯಾಲಯ ಅಮೂಲ್ಯ ಸಮಯ ವ್ಯಯಿಸಬಾರದು, ಟೀಕೆಗೆ ಮುಕ್ತವಾಗಿರಬೇಕು: ನ್ಯಾ. ಶಿಂಧೆ
Published on

ಕಾನೂನಿನ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯ ಹೆಚ್ಚಿರುವುದರಿಂದ ನ್ಯಾಯಾಂಗ ನಿಂದನಾ ಪ್ರಕ್ರಿಯೆಯ ಮೂಲಕ ನ್ಯಾಯಾಲಯದ ಅತ್ಯಮೂಲ್ಯ ಸಮಯ ವ್ಯಯ ಮಾಡಬಾರದು ಎಂದು ಬಾಂಬೆ ಹೈಕೋರ್ಟ್‌ ನಾಯಮೂರ್ತಿ ಎಸ್‌ ಎಸ್‌ ಶಿಂಧೆ ಹೇಳಿದರು. ಅಲ್ಲದೇ ಸಾರ್ವಜನಿಕರಿಂದ ವ್ಯಕ್ತವಾಗುವ ಟೀಕೆಗಳಿಗೆ ನ್ಯಾಯಾಲಯಗಳು ಮತ್ತು ನ್ಯಾಯಮೂರ್ತಿಗಳು ಮುಕ್ತವಾಗಿರಬೇಕು ಎಂದು ಹೇಳಿದರು.

ನ್ಯಾಯಾಂಗ ನಿಂದನೆ ಅಸ್ತ್ರವನ್ನು ಕೊನೆಯದಾಗಿ ಬಳಸಬೇಕಿದ್ದು, ನ್ಯಾಯಮೂರ್ತಿಗಳು ಅಥವಾ ನ್ಯಾಯಾಂಗವನ್ನು ಟೀಕಿಸುವ ಸಾಮಾನ್ಯ ವ್ಯಕ್ತಿಯ ವಿರುದ್ಧ ಅದನ್ನು ಬಳಸಬಾರದು.

“ಟೀಕೆಗೆ ನ್ಯಾಯಾಂಗವು ಮುಕ್ತವಾಗಿರಬೇಕು. ನ್ಯಾಯಾಂಗ ನಿಂದನೆ ಎಂಬುದು ಕೊನೆಯ ಅಸ್ತ್ರವಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನ್ಯಾಯಾಂಗ ನಿಂದನೆ ಪ್ರಕ್ರಿಯೆಯಿಂದ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದ್ದು, ಪ್ರಮುಖ ವಿಚಾರಗಳು ಮತ್ತು ಕಾನೂನಿಗೆ ಸಂಬಂಧಿಸಿದ ವಿಚಾರಗಳು ಪ್ರಾಮುಖ್ಯತೆ ಪಡೆಯದಾಗುತ್ತವೆ” ಎಂದು ನ್ಯಾಯಮೂರ್ತಿ ಶಿಂಧೆ ಹೇಳಿದರು.

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ವಕೀಲ ಡಾ. ಅಭಿನವ್‌ ಚಂದ್ರಚೂಡ್‌ ಅವರ ವಾದದ ಸಂದರ್ಭದಲ್ಲಿ ನ್ಯಾ. ಶಿಂಧೆ ಅವರು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ಸಂಪುಟ ದರ್ಜೆ ಸಚಿವ ಆದಿತ್ಯ ಠಾಕ್ರೆ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸುನೈನಾ ಹೊಲೆ ಅವರ ಮನವಿಯ ವಿಚಾರಣೆಯನ್ನು ನ್ಯಾ. ಶಿಂಧೆ ಮತ್ತು ನ್ಯಾಯಮೂರ್ತಿ ಎಂ ಎಸ್‌ ಕಾರ್ನಿಕ್‌ ಅವರಿದ್ದ ವಿಭಾಗೀಯ ಪೀಠವು ನಡೆಸಿತು. ಡಿಸೆಂಬರ್‌ 17ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಸರ್ಕಾರಿ ಅಧಿಕಾರಿಗಳ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿರುವುದರ ಪ್ರಾಮುಖ್ಯತೆಯ ಕುರಿತು ಹೊಲೆ ಅವರನ್ನು ಪ್ರತಿನಿಧಿಸುತ್ತಿರುವ ಡಾ. ಚಂದ್ರಚೂಡ್‌ ವಾದಿಸಿದರು. ಈ ಸಂದರ್ಭದಲ್ಲಿ ಪೀಠವು ಪ್ರಮುಖ ಸ್ಥಾನಗಳಲ್ಲಿರುವವರು ಟೀಕೆಯನ್ನು ಸಹಿಸಿಕೊಳ್ಳುವ ಗುಣಬೆಳೆಸಿಕೊಳ್ಳಬೇಕು ಎಂದಿತು.

ಇದೇ ಅಭಿಪ್ರಾಯವನ್ನು ನ್ಯಾಯಾಂಗಕ್ಕೆ ವಿಸ್ತರಿಸಿದ ನ್ಯಾ. ಶಿಂಧೆ ಅವರು ನ್ಯಾಯಾಲಯಗಳು ತನ್ನ ವಿರುದ್ಧ ವ್ಯಕ್ತವಾಗುವ ಕಟುವಾದ ಅಭಿಪ್ರಾಯಗಳು ಮತ್ತು ಹೇಳಿಕೆಗಳನ್ನು ಮುಕ್ತವಾಗಿ ಸ್ವೀಕರಿಸುವುದನ್ನು ಕಲಿಯಬೇಕು ಎಂದು ಪ್ರತಿಪಾದಿಸಿದರು.

ನ್ಯಾಯಮೂರ್ತಿಯ ವಿರುದ್ಧ ಕ್ರಮವಹಿಸಲೇಬೇಕು ಎಂದಾದರೆ ಅಂತಹ ನ್ಯಾಯಮೂರ್ತಿಗಳ ವಿರುದ್ಧ ಕ್ರಮ ಜರುಗಿಸಲು ಸಂಸತ್‌ಗೆ ಯಾವ ರೀತಿಯ ವಿಶೇಷ ಹಕ್ಕಿದೆ ಎಂಬುದನ್ನು ಅವರು ಪ್ರಸ್ತಾಪಿಸಿದರು. ಸಮಾಜದಲ್ಲಿನ ವ್ಯಕ್ತಿಯೊಬ್ಬರು ನ್ಯಾಯಮೂರ್ತಿಯವರನ್ನು ಟೀಕಿಸಿ ಪ್ರತಿಕ್ರಿಯಿಸಿದರೆ ಅಂತಹ ಟೀಕೆಗೆ ಅವಕಾಶ ಮಾಡಿಕೊಡಬೇಕು ಎಂದರು.

“ಟೀಕೆಗೆ ನ್ಯಾಯಾಂಗವು ಮುಕ್ತವಾಗಿರಬೇಕು. ನ್ಯಾಯಾಂಗ ನಿಂದನೆ ಎಂಬುದು ಕೊನೆಯ ಅಸ್ತ್ರವಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ನ್ಯಾಯಾಂಗ ನಿಂದನೆ ಪ್ರಕ್ರಿಯೆಯಿಂದ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗುತ್ತಿದ್ದು, ಪ್ರಮುಖ ವಿಚಾರಗಳು ಮತ್ತು ಕಾನೂನಿಗೆ ಸಂಬಂಧಿಸಿದ ವಿಚಾರಗಳು ಪ್ರಾಮುಖ್ಯತೆ ಪಡೆಯದಾಗುತ್ತವೆ."
ನ್ಯಾಯಮೂರ್ತಿ ಶಿಂಧೆ

ಯಾವ ವ್ಯಕ್ತಿಯ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆಯೋ ಅವರಿಗೆ ಅಗತ್ಯಕ್ಕಿಂತ ಹೆಚ್ಚು ಪ್ರಾಮುಖ್ಯತೆ ಸಿಗುತ್ತದೆ. ಇದಕ್ಕೆ ಹಾಸ್ಯ ಕಲಾವಿದ ಕುನಾಲ್‌ ಕಮ್ರಾ ಅವರನ್ನು ಉದಾಹರಿಸಿದರು. ನ್ಯಾಯಾಂಗವನ್ನು ಟೀಕಿಸಿ ಟ್ವೀಟ್‌ ಮಾಡಿದ್ದ ಕಮ್ರಾ ಅವರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ನ್ಯಾಯಾಂಗ ನಿಂದನೆ ಮನವಿಗಳನ್ನು ಡಾ. ಚಂದ್ರಚೂಡ್‌ ಉಲ್ಲೇಖಿಸಿದರು.

ಒಬ್ಬ ವ್ಯಕ್ತಿ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಮತ್ತೊಬ್ಬ ವ್ಯಕ್ತಿಯು ಇನ್ನೊಂದು ರೀತಿಯಲ್ಲಿ ವ್ಯಕ್ತಪಡಿಸಬಹುದು ಎಂದು ಡಾ. ಚಂದ್ರಚೂಡ್‌ ವಾದಿಸಿದರು. ಅರ್ಜಿದಾರರಾದ ಹೊಲೆ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಹೇಳನಕಾರಿಯಾದ ವಿಶೇಷಣ ಬಳಸಿದ್ದಾರೆ. ಇದು ಅವರ ಭಾವನೆಯನ್ನು ವ್ಯಕ್ತಪಡಿಸುವ ರೀತಿ ಮಾತ್ರವಾಗಿದ್ದು, ಆಕ್ಷೇಪಾರ್ಹವಲ್ಲ ಎಂದು ಚಂದ್ರಚೂಡ್‌ ಪ್ರತಿಪಾದಿಸಿದರು.

“ಒಬ್ಬ ವ್ಯಕ್ತಿಯ ಅಶ್ಲೀಲ ನುಡಿಯು ಮತ್ತೊಬ್ಬರ ಭಾವಗೀತೆ” ಎಂದು ಹೇಳಿದ್ದ ಅಮೆರಿಕಾದ ಸುಪ್ರೀಂ ಕೋರ್ಟ್‌ ತೀರ್ಪನ್ನು ಉಲ್ಲೇಖಿಸಿದ ಚಂದ್ರಚೂಡ್‌ ಅವರು ಒಬ್ಬರಿಗೆ ಆಕ್ಷೇಪಾರ್ಹ ಎಂದೆನಿಸಿದ್ದು, ಮತ್ತೊಬ್ಬರಿಗೆ ಹಾಗೆ ಅನಿಸದಿರಬಹುದು ಎಂದರು.

ಹೊಲೆ ಅವರು ನಿರ್ದಿಷ್ಟ ಸಿದ್ಧಾಂತ ಮತ್ತು ನಂಬಿಕೆಗಳನ್ನು ಹೊಂದಿದ್ದು, ಅವರ ವಿರುದ್ಧ ಮುಂಬೈ ಪೊಲೀಸರು ಜಾರಿಗೊಳಿಸಿರುವ ಕ್ರಮದಲ್ಲಿ ದುರುದ್ದೇಶದ ಅಂಶ ಗೋಚರಿಸುತ್ತಿದೆ ಎಂದು ಚಂದ್ರಚೂಡ್‌ ಹೇಳಿದರು.

Also Read
ಪೊಲೀಸ್‌ ಠಾಣೆಯಲ್ಲಿ ಸಿಸಿಟಿವಿ ಕೆಲಸ ಮಾಡುತ್ತಿಲ್ಲ ಎಂಬ ವಾದವನ್ನು ಒಪ್ಪಲಾಗದು: ಬಾಂಬೆ ಹೈಕೋರ್ಟ್‌

“ಪ್ರಬುದ್ಧ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಸ್ವಾತಂತ್ರ್ಯ (ವಾಕ್‌ ಸ್ವಾತಂತ್ರ್ಯ) ಪರಿಪೂರ್ಣವಾಗಿಲ್ಲ” ಎಂದು ನ್ಯಾಯಾಲಯ ಹೇಳಿತು.

“ನನಗೆ ಮೂಲಭೂತ ಹಕ್ಕುಗಳಿವೆ. ಆ ಹಕ್ಕನ್ನು ಬಳಸುವಾಗ ಅದು ಮತ್ತೊಬ್ಬರ ಹಕ್ಕನ್ನು ಕಸಿಯುವಂತಿರಬಾರದು. ಹಲವು ಪ್ರಕರಣಗಳಲ್ಲಿ ಹೀಗಾಗುತ್ತಿಲ್ಲ. ಅವೆಲ್ಲವೂ ಸಂವಿಧಾನದ 19ನೇ ವಿಧಿಯ ಅಡಿಯಲ್ಲಿ ಬರುತ್ತವೆ” ಎಂದು ನ್ಯಾಯಮೂರ್ತಿ ಶಿಂಧೆ ಹೇಳಿದರು.

Kannada Bar & Bench
kannada.barandbench.com