2019ರ ಲೋಕಸಭಾ ಚುನಾವಣೆಯಲ್ಲಿ ನಾಗಪುರ ಕ್ಷೇತ್ರದಿಂದ ತಾವು ಚುನಾಯಿತರಾಗಿರುವುದನ್ನು ಪ್ರಶ್ನಿಸಿ ಮೊಹಮ್ಮದ್ ನಫೀಸ್ ಖಾನ್ ಎಂಬವರು ಸಲ್ಲಿಸಿದ್ದ ಚುನಾವಣಾ ಮನವಿಯನ್ನು ವಜಾಗೊಳಿಸುಂತೆ ಕೋರಿ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ಮೆಟ್ಟಿಲೇರಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮನವಿಯನ್ನು ನ್ಯಾಯಾಲಯವು ಈಚೆಗೆ ವಜಾಗೊಳಿಸಿದೆ (ಮೊಹಮ್ಮದ್ ನಫೀಸ್ ಖಾನ್ ವರ್ಸಸ್ ಕೇಂದ್ರ ಚುನಾವಣಾ ಆಯೋಗ).
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗಡ್ಕರಿ ಅವರು ತಮ್ಮ ಉಮೇದುವಾರಿಕೆಯ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ನಾಗಪುರದ ಮತದಾರ ಮೊಹಮ್ಮದ್ ನಫೀಸ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಖಾನ್ ಸಲ್ಲಿಸಿರುವ ಮನವಿಯಲ್ಲಿ ವ್ಯಾಜ್ಯ ಕಾರಣ ಉಲ್ಲೇಖಿಸದೇ ಇರುವುದರಿಂದ ಅದನ್ನು ವಜಾಗೊಳಿಸುವಂತೆ ಗಡ್ಕರಿ ನ್ಯಾಯಾಲಯವನ್ನು ಕೋರಿದ್ದರು. ಮನವಿದಾರರು ಅರ್ಜಿಯಲ್ಲಿ ವ್ಯಾಜ್ಯ ಕಾರಣವನ್ನು ಉಲ್ಲೇಖಿಸಿರುವುದರಿಂದ ವಿಚಾರಣೆ ಮುಂದುವರಿಯಲಿದೆ ಎಂದು ನ್ಯಾಯಮೂರ್ತಿ ಎ ಎಸ್ ಚಂದೂರ್ಕರ್ ಅವರಿದ್ದ ಏಕಸದಸ್ಯ ಪೀಠವು ಆದೇಶ ಮಾಡಿದೆ.
ಗಡ್ಕರಿ ಮತ್ತೊಂದು ಮನವಿ ಸಲ್ಲಿಸಿದ್ದು ಅದರಲ್ಲಿ ಖಾನ್ ಅವರು ಕೆರಳಿಸುವ, ವಿವಾದಾತ್ಮಕ ಹಾಗೂ ಕ್ಷುಲ್ಲಕ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಇದರಿಂದ ಚುನಾವಣಾ ಮನವಿಯ ವಿಚಾರಣೆಯು ತಡವಾಗಲಿದೆ ಎಂಬ ಗಡ್ಕರಿ ವಾದವನ್ನು ಭಾಗಶಃ ನ್ಯಾಯಾಲಯ ಒಪ್ಪಿಕೊಂಡಿದೆ.
ಗಡ್ಕರಿ ಸಲ್ಲಿಸಿರುವ ಉಮೇದುವಾರಿಕೆ ಅಫಿಡವಿಟ್ ಪರಿಶೀಲಿಸಿ, ಖಾನ್ ಅವರ ವಾದವನ್ನು ಪರಿಗಣಿಸಿರುವ ನ್ಯಾಯಾಲಯವು ಗಡ್ಕರಿ ಘೋಷಿಸಿರುವ ಆದಾಯ ಮೂಲವನ್ನು ಪರಿಶೀಲನೆ ನಡೆಸಬೇಕಿದೆ ಎಂದು ಹೇಳಿದೆ. ವೈಯಕ್ತಿಕವಾಗಿ ಯಾವುದೇ ತೆರನಾದ ಕೃಷಿ ಭೂಮಿ ಹೊಂದಿಲ್ಲ ಎಂದು ಚುನಾವಣಾ ಅಫಿಡವಿಟ್‌ನಲ್ಲಿ ಹೇಳಿಕೊಂಡಿರುವ ಗಡ್ಕರಿ ಅವರು ಆದಾಯ ಮೂಲ ಕೃಷಿ ಎಂದು ತೋರಿಸಿದ್ದಾರೆ ಎಂದು ಪೀಠ ಹೇಳಿದೆ.