ದೆಹಲಿ ಗಲಭೆ: ಸಾಕ್ಷಿಗಳು, ಕೋರ್ಟಿನ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಪ್ರಾಸಿಕ್ಯೂಷನ್‌ಗೆ ದಂಡ ವಿಧಿಸಿದ ನ್ಯಾಯಾಲಯ

ಸೂಚನೆ ನೀಡಿದ್ದರೂ ಗಲಭೆ ಪ್ರಕರಣಗಳಲ್ಲಿ ಅನಗತ್ಯ ಸಾಕ್ಷಿಗಳನ್ನು ಕೈಬಿಡದ ಪ್ರಾಸಿಕ್ಯೂಷನನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ತರಾಟೆಗೆ ತೆಗೆದುಕೊಂಡರು.
ದೆಹಲಿ ಗಲಭೆ: ಸಾಕ್ಷಿಗಳು, ಕೋರ್ಟಿನ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಪ್ರಾಸಿಕ್ಯೂಷನ್‌ಗೆ ದಂಡ ವಿಧಿಸಿದ ನ್ಯಾಯಾಲಯ
A1

ಗಲಭೆ ಪ್ರಕರಣಗಳಲ್ಲಿ ಅನಗತ್ಯ ಸಾಕ್ಷಿಗಳನ್ನು ಕೈಬಿಡುವಂತೆ ಪದೇ ಪದೇ ನ್ಯಾಯಾಲಯ ಸೂಚಿಸಿದ್ದರೂ ಪ್ರಾಸಿಕ್ಯೂಷನ್‌ ಕ್ರಮ ಕೈಗೊಂಡಿಲ್ಲ ಎಂದು ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಮಾಚಲ ಪ್ರಾಸಿಕ್ಯೂಷನ್‌ಅನ್ನು ತರಾಟೆಗೆ ತೆಗೆದುಕೊಂಡು ದಂಡ ವಿಧಿಸಿದ ಘಟನೆ ಇತ್ತೀಚೆಗೆ ನಡೆದಿದೆ.

“ಗಲಭೆ ಪ್ರಕರಣಗಳಲ್ಲಿ ಅನಗತ್ಯ ಸಾಕ್ಷಿಗಳನ್ನು ಕೈಬಿಡುವಂತೆ ಮತ್ತೆ ಮತ್ತೆ ನ್ಯಾಯಾಲಯ ಸೂಚಿಸಿದ್ದರೂ ಸಾಕ್ಷಿಗಳ ಮತ್ತು ನ್ಯಾಯಾಲಯದ ಸಮಯದ ಬಗ್ಗೆಯಾಗಲಿ, ಸಾರ್ವಜನಿಕ ಬೊಕ್ಕಸದ ಬಗ್ಗೆಯಾಗಲಿ ಗೌರವ ತೋರಿಲ್ಲ. ಹೀಗಾಗಿ ಪ್ರಾಸಿಕ್ಯೂಷನ್‌ಗೆ ₹ 5,000 ದಂಡ ವಿಧಿಸುವಂತಾಗಿದೆ. ಮುಂದಿನ ವಿಚಾರಣೆ ಹೊತ್ತಿಗೆ ದಂಡದ ಮೊತ್ತವನ್ನು ಪಾವತಿಸಬೇಕು. ಈಶಾನ್ಯ ವಿಭಾಗದ ಡಿಸಿಪಿಯು ಹೊಣೆಗಾರಿಕೆಯನ್ನು ಹೊರಿಸುವ ಸಲುವಾಗಿ ವಿಚಾರಣೆ ನಡೆಸಬೇಕು ಹಾಗೂ ಕಾರಣಕರ್ತರಾದವರಿಂದ ದಂಡದ ಮೊತ್ತವನ್ನು ವಸೂಲಿ ಮಾಡುವ ಹೊಣೆ ವಹಿಸಿಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.

Also Read
ದೆಹಲಿ ಗಲಭೆ: ರಾಜಕಾರಣಿಗಳು, ನಿವೃತ್ತ ನ್ಯಾಯಮೂರ್ತಿಯನ್ನು ಪಕ್ಷಕಾರರನ್ನಾಗಿಸಲು ದೆಹಲಿ ಹೈಕೋರ್ಟ್‌ ಸಮ್ಮತಿ

ಎಲ್ಲಾ ದಂಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು ಮತ್ತು ತನಿಖಾಧಿಕಾರಿಗಳು ತಮ್ಮ ಪ್ರಕರಣಗಳನ್ನು ಪರಿಶೀಲಿಸಿ ಯಾವುದೇ ಅನಗತ್ಯ ಸಾಕ್ಷಿಗಳಿದ್ದರೆ ಅವರ ವಿರುದ್ಧ ಸಮನ್ಸ್‌ ನೀಡದೆ ಅವರನ್ನು ಕೈಬಿಡಲು ಅರಿವು ಮೂಡಿಸಬೇಕು ಎಂದು ಕೂಡ ನ್ಯಾಯಾಲಯ ಡಿಸಿಪಿ ಅವರಿಗೆ ಹೇಳಿದೆ.

ಪ್ರಸಕ್ತ ಪ್ರಕರಣದಲ್ಲಿ ಘಟನೆಯು ಫೆಬ್ರವರಿ 24 ಮತ್ತು 25, 2020ರ ಮಧ್ಯರಾತ್ರಿ12ರಿಂದ 1 ಗಂಟೆ ಅವಧಿಯ ನಡುವೆ ನಡೆದಿರುವುದು ವರದಿಯಾಗಿದ್ದು ಸಿಆರ್‌ಪಿಸಿ ಸೆಕ್ಷನ್ 161ರ ಅಡಿಯಲ್ಲಿ ಪೊಲೀಸರ ಮುಂದೆ ಹೇಳಿಕೆಯನ್ನು ಫೆಬ್ರವರಿ 25, 2020ರಂದು ಸಂಜೆ 6 ಗಂಟೆಗೆ ದಾಖಲಿಸಿದ್ದರಿಂದ ಸಾಕ್ಷಿಯನ್ನು ಪರೀಕ್ಷೆಯಿಲ್ಲದೆ ಕೈಬಿಡಬೇಕಾಯಿತು. ಆದ್ದರಿಂದ ಅಂತಹ ಸಾಕ್ಷಿ ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿಲ್ಲ ಎಂದು ತಿಳಿಸಿದ ನ್ಯಾಯಾಲಯ ಅವರನ್ನು ಪ್ರಕರಣದಿಂದ ಕೈಬಿಟ್ಟಿತು. ನವೆಂಬರ್ 30 ರಂದು ಸಾಕ್ಷಿಗಳ ವಿಚಾರಣೆ ಮುಂದುವರೆಯಲಿದೆ.

ಆದೇಶದ ಪ್ರತಿಯನ್ನು ಇಲ್ಲಿ ಓದಿ:

Attachment
PDF
State_v__Shahnawaz___Ors.pdf
Preview
Kannada Bar & Bench
kannada.barandbench.com