![[ಸಿಎಂ ವಿರುದ್ಧದ ಹೇಳಿಕೆ] ಕೇಂದ್ರ ಸಚಿವ ರಾಣೆಗೆ ಎರಡು ವಾರಗಳ ರಕ್ಷಣೆ ನೀಡಿದ ಬಾಂಬೆ ಹೈಕೋರ್ಟ್](https://gumlet.assettype.com/barandbench-kannada%2F2021-08%2Fcd5bd398-69ce-4e2f-bd88-be942d5068b4%2Fbarandbench_2021_08_163cc3f8_a90d_42d8_9619_a13a730d3128_rane_bhc_2.jpg?auto=format%2Ccompress&fit=max)
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ವಿರುದ್ಧ ಮಹಾರಾಷ್ಟ್ರದ ಧುಲೆ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಎರಡು ವಾರಗಳ ಕಾಲ ಯಾವುದೇ ತೆರನಾದ ಬಲವಂತದ ಕ್ರಮಕೈಗೊಳ್ಳದಂತೆ ಶುಕ್ರವಾರ ಬಾಂಬೆ ಹೈಕೋರ್ಟ್ ಪೊಲೀಸರಿಗೆ ಆದೇಶಿಸಿದೆ.
ಭಾರತ ಸ್ವಾತಂತ್ರ್ಯ ಪಡೆದು ಎಷ್ಟು ವರ್ಷಗಳಾಗಿವೆ ಎಂಬುದು ಗೊತ್ತಿಲ್ಲದ ಉದ್ಧವ್ ಠಾಕ್ರೆ ಕೆನ್ನೆಗೆ ಬಾರಿಸಬೇಕು ಎಂದು ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕಳೆದ ವರ್ಷದ ಆಗಸ್ಟ್‌ನಲ್ಲಿ ರಾಣೆ ಅವರನ್ನು ಬಂಧಿಸಲಾಗಿತ್ತು. ಈ ಸಂಬಂಧ ಮಹಾರಾಷ್ಟ್ರದ 10 ಜಿಲ್ಲೆಗಳಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ನಾಸಿಕ್ ಗ್ರಾಮಾಂತರದಲ್ಲಿ ಎರಡು, ಪುಣೆ, ಪುಣೆ ಗ್ರಾಮಾಂತರ, ಧುಲೆ, ಮಹದ್, ಜಲಗಾಂವ್, ಅಹ್ಮದ್‌ನಗರ, ಥಾಣೆ ಗಳಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿದೆ.
ನಾಸಿಕ್ ಎಫ್‌ಐಆರ್‌ಗೆ ಸಂಬಂಧಿಸಿದಂತೆ ರಾಣೆ ವಿರುದ್ಧ ಯಾವುದೇ ಒತ್ತಾಯದ ಕ್ರಮಕೈಗೊಳ್ಳಲಾಗುವುದಿಲ್ಲ ಎಂದು ಅಲ್ಲಿನ ಪೊಲೀಸರು 2021ರ ಆಗಸ್ಟ್ 25ರಂದು ಹೇಳಿಕೆ ನೀಡಿದ್ದಾರೆ. ಹಾಲಿ ಎಫ್‌ಐಆರ್‌ಗಳಲ್ಲೂ ಇಂಥದ್ದೇ ಹೇಳಿಕೆ ನೀಡಬೇಕು ಎಂದು ವಕೀಲರಾದ ಸತೀಶ್ ಮಾನೆಶಿಂಧೆ ಮತ್ತು ಅಂಕಿತ್ ನಿಕಮ್ ಕೋರಿದ್ದರು.
ಈ ಬಗ್ಗೆ ಸರ್ಕಾರದಿಂದ ಸೂಚನೆ ಪಡೆದು ತಿಳಿಸುವಂತೆ ನ್ಯಾಯಾಲಯವು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅವರಿಗೆ ಸೂಚಿಸತ್ತು. ಇಂದು ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ತಮಗೆ ಅಂತಹ ಹೇಳಿಕೆ ನೀಡಲು ಯಾವುದೇ ಸೂಚನೆಯನ್ನು ನೀಡಲಾಗಿಲ್ಲ ಎಂದು ಹೆಚ್ಚುವರಿ ಸರ್ಕಾರಿ ಅಭಿಯೋಜಕ ಜಯೇಶ್ ಯಾಗ್ನಿಕ್ ತಿಳಿಸಿದರು. ಅಲ್ಲದೆ ನ್ಯಾಯಾಲಯವು ಸೂಕ್ತ ನಿರ್ದೇಶನ ನೀಡಿ ಆದೇಶ ಮಾಡಬಹುದು ಎಂದರು. ಈ ಹಿನ್ನೆಲೆಯಲ್ಲಿ ಎರಡು ವಾರ ರಾಣೆ ವಿರುದ್ಧ ಬಲವಂತದ ಕ್ರಮಕೈಗೊಳ್ಳಬಾರದು ಎಂದು ನ್ಯಾಯಮೂರ್ತಿಗಳಾದ ಪಿ ಬಿ ವರಾಲೆ ಮತ್ತು ಎಸ್ ಎಂ ಮೋದಕ್ ಆದೇಶ ಮಾಡಿದರು.