ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ ಬ್ಯಾಂಕ್) ವಂಚನೆಗೆ ಸಂಬಂಧಿಸಿದಂತೆ ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ಪ್ರವರ್ತಕರಾದ ರಾಕೇಶ್ ವಾಧವಾನ್ ಮತ್ತು ಸಾರಂಗ್ ವಾಧವಾನ್ ಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.
ವಂಚನೆಗೆ ಸಂಬಂಧಿಸಿದ ಪ್ರಕರಣಗಳನ್ನು ಜಾರಿ ನಿರ್ದೇಶನಾಲಯ (ಇ ಡಿ) ಹಾಗೂ ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ತನಿಖೆ ನಡೆಸುತ್ತಿದೆ.
ಪ್ರಕರಣದಲ್ಲಿ ತಂದೆ- ಮಗ 3.5 ವರ್ಷಗಳಿಂದ ಜೈಲಿನಲ್ಲಿದ್ದಾರೆ ಎಂದು ನ್ಯಾಯಮೂರ್ತಿ ಎಸ್ ಎಂ ಮೋದಕ್ ಅವರಿದ್ದ ಏಕಸದಸ್ಯ ಪೀಠ ತಿಳಿಸಿತು.
ಇಒಡಬ್ಲ್ಯು ಪ್ರಕರಣದ ವಿಚಾರಣೆ ಶೀಘ್ರದಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆ ಇಲ್ಲದಿರುವುದರಿಂದ, ಜಾಮೀನು ನೀಡಬೇಕು ಎಂದು ಹೈಕೋರ್ಟ್ ತರ್ಕಿಸಿದೆ.
ಇಬ್ಬರೂ ಜೈಲುವಾಸದ ಗರಿಷ್ಠ ಅವಧಿಯ ಅರ್ಧಕ್ಕಿಂತ ಹೆಚ್ಚು ಸಮಯ ಕಳೆದಿದ್ದು ಜಾಮೀನಿಗೆ ಅರ್ಹರಾಗಿದ್ದಾರೆ ಎಂದು ನ್ಯಾಯಲಯ ವಿವರಿಸಿತು.
ಎರಡೂ ಪ್ರತ್ಯೆಕ ಪ್ರಕರಣಗಳಿಗೆ ಸಂಬಂಧಿಸಿದಂತೆ (ಇ ಡಿ ಮತ್ತು ಇಒಡಬ್ಲ್ಯು) ತಲಾ ₹ 5,00,000 ಜಾಮೀನು ಬಾಂಡ್ ಮತ್ತು ಶ್ಯೂರಿಟಿ ಆಧಾರದಲ್ಲಿ ಅವರ ಬಿಡುಗಡೆಗೆ ಆದೇಶ ನೀಡಿತು.
ಆರೋಪಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಅಬಾದ್ ಪೊಂಡಾ, ಶ್ಯೂರಿಟಿ ವ್ಯವಸ್ಥೆ ಮಾಡಲು ಸಮಯ ಹಿಡಿಯುವುದರಿಂದ ಸೀಮಿತ ಕ್ಯಾಶ್ ಬೇಲ್ ನೀಡುವಂತೆ ಮನವಿ ಮಾಡಿದರು. ಆದರೆ ಮನವಿಯನ್ನು ನ್ಯಾಯಾಲಯ ನಿರಾಕರಿಸಿತು.
ವಾಧವನ್‌ದ್ವಯರ ವಿರುದ್ಧ ಇನ್ನೂ ಮೂರು ಅಕ್ರಮ ಹಣ ವರ್ಗಾವಣ ಪ್ರಕರಣಗಳು ದಾಖಲಾಗಿವೆ ಎಂಬ ಕಾರಣಕ್ಕಾಗಿ ತನಿಖಾ ಸಂಸ್ಥೆಗಳು ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದವು. ಆದರೆ ಆರೋಪಿಗಳಿಗೆ ಜಾಮೀನು ನೀಡುವುದು ಸೂಕ್ತ ಎಂದು ನ್ಯಾಯಾಲಯ ಪರಿಗಣಿಸಿತು.
ಜಾಮೀನು ಷರತ್ತುಗಳನ್ನು ಪೂರೈಸಿದರೆ ತಂದೆ- ಮಗ ಆರ್ಥರ್ ರೋಡ್ ಜೈಲಿನಿಂದ ಹೊರಬರುವ ಸಾಧ್ಯತೆಗಳಿವೆ.