ಕಪ್ಪುಹಣ ಪ್ರಕರಣ: ಅನಿಲ್ ಅಂಬಾನಿ ವಿರುದ್ಧ ತಕ್ಷಣಕ್ಕೆ ಕ್ರಮ ಕೈಗೊಳ್ಳದಂತೆ ಐಟಿ ಇಲಾಖೆಗೆ ಹೈಕೋರ್ಟ್‌ ಸೂಚನೆ

ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆರೋಪದ ಮೇಲೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ ಆದಾಯ ತೆರಿಗೆ ಇಲಾಖೆ ಕ್ರಮ ಪ್ರಶ್ನಿಸಿ ಎಡಿಎ ಸಮೂಹದ ಅಧ್ಯಕ್ಷರಾದ ಅನಿಲ್ ಅಂಬಾನಿ ನ್ಯಾಯಾಲಯದ ಮೊರೆ ಹೋಗಿದ್ದರು.
ಕಪ್ಪುಹಣ ಪ್ರಕರಣ: ಅನಿಲ್ ಅಂಬಾನಿ ವಿರುದ್ಧ ತಕ್ಷಣಕ್ಕೆ ಕ್ರಮ ಕೈಗೊಳ್ಳದಂತೆ ಐಟಿ ಇಲಾಖೆಗೆ ಹೈಕೋರ್ಟ್‌ ಸೂಚನೆ
Published on

ರಿಲಯನ್ಸ್ (ಎಡಿಎ) ಗ್ರೂಪ್‌ನ ಅಧ್ಯಕ್ಷ ಅನಿಲ್ ಅಂಬಾನಿ ವಿರುದ್ಧ ಆದಾಯ ತೆರಿಗೆ ತನಿಖೆಗೆ ಸಂಬಂಧಿಸಿದಂತೆ ಹೊರಡಿಸಿರುವ ದಂಡ ವಿಧಿಸಿರುವ ನೋಟಿಸ್‌ಗಳ ಕುರಿತು ಮಾರ್ಚ್ 17 ರವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಬಾಂಬೆ ಹೈಕೋರ್ಟ್ ಶುಕ್ರವಾರ ಆದಾಯ ತೆರಿಗೆ ಇಲಾಖೆಗೆ ನಿರ್ದೇಶನ ನೀಡಿದೆ.

ಕಪ್ಪುಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ಮತ್ತು ತೆರಿಗೆ ಕಾಯಿದೆ- 2015ರ ಅಡಿಯಲ್ಲಿ ತನಗೆ ನೀಡಲಾದ ಶೋಕಾಸ್ ನೋಟಿಸ್  ಪ್ರಶ್ನಿಸಿ ಅಂಬಾನಿ ಸಲ್ಲಿಸಿದ್ದ ಅರ್ಜಿಯಲ್ಲಿ ನ್ಯಾಯಮೂರ್ತಿಗಳಾದ ಜಿ ಎಸ್ ಪಟೇಲ್ ಮತ್ತು ನೀಲಾ ಗೋಖಲೆ ಅವರಿದ್ದ ಪೀಠ ಈ ಆದೇಶ ನೀಡಿದೆ.

ಸೆಪ್ಟೆಂಬರ್ 26, 2022ರಂದು ತಾತ್ಕಾಲಿಕ ಮಧ್ಯಂತರ ಪರಿಹಾರದ ಮೂಲಕ ಹೈಕೋರ್ಟಿನ ಸಮನ್ವಯ ಪೀಠ ಈ ಹಿಂದೆ ಶೋಕಾಸ್ ನೋಟಿಸ್‌ಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಅನಿಲ್‌ ಅಂಬಾನಿ ಅವರಿಗೆ ರಕ್ಷಣೆ ನೀಡಿತ್ತು.

ಇಂದು ನಡೆದ ವಿಚಾರಣೆಯಲ್ಲಿ ಅನಿಲ್‌ ಪರ ವಕೀಲರಾದ ರಫೀಕ್ ದಾದಾ ಮತ್ತು ಪ್ರತೀಕ್ ಸೆಕ್ಸೇರಿಯಾ ಅವರ ಕೋರಿಕೆಯಂತೆ ಅರ್ಜಿಗೆ ತಿದ್ದುಪಡಿ ಮಾಡಲು ಅನುಮತಿ ನೀಡಿದ ನ್ಯಾಯಾಲಯ ಏಪ್ರಿಲ್ 17, 2023 ರವರೆಗೆ ನೋಟಿಸ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬಾರದು ಎಂದಿತು.

ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ ಆರೋಪದ ಮೇಲೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ ಆದಾಯ ತೆರಿಗೆ ಇಲಾಖೆ ಕ್ರಮ ಪ್ರಶ್ನಿಸಿ ಎಡಿಎ ಸಮೂಹದ ಅಧ್ಯಕ್ಷರಾದ ಅನಿಲ್‌ ಅಂಬಾನಿ ನ್ಯಾಯಾಲಯದ ಮೊರೆ ಹೋಗಿದ್ದರು.

ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಇರುವ ₹814 ಕೋಟಿಗೂ ಹೆಚ್ಚು ಮೌಲ್ಯದ ಬಹಿರಂಗಪಡಿಸದ ಹಣಕ್ಕೆ ಸಂಬಂಧಿಸಿದಂತೆ ₹420 ಕೋಟಿ ತೆರಿಗೆ ವಂಚನೆ ಮಾಡಿದ ಆರೋಪದಡಿ 2022ರ ಆಗಸ್ಟ್ 9ರಂದು ಆದಾಯ ತೆರಿಗೆ ಇಲಾಖೆ ಅನಿಲ್‌ ಅಂಬಾನಿ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು.

Kannada Bar & Bench
kannada.barandbench.com