ಭ್ರಷ್ಟಾಚಾರ ಪ್ರಕರಣ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್‌ಗೆ ಬಾಂಬೆ ಹೈಕೋರ್ಟ್ ಜಾಮೀನು

ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸುಮಾರು ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ ದೇಶಮುಖ್ ಅವರು ಇದೀಗ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
Anil Deshmukh with Bombay Hc
Anil Deshmukh with Bombay Hc
Published on

ಸಿಬಿಐ ಹೂಡಿದ್ದ ಭ್ರಷ್ಟಾಚಾರ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಅವರಿಗೆ ಬಾಂಬೆ ಹೈಕೋರ್ಟ್‌ ಸೋಮವಾರ ಜಾಮೀನು ನೀಡಿದೆ.

ಡಿಸೆಂಬರ್ 8 ರಂದು ಅರ್ಜಿಯನ್ನು ಕಾಯ್ದಿರಿಸಿದ್ದ  ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್  ಅವರು ಇಂದು ತೀರ್ಪು ಪ್ರಕಟಿಸಿದರು. ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸುಮಾರು ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿದ್ದ ದೇಶ್‌ಮುಖ್‌ ಅವರು ಇದೀಗ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.

ದೇಶ್‌ಮುಖ್ ಅವರು ಒಂದೇ ಆರೋಪಕ್ಕೆ ಸಂಬಂಧಿಸಿದ ಎರಡು ತನಿಖೆ ಎದುರಿಸುತ್ತಿದ್ದರು. ಭ್ರಷ್ಟಾಚಾರದ ಆರೋಪದಡಿ ಸಿಬಿಐ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ದೂರು ದಾಖಲಿಸಿದ್ದವು.

ಇ ಡಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೇಶ್‌ಮುಖ್ ಅವರಿಗೆ ಬಾಂಬೆ ಹೈಕೋರ್ಟ್ ಕಳೆದ ಅಕ್ಟೋಬರ್ 4 ರಂದು ಜಾಮೀನು ನೀಡಿತ್ತು. ಆದರೆ ಸಿಬಿಐ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಜಾಮೀನು ನಿರಾಕರಿಸಿತ್ತು. ಇದನ್ನು ದೇಶ್‌ಮುಖ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ದೇಶ್‌ಮುಖ್‌ ಪರ ಹಾಜರಾದ ಹಿರಿಯ ವಕೀಲ ವಿಕ್ರಮ್ ಚೌಧರಿ ಮತ್ತು ವಕೀಲ ಅನಿಕೇತ್ ನಿಕಮ್ ಅವರು ಎರಡೂ ಪ್ರಕರಣಗಳು ಪರಸ್ಪರ ಸಂಬಂಧ ಹೊಂದಿರುವುದರಿಂದ ಇ ಡಿ ಪ್ರಕರಣದಲ್ಲಿ ದೇಶ್‌ಮುಖ್‌ ಅವರಿಗೆ ಜಾಮೀನು ನೀಡಲಾಗಿದ್ದು ಅದರಂತೆ ಸಿಬಿಐ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಬೇಕು ಎಂದು ವಾದಿಸಿದ್ದರು.

ಏಳು ವರ್ಷಗಳ ಗರಿಷ್ಠ ಜೈಲು ಶಿಕ್ಷೆ ವಿಧಿಸಬಹುದಾದ ಪ್ರಕರಣದಲ್ಲಿ ದೇಶ್‌ಮುಖ್‌ ಅವರು ಒಂದು ವರ್ಷಕ್ಕೂ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ್ದಾರೆ ಎಂದು ಚೌಧರಿ ವಾದ ಮಂಡಿಸಿದ್ದರು.

ಮುಂಬೈನ ವಜಾಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಸಿಬಿಐ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿಸಿದೆ (ಅಪ್ರೂವರ್). ಆದರೆ, ಇ ಡಿ ಪ್ರಕರಣದಲ್ಲಿ ದೇಶ್‌ಮುಖ್‌ ಅವರಿಗೆ ಜಾಮೀನು ನೀಡುವ ವೇಳೆ ವಾಜೆ ಅವರ ಹೇಳಿಕೆಗಳ ಪ್ರಾಮಾಣಿಕತೆಯ ಬಗ್ಗೆ ಹೈಕೋರ್ಟ್ ಅನುಮಾನ ವ್ಯಕ್ತಪಡಿಸಿತ್ತು ಎಂದು ಚೌಧರಿ ನ್ಯಾಯಾಲಯದ ಗಮನಕ್ಕೆ ತಂದರು. ಸಿಬಿಐ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್  ವಾದ ಮಂಡಿಸಿದ್ದರು.

Kannada Bar & Bench
kannada.barandbench.com