ತೆರಿಗೆ ವಂಚನೆ ಆರೋಪಿಗೆ ಜಾಮೀನು: ಇದು ಕೊಲೆ, ಭಯೋತ್ಪಾದನೆ ರೀತಿ ಘೋರ ಕೃತ್ಯವಲ್ಲ ಎಂದ ಬಾಂಬೆ ಹೈಕೋರ್ಟ್

144 ಕೋಟಿ ರೂಪಾಯಿ ವಂಚನೆ ಮಾಡಿದ ಆರೋಪಿ ಅರ್ಜಿದಾರರು ಈಗಾಗಲೇ ಬಾಕಿ ಇರುವ ತೆರಿಗೆ ಮೊತ್ತವಾಗಿ 81 ಲಕ್ಷ ರೂಪಾಯಿ ಪಾವತಿಸಿದ್ದಾರೆ ಎಂಬುದನ್ನು ನಾಗಪುರ ಪೀಠ ಹೇಳಿದೆ.
Nagpur Bench, Bombay High Court
Nagpur Bench, Bombay High Court

ತೆರಿಗೆ ವಂಚನೆಯ ಅಪರಾಧ ಕೊಲೆ ಅಥವಾ ಭಯೋತ್ಪಾದನೆಯಂತಹ ಘೋರ ಕೃತ್ಯವಲ್ಲ ಎಂದು ಈಚೆಗೆ ತಿಳಿಸಿರುವ ಬಾಂಬೆ ಹೈಕೋರ್ಟ್ ನಾಗಪುರ ಪೀಠ 144 ಕೋಟಿ ರೂಪಾಯಿಗಳ ತೆರಿಗೆ ವಂಚನೆ ಆರೋಪ ಹೊತ್ತಿದ್ದ ವ್ಯಕ್ತಿಗೆ ಜಾಮೀನು ನೀಡಿದೆ [ರಾಹುಲ್ ಕಮಲ್‌ ಕುಮಾರ್‌ ಜೈನ್ ವರ್ಸಸ್‌ ಸರಕು ಮತ್ತು ಸೇವಾ ತೆರಿಗೆ ಗುಪ್ತಚರ ಮಹಾನಿರ್ದೇಶಕರ ನಡುವಣ ಪ್ರಕರಣ].

ಆರೋಪಿ ಅರ್ಜಿದಾರ ರಾಹುಲ್ ಜೈನ್ 144 ಕೋಟಿ ರೂಪಾಯಿಗಳಲ್ಲಿ ಈಗಾಗಲೇ ಬಾಕಿ ಇರುವ ತೆರಿಗೆ ಮೊತ್ತವಾಗಿ 81 ಲಕ್ಷ ರೂಪಾಯಿ ಪಾವತಿಸಿದ್ದಾರೆ ಎಂದು ನ್ಯಾಯಮೂರ್ತಿ ಊರ್ಮಿಳಾ ಜೋಶಿ-ಫಾಲ್ಕೆ ಅಭಿಪ್ರಾಯಪಟ್ಟರು.

ಜೈನ್ ಅವರ ಬಂಧನದ ನಂತರ ಅವರ ವಿರುದ್ಧದ ತನಿಖೆ ಪೂರ್ಣಗೊಂಡಿದ್ದು, ಅವರು ಕೊಲೆ ಅಥವಾ ಭಯೋತ್ಪಾದನೆಯಂತಹ ಘೋರ ಅಪರಾಧದಲ್ಲಿ ಭಾಗಿಯಾಗಿಲ್ಲ ಆದ್ದರಿಂದ, ನ್ಯಾಯಾಲಯ ಜೈನ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅನುಮತಿಸಿತು.

Justice Urmila Joshi Phalke
Justice Urmila Joshi Phalke

ಅರ್ಜಿದಾರರು ಯಾವುದೇ ಸರಕು ಅಥವಾ ಸೇವೆ ಒದಗಿಸದೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆಯುವ ಮೂಲಕ 144 ಕೋಟಿ ರೂಪಾಯಿ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಜೈನ್ ಅವರ ಕಲ್ಪಿತ ದಾಖಲೆಗಳನ್ನು ಆಧರಿಸಿ ಜಿಎಸ್‌ಟಿ ನೋಂದಣಿ ಮಾಡಿಸಿದ್ದು, ಕಾನೂನುಬಾಹಿರವಾಗಿ ತೆರಿಗೆ ಮರುಪಾವತಿಸುವಂತೆ ಕೋರಿದ್ದಾರೆ ಎಂದು ಆರೋಪಿಸಲಾಗಿತ್ತು.

ಅರ್ನೇಶ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಅವಲೋಕನಗಳ ಪ್ರಕಾರ ತನ್ನ ಬಂಧನದ ಅಗತ್ಯವಿಲ್ಲ ಎಂದು ಜೈನ್ ಪ್ರತಿಪಾದಿಸಿದ್ದರು. ಅವರ ವಿರುದ್ಧ ಆರೋಪಿಸಲಾದ ಅಪರಾಧಗಳಿಗೆ ಏಳು ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆ ವಿಧಿಸಬಹುದು ಎಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಆದರೆ, ಅರ್ನೇಶ್ ಕುಮಾರ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಅವಲೋಕನಗಳು ಜಿಎಸ್‌ಟಿ ಇಲಾಖೆಯ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ ಎಂದು ಪ್ರಾಸಿಕ್ಯೂಷನ್ ವಾದಿಸಿತು.

ವಾದಗಳನ್ನು ಆಲಿಸಿದ ನ್ಯಾಯಾಲಯ ಯಾವ ಕಾಯಿದೆಯಡಿ ಬಂಧನವಾದರೂ ಪರಿಣಾಮ ಒಂದೇ ಆಗಿರುತ್ತದೆ ಎಂದಿತು.

"ಜೈಲಿನಲ್ಲಿ ಕೈದಿಗಳ ಸಂಖ್ಯೆ ಹೆಚ್ಚಿದ್ದಾಗ ಮಾತ್ರ ಸುಪ್ರೀಂ ಕೋರ್ಟ್‌ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕಿದ್ದು, ಜಾಮೀನು ನಿರಾಕರಣೆ ಅಪವಾದವಾಗಿರುವೆಡೆ ತನಿಖೆಗಾಗಿ ವಶಕ್ಕೆ ಪಡೆಯುವ ಅಗತ್ಯವಿರುವುದಿಲ್ಲ. 7 ವರ್ಷಗಳಿಗಿಂತ ಕಡಿಮೆ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧಗಳ ಸಂದರ್ಭದಲ್ಲಿ ಬಂಧನವನ್ನು ಜಾರಿಗೊಳಿಸುವ ಅಧಿಕಾರವನ್ನು ಅಧಿಕಾರಿಗೆ ನೀಡಲಾಗಿರುವ ಪ್ರಸ್ತುತ ವಿಷಯದಂತೆ ಮೇಲೆ ತಿಳಿಸಿದ ಮಾರ್ಗಸೂಚಿಗಳನ್ನು ಕಾಯಿದೆಗೆ ಅನ್ವಯಿಸದಿರಲು ಯಾವುದೇ ಕಾರಣವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಈ ಅವಲೋಕನಗಳೊಂದಿಗೆ, ನ್ಯಾಯಾಲಯ ಜೈನ್ ಅವರನ್ನು ವಶದಲ್ಲಿರಿಸಿಕೊಳ್ಳುವುದು ಇನ್ನು ಮುಂದೆ ಅಗತ್ಯವಿಲ್ಲ ಎಂದು ತೀರ್ಮಾನಿಸಿ ಅವರಿಗೆ ಜಾಮೀನು ನೀಡಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Rahul Kamalkumar Jain v. Director General of Goods and Service Tax Intelligence.pdf
Preview
Kannada Bar & Bench
kannada.barandbench.com