ಇಸ್ರೇಲ್ ಮೂಲದ ಬೇಹು ತಂತ್ರಾಂಶ ಪೆಗಸಸ್ ಬಳಸಿ ಮೊಬೈಲ್ ಫೋನ್‌ನಿಂದ ನ್ಯಾಯಾಲಯದ ದಾಖಲೆಗಳನ್ನು ಪಡೆದಿದ್ದಾರೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ವಿರುದ್ಧ ನಾಗಪುರದ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ನಾಗಪುರ ಪೀಠ ವಜಾಗೊಳಿಸಿದೆ.
ಪೆಗಗಸ್ ಸಾಫ್ಟ್‌ವೇರ್ ಬಳಸಿ ತಮ್ಮ ಮೊಬೈಲ್ ಫೋನ್‌ನಿಂದ ಕ್ರಿಮಿನಲ್ ರಿಟ್ ಅರ್ಜಿಯ ಡಿಜಿಟಲ್ ಪ್ರತಿಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿ ಫಡ್ನವೀಸ್ ಮತ್ತು ಅವರ ಸಹಚರರ ವಿರುದ್ಧ ಆಗಸ್ಟ್ 10ರಂದು ವಕೀಲ ಸತೀಶ್ ಉಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣವೊದರಲ್ಲಿ ಮಧ್ಯಪ್ರವೇಶಿಸಲು ಕೋರಿ ಫಡ್ನವಿಸ್ ಸಹವರ್ತಿಗಳು ಆ ಪ್ರತಿಗಳನ್ನು ಸಲ್ಲಿಸಿದ್ದರು.
ಆದರೆ ಫಡ್ನವಿಸ್ ಅವರ ರಾಜಕೀಯ ಪ್ರಭಾವದಿಂದಾಗಿ ಪೊಲೀಸ್ ಅಧಿಕಾರಿಗಳು ಆ ಕುರಿತಂತೆ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ದೂರನ್ನು ಪರಿಗಣಿಸಬೇಕು ಮತ್ತು ಸಮಗ್ರ ತನಿಖೆ ನಡೆಸುವಂತೆ ನಾಗಪುರ ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಆದರೆ “ಅರ್ಜಿಯಲ್ಲಿ ಹುರುಳಿಲ್ಲ. ಅರ್ಜಿದಾರರು ಸಲ್ಲಿಸಿದ ದೂರಿನ ಬಗ್ಗೆ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ನಾವು ಭಾವಿಸುತ್ತೇವೆ” ಎಂಬುದಾಗಿ ತಿಳಿಸಿದ ನ್ಯಾ. ವಿ ಎಂ ದೇಶಪಾಂಡೆ ಮತ್ತು ನ್ಯಾ. ಅಮಿತ್ ಬಿ ಬೋರ್ಕರ್ ಅವರಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿತು. ಇದೇ ಘಟನೆಗೆ ಸಂಬಂಧಿಸಿದಂತೆ ಇದೇ ಪ್ರತಿವಾದಿಗಳ ವಿರುದ್ಧ ಮತ್ತೊಂದು ಅರ್ಜಿಯ ಮೂಲಕ ಉಕೆ ಅವರು ಪರಿಹಾರ ಕೋರಿದ್ದಾರೆ ಎಂದು ಕೂಡ ನ್ಯಾಯಾಲಯ ಇದೇ ವೇಳೆ ತಿಳಿಸಿತು.