ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಅವರ ಕುಟುಂಬಕ್ಕೆ ಸೇರಿದ ಅಕ್ರಮ ಆಸ್ತಿಯ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಬಾಂಬೆ ಹೈಕೋರ್ಟ್ ವಜಾ ಮಾಡಿದೆ [ಗೌರಿ ಭಿಡೆ ವರ್ಸಸ್ ಭಾರತ ಸರ್ಕಾರ ಮತ್ತು ಇತರರು].
ಬೃಹನ್‌ಮುಂಬೈ ಮಹಾನಗರ ಪಾಲಿಕೆಯಲ್ಲಿನ (ಬಿಎಂಸಿ) ಭ್ರಷ್ಟಾಚಾರ ಮತ್ತು ಠಾಕ್ರೆ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿಯಲ್ಲಿ ಏಕಾಏಕಿ ಏರಿಕೆಯಾಗಿದೆ ಎಂಬ ವಾದವನ್ನು ನ್ಯಾಯಮೂರ್ತಿಗಳಾದ ಧೀರಜ್ ಸಿಂಗ್ ಠಾಕೂರ್ ಮತ್ತು ವಾಲ್ಮೀಕಿ ಎಸ್ ಎ ಮೆನಜಿಸ್ ಅವರ ನೇತೃತ್ವದ ವಿಭಾಗೀಯ ಪೀಠವು ಅಲ್ಲಗಳೆದಿದೆ.
ಬಿಎಂಸಿಯಲ್ಲಿನ ಆರೋಪಿತ ಭ್ರಷ್ಟಾಚಾರ ಮತ್ತು ಠಾಕ್ರೆ ಕುಟುಂಬದ ಆಸ್ತಿಯಲ್ಲಿನ ಏರಿಕೆಗೆ ಸಂಬಂಧಿಸಿದಂತೆ ಯಾವುದೇ ತೆರನಾದ ನೇರ ಸಂಪರ್ಕವಿಲ್ಲ. ಅರ್ಜಿದಾರರು ಬೀಸು ತನಿಖೆ ನಡೆಸಲು ಬಯಸುತ್ತಿದ್ದಾರೆ ಎಂದು ಪೀಠವು ಅರ್ಜಿ ವಜಾ ಮಾಡುವಾಗ ಹೇಳಿದೆ.
ಉದ್ಧವ್ ಠಾಕ್ರೆ, ಪುತ್ರ ಆದಿತ್ಯ, ಪತ್ನಿ ರಶ್ಮಿ ಅವರು ಯಾವುದೇ ತೆರನಾದ ಸೇವೆ, ವೃತ್ತಿ ಅಥವಾ ಉದ್ಯಮವನ್ನು ತಮ್ಮ ಅಧಿಕೃತ ಆದಾಯದ ಮೂಲ ಎಂದು ಹೇಳಿಲ್ಲ. ಆದರೆ, ಮುಂಬೈ ಮತ್ತು ರಾಯಗಡ ಜಿಲ್ಲೆಯಲ್ಲಿ ಅವರು ಕೋಟ್ಯಂತರ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ ಎಂದು ಅರ್ಜಿದಾರೆ ಗೌರಿ ಭಿಡೆ ಹೇಳಿದ್ದಾರೆ. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಇತರೆ ಮಾಧ್ಯಮ ಸಂಸ್ಥೆಗಳು ನಷ್ಟದ ಬಾಬ್ತಿನಲ್ಲಿರುವಾಗ ಠಾಕ್ರೆ ಕುಟುಂಬದ ಒಡೆತನದಲ್ಲಿರುವ ಮಾರ್ಮಿಕ್ ಮತ್ತು ಸಾಮ್ನಾ ಬರೋಬ್ಬರಿ ₹42 ಕೋಟಿ ವಹಿವಾಟು ತೋರಿಸಿದ್ದು, ₹11.5 ಕೋಟಿ ಲಾಭ ಮಾಡಿರುವುದಾಗಿ ದಾಖಲೆ ನೀಡಿದ್ದವು ಎಂದು ಅರ್ಜಿದಾರರು ಆಶ್ಚರ್ಯ ವ್ಯಕ್ತಪಡಿಸಿದ್ದರು.