ಟಿಆರ್‌ಪಿ ಹಗರಣ: ಬಾರ್ಕ್ ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು

ರೂ. 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸಬೇಕು‌, ಆರು ತಿಂಗಳವರೆಗೆ ಪ್ರತಿ ತಿಂಗಳ ಮೊದಲ ಶನಿವಾರ ಮುಂಬೈ ಅಪರಾಧ ವಿಭಾಗಕ್ಕೆ ಹಾಜರಾತಿ ಹಾಕಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಟಿಆರ್‌ಪಿ ಹಗರಣ: ಬಾರ್ಕ್ ಸಿಇಒ ಪಾರ್ಥೋ ದಾಸ್‌ಗುಪ್ತಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು
Partho Dasgupta, Bombay High Court

ಟಿಆರ್‌ಪಿ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಪ್ರಸ್ತುತ ಮಹಾರಾಷ್ಟ್ರದ ತಲೋಜಾ ಜೈಲಿನಲ್ಲಿರುವ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ಮಾಜಿ ಕಾರ್ಯನಿರ್ವಹಣಾಧಿಕಾರಿ ಪಾರ್ಥೋ ದಾಸ್‌ಗುಪ್ತಾ ಅವರಿಗೆ ಬಾಂಬೆ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ರೂ. 2 ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸಬೇಕು‌, ಆರು ತಿಂಗಳವರೆಗೆ ಪ್ರತಿ ತಿಂಗಳ ಮೊದಲ ಶನಿವಾರ ಮುಂಬೈ ಅಪರಾಧ ವಿಭಾಗಕ್ಕೆ ಹಾಜರಾತಿ ಹಾಕಬೇಕು ಎಂದು ಸೂಚಿಸಲಾಗಿದೆ.

ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಪಿ ಡಿ ನಾಯಕ್ ಅವರು ಎರಡು ವಾರಗಳ ಹಿಂದೆ ತೀರ್ಪು ಕಾಯ್ದಿರಿಸಿದ್ದರು. ಸಿಆರ್‌ಪಿಸಿ ಸೆಕ್ಷನ್‌ 439ರ ಅಡಿಯಲ್ಲಿ ಅರ್ಹತೆ ಮತ್ತು ವೈದ್ಯಕೀಯ ಆಧಾರದ ಮೇಲೆ ಪಾರ್ಥೋ ಜಾಮೀನು ಕೋರಿದ್ದರು. ಮುಂಬೈ ಸೆಷನ್ಸ್‌ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

Also Read
ಅರ್ನಾಬ್‌ ಗೋಸ್ವಾಮಿ-ಪಾರ್ಥೊ ದಾಸ್‌ಗುಪ್ತ ಆಪ್ತರು: ಬಾಂಬೆ ಹೈಕೋರ್ಟ್‌ಗೆ ಮಹಾರಾಷ್ಟ್ರ ಸರ್ಕಾರದ ವಿವರಣೆ

ಜೆಜೆ ಆಸ್ಪತ್ರೆಯಿಂದ ತಲೋಜಾ ಜೈಲಿಗೆ ತಮ್ಮ ಕಕ್ಷೀದಾರರನ್ನು ರವಾನಿಸುತ್ತಿರುವ ಹಿನ್ನೆಲೆಯಲ್ಲಿ ತುರ್ತಾಗಿ ಮಧ್ಯಪ್ರವೇಶಿಸಬೇಕು ಎಂದು ವಕೀಲ ಅರ್ಜುನ್‌ ಸಿಂಗ್‌ ಠಾಕೂರ್‌ ಜನವರಿ 22ರಂದು ಸಂಜೆ 7ಗಂಟೆಗೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ತಲೋಜಾ ಜೈಲಿನ ವೈದ್ಯಾಧಿಕಾರಿಗಳು ಚಿಕಿತ್ಸೆ ಮುಂದುವರೆಸಲಿದ್ದಾರೆ ಎಂದು ಮುಖ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ದೀಪಕ್‌ ಠಾಕ್ರೆ ವಾದ ಮಂಡಿಸಿದ ಬಳಿಕ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನ್ಯಾಯಮೂರ್ತಿ ನಾಯಕ್‌ ನಿರಾಕರಿಸಿದ್ದರು.

ಪಾರ್ಥೋ ಅವರ ಪರ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಆಬಾದ್‌ ಪಾಂಡಾ ಮತ್ತು ವಕೀಲ ಶಾರ್ದೂಲ್‌ ಸಿಂಗ್‌ ತನಿಖೆ ಪೂರ್ಣಗೊಳ್ಳದೆ ಪಾರ್ಥೋ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸುವಂತಿಲ್ಲ ಎಂದು ವಾದಿಸಿದ್ದರು. ಮುಂಬೈ ಪೊಲೀಸರನ್ನು ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶಿಶಿರ್‌ ಹಿರೆ ಪ್ರತಿನಿಧಿಸಿದ್ದರು.

Related Stories

No stories found.
Kannada Bar & Bench
kannada.barandbench.com