ಪಾಟಿ ಸವಾಲಿನ ವೇಳೆ ಸಂತ್ರಸ್ತೆಯ ಮುಂದೆ ಅತ್ಯಾಚಾರದ ಇಂಚಿಂಚೂ ವಿವರ: ವಿಚಾರಣಾ ನ್ಯಾಯಾಲಯಕ್ಕೆ ಬಾಂಬೆ ಹೈಕೋರ್ಟ್ ಛೀಮಾರಿ

ವಿಚಾರಣೆಯ ಒಂದು ಹಂತದಲ್ಲಿ ಸಂತ್ರಸ್ತೆ ಗದ್ಗದಿತಳಾಗಿದ್ದಳು ಎಂಬುದನ್ನು ಗಮನಿಸಿದ ಪೀಠ, ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಆಗ ಪಾಟಿ ಸವಾಲಿಗೆ ತಡೆಯೊಡ್ಡಬೇಕಿತ್ತು ಎಂದು ಹೇಳಿದೆ.
Bombay High Court
Bombay High Court

ವಿಚಾರಣಾ ನ್ಯಾಯಾಲಯವೊಂದರಲ್ಲಿ ಪಾಟಿ ಸವಾಲಿನ ವೇಳೆ ಪ್ರತಿವಾದಿ ಪರ ವಕೀಲರು ಅತ್ಯಾಚಾರ ಕೃತ್ಯದ ಇಂಚಿಂಚೂ ವಿವರಗಳನ್ನು ಸಂತ್ರಸ್ತೆಯ ಮುಂದೆ ಸಲಹೆಯ ಹೆಸರಿನಲ್ಲಿ ನಡೆಸಿರುವುದು ಬಾಂಬೆ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ. ಸಂತ್ರಸ್ತೆಗೆ ಕೇಳಲಾದ ಪ್ರಶ್ನೆಗಳು ಸೂಕ್ತ ರೀತಿಯ ಪಾಟಿ ಸವಾಲು ಎಂದು ಕರೆಸಿಕೊಳ್ಳುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಾಧನಾ ಎಸ್ ಜಾಧವ್ ಮತ್ತು ಎಸ್ ವಿ ಕೊತ್ವಾಲ್ ಅವರಿದ್ದ ಪೀಠ ಇತ್ತೀಚೆಗೆ ತಿಳಿಸಿದೆ.

“ಸಲಹೆ ನೀಡುವ ನೆಪದಲ್ಲಿ ಕೃತ್ಯದ ಇಂಚಿಂಚೂ ವಿವರಗಳನ್ನು ಸಾಕ್ಷಿಗೆ ನೀಡಲಾಯಿತು” ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ ಅಂತಹ ಪಾಟಿ ಸವಾಲಿಗೆ ಅವಕಾಶ ನೀಡಿದ ವಿಚಾರಣಾ ನ್ಯಾಯಾಧೀಶರ ನಿಷ್ಕ್ರಿಯತೆಯ ಬಗ್ಗೆಯೂ ಪೀಠ ಬೇಸರ ವ್ಯಕ್ತಪಡಿಸಿತು. ವಿಚಾರಣೆಯ ಒಂದು ಹಂತದಲ್ಲಿ ಸಂತ್ರಸ್ತೆ ಗದ್ಗದಿತಳಾಗಿದ್ದಳು ಎಂಬುದನ್ನು ಗಮನಿಸಿದ ಪೀಠ, “ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ಆಗ ಪಾಟಿ ಸವಾಲಿಗೆ ತಡೆಯೊಡ್ಡಬೇಕಿತ್ತು” ಎಂದು ಹೇಳಿತು.

ಇಂತಹ ಪ್ರಶ್ನೆಗಳಿಗೆ ಅನುವು ಮಾಡಿಕೊಡುವಲ್ಲಿ ನ್ಯಾಯಾಧೀಶರು ಅಳವಡಿಸಿಕೊಂಡ ನಿಷ್ಕ್ರಿಯ ಧೋರಣೆ ನಮಗೆ ಹೆಚ್ಚು ನೋವು ತಂದಿದೆ. ಈ ಸಲಹೆಗಳು ಮೂಲಭೂತ ಘನತೆಯ ಎಲ್ಲಾ ಎಲ್ಲೆಗಳನ್ನು ಮೀರಿವೆ.
- ಬಾಂಬೆ ಹೈಕೋರ್ಟ್

ಹೈಕೋರ್ಟ್‌ ಹೇಳಿದ ಪ್ರಮುಖ ಅಂಶಗಳು:

  • ನ್ಯಾಯಾಧೀಶರ ಜಡ ಧೋರಣೆ ನಮಗೆ ಹೆಚ್ಚು ನೋವು ತಂದಿದೆ. ಇಂತಹ ಸಲಹೆಗಳು ಮೂಲಭೂತ ಘನತೆಯ ಎಲ್ಲಾ ಎಲ್ಲೆಗಳನ್ನು ಮೀರಿವೆ.

  • ಅಪಮಾನಕರ ಅಥವಾ ಕಿರಿಕಿರಿಯಾಗುವಂತಹ ಯಾವುದೇ ಪ್ರಶ್ನೆಗಳನ್ನು ನಿರ್ಬಂಧಿಸುವ ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 152 ಅನ್ನು ವಿಚಾರಣಾ ನ್ಯಾಯಾಲಯ ಉಲ್ಲಂಘಿಸಿದೆ.

  • ಸೂಕ್ತವಲ್ಲ ಅಥವಾ ಸಾಕ್ಷಿಯ ಘನತೆಗೆ ತಕ್ಕುದಲ್ಲ ಎನಿಸುವಂತಹ ಆರೋಪಗಳಿಗೆ ಉತ್ತರಿಸದಂತೆ ಸಾಕ್ಷಿಗೆ ಹೇಳುವುದು ವಿಚಾರಣಾ ನ್ಯಾಯಾಧೀಶರ ಕರ್ತವ್ಯವಾಗಿದೆ.

  • ಸಲಹೆಗಳ ಬಗ್ಗೆ ಆಕ್ಷೇಪಿಸದೇ ಇರುವ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರ ನಿಷ್ಕ್ರಿಯತೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಪೀಠ.

  • ಈ ಎಲ್ಲ ಅಸಮಾಧಾನಗಳ ನಡುವೆಯೂ ವಿಚಾರಣೆಯನ್ನು ನಡೆಸಿದ ಮತ್ತು ಅದನ್ನು ಪೂರ್ಣಗೊಳಿಸಿದ ವಿಚಾರಣಾ ನ್ಯಾಯಾಲಯದ ಪ್ರಾಮಾಣಿಕ ಯತ್ನಗಳ ಬಗ್ಗೆ ಹೈಕೋರ್ಟ್‌ ಮೆಚ್ಚುಗೆಯನ್ನೂ ಸೂಚಿಸಿದೆ.

ಏಪ್ರಿಲ್ 2010 ರಲ್ಲಿ ಆರೋಪಿಗಳಾದ ರಂಜಿತ್ ಗಾಡೆ, ಗಣೇಶ್ ಕಾಂಬ್ಳೆ ಮತ್ತು ಸುಭಾಷ್ ಭೋಸಲೆ ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗಿದ್ದರು. ವಿಚಾರಣೆ ವೇಳೆ ಪ್ರಾಸಿಕ್ಯೂಷನ್‌ 24 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
Ranjeet_Shahaji_Gade___Anr__v__State_of_Maharashtra.pdf
Preview

Related Stories

No stories found.
Kannada Bar & Bench
kannada.barandbench.com