ಐಸಿಐಸಿಐ ಬ್ಯಾಂಕ್‌-ವಿಡಿಯೊಕಾನ್‌ ಸಾಲ ಪ್ರಕರಣ: ವೇಣುಗೋಪಾಲ್‌ ಧೂತ್‌ಗೆ ಮಧ್ಯಂತರ ಜಾಮೀನು ಮಂಜೂರು

ಐಸಿಐಸಿಐ ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚರ್ ಮತ್ತು ಅವರ ಪತಿ ದೀಪಕ್‌ ಕೊಚ್ಚರ್ ಆರೋಪಿಗಳಾಗಿರುವ ಪ್ರಕರಣದಲ್ಲಿ ವಿಡಿಯೊಕಾನ್‌ ಸಮೂಹದ ಅಧ್ಯಕ್ಷ ಸಹ ಆರೋಪಿಯಾಗಿದ್ದು, ಡಿಸೆಂಬರ್‌ 26ರಂದು ಬಂಧಿಸಲ್ಪಿಟ್ಟಿದ್ದರು.
Venugopal Dhoot, CBI, Bombay High Court
Venugopal Dhoot, CBI, Bombay High Court
Published on

ಐಸಿಐಸಿಐ ಬ್ಯಾಂಕ್‌ -ವಿಡಿಯೊಕಾನ್‌ ಸಾಲ ಪ್ರಕರಣದಲ್ಲಿ ಆರೋಪಿಯಾಗಿರುವ ವಿಡಿಯೊಕಾನ್‌ ಸಮೂಹದ ಅಧ್ಯಕ್ಷ ವೇಣುಗೋಪಾಲ್‌ ಧೂತ್‌ ಅವರಿಗೆ ಬಾಂಬೆ ಹೈಕೋರ್ಟ್‌ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ವೇಣುಗೋಪಾಲ್‌ ಧೂತ್‌ ಅವರು ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪಿ ಕೆ ಚವಾಣ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಅರ್ಜಿದಾರರು ಯಾವುದೇ ಹೆಚ್ಚಿನ ಅಪರಾಧದ ಚಟುವಟಿಕೆಯಲ್ಲಿ ತೊಡಗದಂತೆ ತಡೆಯುವುದಕ್ಕಾಗಿ ಬಂಧಿಸುವ ಅವಶ್ಯಕತೆಯಿದೆ ಎನ್ನುವುದಾಗಲಿ ಅಥವಾ ಅಪರಾಧದ ಸಾಕ್ಷ್ಯ ಕಣ್ಮರೆ ಅಥವಾ ಸಾಕ್ಷ್ಯ ಹಾಳುಮಾಡಲು ಕಾರಣವಾಗುವುದರಿಂದ ಅವರನ್ನು ವಶದಲ್ಲಿಟ್ಟುಕೊಳ್ಳಬೇಕು ಎಂಬುದಾಗಲಿ ತನಿಖಾ ಸಂಸ್ಥೆಯ ವಾದವಾಗಿಲ್ಲ. ಸೂಕ್ತ ತನಿಖೆಗೆ ಹಾಗೂ ಮುಖಾಮುಖಿಯಾಗಿಸುವ ಸಲುವಾಗಿ ಅರ್ಜಿದಾರರ ಅವಶ್ಯಕತೆ ಇದೆ ಎಂಬುದು ಅವರ ವಾದವಾಗಿದೆ. ಹೀಗಾಗಿ, ಸಿಆರ್‌ಪಿಸಿಗೆ ಅನುಗುಣವಾಗಿ ಬಂಧನದ ಕಾರಣಗಳಿಲ್ಲ” ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ಒಂದು ಲಕ್ಷದ ವೈಯಕ್ತಿಕ ಬಾಂಡ್‌ ಪಡೆದು ಅರ್ಜಿದಾರರನ್ನು ಬಿಡುಗಡೆ ಮಾಡಲು ನ್ಯಾಯಾಲಯ ಆದೇಶ ಮಾಡಿದೆ.

Also Read
ವಿಡಿಯೋಕಾನ್- ಐಸಿಐಸಿಐ ಸಾಲ ಪ್ರಕರಣ: ಬಂಧನ ಪ್ರಶ್ನಿಸಿದ್ದ ಧೂತ್ ಅರ್ಜಿ ತಿರಸ್ಕರಿಸಿದ ಮುಂಬೈ ನ್ಯಾಯಾಲಯ

ಐಸಿಐಸಿಐ ಬ್ಯಾಂಕ್‌ ಮಾಜಿ ಎಂ ಡಿ & ಸಿಇಒ ಚಂದಾ ಕೊಚ್ಚರ್‌ ಮತ್ತು ಅವರ ಪತಿ ದೀಪಕ್‌ ಕೊಚ್ಚರ್‌ ಆರೋಪಿಗಳಾಗಿರುವ ಪ್ರಕರಣದಲ್ಲಿ ವಿಡಿಯೊಕಾನ್‌ ಸಮೂಹದ ಅಧ್ಯಕ್ಷ ಧೂತ್‌ ಸಹ ಆರೋಪಿಯಾಗಿದ್ದು, ಡಿಸೆಂಬರ್‌ 26ರಂದು ಬಂಧಿಸಲ್ಪಿಟ್ಟಿದ್ದರು. ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಅವರನ್ನು ಬಂಧಿಸಿತ್ತು.

ಕಳೆದ ವರ್ಷದ ಡಿಸೆಂಬರ್‌ 29ರಂದು ಕೊಚ್ಚರ್‌ ಮತ್ತು ಧೂತ್‌ ಅವರನ್ನು ಮುಂಬೈನಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿತ್ತು.

Kannada Bar & Bench
kannada.barandbench.com