ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾನಹಾನಿಕರ ಭಾಷಣಕ್ಕೆ ಸಂಬಂಧಿಸಿದಂತೆ ಥಾಣೆಯ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಆರ್‌ಎಸ್‌ಎಸ್ ಕಾರ್ಯಕರ್ತ ರಾಜೇಶ್ ಕುಂಟೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದೆ.
ಅರ್ಜಿ ವಜಾಗೊಳಿಸಿದ ನ್ಯಾ. ರೇವತಿ ಮೊಹಿತೆ ಡೆರೆ ಅವರು ಥಾಣೆಯ ಭಿವಾನಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶ ಎತ್ತಿಹಿಡಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಗೆ ಹಿಂದೂ ಸಂಘಟನೆ ಆರ್‌ಎಸ್‌ಎಸ್ ಕಾರಣ ಎಂದು 2014ರಲ್ಲಿ ರಾಹುಲ್ ಮಾಡಿದ್ದರೆನ್ನಲಾದ ಮಾನಹಾನಿಕರ ಭಾಷಣಕ್ಕೆ ಸಂಬಂಧಿಸಿದಂತೆ ಕುಂಟೆ ಭಿವಾನಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು. ಅವರ ಭಾಷಣ ಮಾಡಿದ್ದರ ಬಗ್ಗೆ ಒಪ್ಪಿಕೊಳ್ಳಬೇಕು ಇಲ್ಲವೇ ನಿರಾಕರಿಸಬೇಕು ಎಂದು ಕೋರಿ ಕುಂಟೆ ಅವರು ಸಲ್ಲಿಸಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಿರಸ್ಕರಿಸಿತ್ತು.
ಇತ್ತ ಕ್ರಿಮಿನಲ್ ದೂರು ರದ್ದುಗೊಳಿಸಬೇಕೆಂದು ಕೋರಿ ರಾಹುಲ್ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ ತಮ್ಮ ರಿಟ್ ಅರ್ಜಿಯಲ್ಲಿ ಅವರು ಭಾಷಣದ ಲಿಪ್ಯಂತರ ಪ್ರತಿಯನ್ನೂ ಸಲ್ಲಿಸಿದ್ದರು. ರಾಹುಲ್ ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದರೂ, ಕುಂಟೆ ಅವರು, “ತಮ್ಮ ಭಾಷಣದ ಪ್ರತಿಯನ್ನು ಅರ್ಜಿಯಲ್ಲಿ ಲಗತ್ತಿಸುವ ಮೂಲಕ, ರಾಹುಲ್ ಅವರ ಬಳಿ ಭಾಷಣವನ್ನು ಒಪ್ಪಿಕೊಂಡಿದ್ದಾರೆ. ಅರ್ಜಿಯಲ್ಲಿ ಅವರು ವಿವಿಧ ಕಾರಣಗಳಿಗಾಗಿ ಭಾಷಣವನ್ನು ಸಮರ್ಥಿಸಲು ಪ್ರಯತ್ನಿಸಿದ್ದರು" ಎಂದು ಅವರು ಪ್ರತಿಪಾದಿಸಿದರು. ವಕೀಲ ತಪನ್ ಥಟ್ಟೆ ಅವರು ಹೈಕೋರ್ಟ್‌ನಲ್ಲಿ ಕುಂಟೆ ಅವರನ್ನು ಪ್ರತಿನಿಧಿಸಿದ್ದರು.
ರಾಹುಲ್ ಪರ ವಾದ ಮಂಡಿಸಿದ ವಕೀಲ ಕುಶಾಲ್ ಮೊರ್, ವಿಚಾರಣೆಯನ್ನು ವಿಳಂಬಗೊಳಿಸುವ ಮತ್ತು ಹಾಳುಗೆಡಹುವ ಉದ್ದೇಶದಿಂದ ಮನವಿ ಸಲ್ಲಿಸಲಾಗಿದೆ ಎಂದು ವಾದಿಸಿದರು. 2019ರಿಂದಲೂ ಪ್ರಸ್ತುತ ಅರ್ಜಿಯ ವಿಚಾರಣೆಗೆ ಕುಂಟೆ ಯಾವುದೇ ಪ್ರಯತ್ನ ಮಾಡಲಿಲ್ಲ. ಭಾಷಣದ ಲೇಖನ ಪ್ರತಿ ಅರ್ಜಿದಾರರ (ಕುಂಟೆ) ಸೃಷ್ಟಿಯಾಗಿದೆ ಎಂದು ಮೊರ್ ವಾದಿಸಿದ್ದು ಅದನ್ನು ವಿಚಾರಣೆಯ ಸಮಯದಲ್ಲಿ ಸಾಬೀತುಪಡಿಸಲಾಗುವುದು ಎಂದು ತಿಳಿಸಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]