ನ್ಯಾಯಾಲಯ ಸುದೀರ್ಘ ರಜೆ ಪ್ರಶ್ನಿಸಿದ್ದ ಅರ್ಜಿ: ದೀಪಾವಳಿ ರಜೆ ಬಳಿಕ ವಿಚಾರಣೆ ನಡೆಸುವುದಾಗಿ ತಿಳಿಸಿದ ಬಾಂಬೆ ಹೈಕೋರ್ಟ್

ನ್ಯಾಯಾಧೀಶರು ರಜೆ ತೆಗೆದುಕೊಳ್ಳುವುದಕ್ಕೆ ತಾನು ವಿರೋಧಿಯಲ್ಲ ಎಂದಿರುವ ಅರ್ಜಿದಾರೆ ಆದರೆ ಏಕಕಾಲಕ್ಕೆ ರಜೆ ತೆಗೆದುಕೊಳ್ಳದಂತೆ ಅವರನ್ನು ಪ್ರೋತ್ಸಾಹಿಸಬಹುದಾಗಿದ್ದು ಇದರಿಂದ ನ್ಯಾಯಾಲಯ ವರ್ಷಪೂರ್ತಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.
Bombay HC and calendar
Bombay HC and calendar

ನ್ಯಾಯಾಲಯಗಳು ಸುದೀರ್ಘ ಅವಧಿಗೆ ರಜೆ ತೆಗೆದುಕೊಳ್ಳುವುದರಿಂದ ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದ ಅರ್ಜಿಯನ್ನು ದೀಪಾವಳಿ ರಜೆ ಬಳಿಕ ವಿಚಾರಣೆ ನಡೆಸಲು ಬಾಂಬೆ ಹೈಕೋರ್ಟ್‌ ಗುರುವಾರ ಸಮ್ಮತಿಸಿದೆ.  

ವಕೀಲ ಮ್ಯಾಥ್ಯೂಸ್ ನೇಡುಂಪರ ಅವರು ನ್ಯಾಯಮೂರ್ತಿಗಳಾದ ಎಸ್‌ ವಿ ಗಂಗಾಪುರವಾಲಾ ಮತ್ತು ಆರ್‌ ಎನ್ ಲಾದ್ಧಾ ಅವರಿದ್ದ ಪೀಠದ ಮುಂದೆ ಗುರುವಾರ ಪ್ರಕರಣವನ್ನು ಪ್ರಸ್ತಾಪಿಸಿದರು.

ʼನ್ಯಾಯಾಲಯದ ರಜೆಗೆ ನಾವು ವಿರೋಧಿಗಳಲ್ಲ. ರಜೆಯ ವೇಳೆ ಅರ್ಜಿ ಸಲ್ಲಿಸುವುದಕ್ಕೂ ರಜಾಕಾಲೀನ ಪೀಠದ ಅನುಮತಿ ಬೇಕಾಗುತ್ತದೆ ಎಂದು ಹೇಳಿದರು. ಹೈಕೋರ್ಟ್ ಕ್ಯಾಲೆಂಡರ್ ಅನ್ನು ಕಳೆದ ವರ್ಷ ನವೆಂಬರ್‌ನಲ್ಲಿಯೇ ತಯಾರಿಸಲಾಗಿದೆ ಎಂಬ ಅಂಶವನ್ನು ಗಮನಿಸಿದ ಪೀಠ ಈಗ ಏಕೆ ಅರ್ಜಿ ಸಲ್ಲಿಸಲಾಗುತ್ತಿದೆ ಎಂದು ಆರಂಭದಲ್ಲಿ ಕೇಳಿತು. ಅಂತಿಮವಾಗಿ ನವೆಂಬರ್ 15 ರಂದು ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲು ಒಪ್ಪಿಕೊಂಡಿತು.

ರಜೆಗಾಗಿ 70 ದಿನಗಳಿಗಿಂತ ಹೆಚ್ಚು ಕಾಲ ನ್ಯಾಯಾಲಯಗಳನ್ನು ಮುಚ್ಚುವುದು ದಾವೆದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಘೋಷಿಸಬೇಕು. ದೀರ್ಘರಜೆಗೆ ಅಂತ್ಯಹಾಡುವುದು ಒಂದು ಜವಾಬ್ದಾರಿ. ಎಲ್ಲಾ ಪ್ರಕರಣಗಳನ್ನು ಆಲಿಸಿ ತೀರ್ಪು ನೀಡಲು ಸಾಕಷ್ಟು ಸಂಖ್ಯೆಯ ನ್ಯಾಯಾಧೀಶರು ಇದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಮತ್ತು ರಜಾಕಾಲೀನ ಪೀಠದ ಅನುಮತಿಗೆ ಕಾಯದೆ ಎಲ್ಲಾ ಬಗೆಯ ಅರ್ಜಿಗಳನ್ನು ಸ್ವೀಕರಿಸಲು ನೋಂದಾಯಿಸಲು ನಿರ್ದೇಶಿಸಿ ಮುಂದಿನ ದೀಪಾವಳಿ ರಜೆ ಹೊತ್ತಿಗೆ ಹೈಕೋರ್ಟ್‌ ಸಂಪೂರ್ಣ ಕಾರ್ಯನಿರ್ವಹಿಸುವಂತಾಗಬೇಕು ಎಂದು ಸಬೀನಾ ಲಕ್ಡಾವಾಲಾ ಎಂಬುವವರು ಮನವಿ ಸಲ್ಲಿಸಿದ್ದಾರೆ.

ನ್ಯಾಯಾಧೀಶರು ರಜೆ ತೆಗೆದುಕೊಳ್ಳುವುದನ್ನು ತಾನು ವಿರೋಧಿಸುವುದಿಲ್ಲ ಎಂದಿರುವ ಅರ್ಜಿದಾರೆ ಆದರೆ ಏಕಕಾಲಕ್ಕೆ ರಜೆ ತೆಗೆದುಕೊಳ್ಳದಂತೆ ಅವರನ್ನು ಪ್ರೋತ್ಸಾಹಿಸಬಹುದಾಗಿದ್ದು ಇದರಿಂದ ನ್ಯಾಯಾಲಯ  ವರ್ಷಪೂರ್ತಿ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.

ಯಾಂತ್ರಿಕವಾಗಿ ಮತ್ತು ವಿವೇಚನಾರಹಿತವಾಗಿ ಪಾಲಿಸುತ್ತಿರುವ ವಸಾಹತುಶಾಹಿ ಯುಗದ ಕುರುಹಾಗಿರುವ ರಜೆಯ ಹೆಸರಿನಲ್ಲಿ ನ್ಯಾಯಾಲಯಗಳ ಮುಚ್ಚುವಿಕೆಯನ್ನು ಕೈಬಿಡಬೇಕು. ನ್ಯಾಯಾಧೀಶರು ಮತ್ತು ವಕೀಲರಿಬ್ಬರಿಗೂ ವಿರಾಮದ ಅಗತ್ಯವಿದ್ದರೂ, ಅದನ್ನು ವಾರಾಂತ್ಯ ಮತ್ತು ಗೆಜೆಟೆಡ್ ರಜಾದಿನಗಳಿಗೆ ಸೀಮಿತಗೊಳಿಸಿದರೆ ಸಾಕು ಎಂದು ಅವರು  ವಿನಂತಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com