ಸತ್ಯ ಮರೆಮಾಚಿ ತಡೆಯಾಜ್ಞೆ ಪಡೆದಿದ್ದವರಿಗೆ ₹50 ಲಕ್ಷ ದಂಡ ವಿಧಿಸಿದ ಬಾಂಬೆ ಹೈಕೋರ್ಟ್

ಅರ್ಜಿದಾರ ವಾಸ್ತವಾಂಶಗಳನ್ನು ಸಂಪೂರ್ಣ ಮುಚ್ಚಿಟ್ಟಿದ್ದು ಉದ್ದೇಶಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ನ್ಯಾಯಾಲಯಕ್ಕೆ ಮೋಸ ಮಾಡಿದ್ದಾರೆ ಎಂದು ನ್ಯಾ. ಆರಿಫ್ ಎಸ್ ಡಾಕ್ಟರ್ ತಿಳಿಸಿದರು.
Bombay High Court
Bombay High Court
Published on

ವಾಣಿಜ್ಯ ಚಿಹ್ನೆ ಉಲ್ಲಂಘನೆ ಪ್ರಕರಣದಲ್ಲಿ ವಾಸ್ತವಾಂಶ ಮುಚ್ಚಿಹಾಕಿ ಏಕಪಕ್ಷೀಯ ತಡೆಯಾಜ್ಞೆ ಪಡೆದಿದ್ದವರಿಗೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ₹50 ಲಕ್ಷ ದಂಡ ವಿಧಿಸಿದೆ [ಶೋಬನ್ ಸಲೀಂ Vs ಚೈತನ್ಯ ಅರೋರಾ ನಡುವಣ ಪ್ರಕರಣ].

ಅರ್ಜಿದಾರ ವಾಸ್ತವಾಂಶಗಳನ್ನು ಸಂಪೂರ್ಣವಾಗಿ ಮುಚ್ಚಿಟ್ಟು ಉದ್ದೇಶಪೂರ್ವಕವಾಗಿ ಮತ್ತು ವ್ಯವಸ್ಥಿತವಾಗಿ ನ್ಯಾಯಾಲಯಕ್ಕೆ ಮೋಸ ಮಾಡಿದ್ದಾರೆ ಎಂದು ನ್ಯಾ. ಆರಿಫ್ ಎಸ್ ಡಾಕ್ಟರ್ ತಿಳಿಸಿದರು. ಅಂತೆಯೇ ನಾಲ್ಕು ವಾರಗಳಲ್ಲಿ ಇಬ್ಬರು ಪ್ರತಿವಾದಿಗಳಿಗೆ ತಲಾ ₹25 ಲಕ್ಷ ಪಾವತಿಸುವಂತೆ ಅರ್ಜಿದಾರರಿಗೆ ಅದು ಸೂಚಿಸಿತು.

Also Read
ಯುಪಿಎಸ್‌ಸಿ ತೇರ್ಗಡೆ ಕುರಿತು ಸುಳ್ಳು ಜಾಹೀರಾತು: ಆನ್‌ಲೈನ್‌ ತರಬೇತುದಾರ ದೃಷ್ಟಿ ಐಎಎಸ್‌ಗೆ ಸಿಸಿಪಿಎ ₹5 ಲಕ್ಷ ದಂಡ

ಪಾದರಕ್ಷೆ ಬ್ರ್ಯಾಂಡ್‌ನ ಮಾಲೀಕರಾದ ಅರ್ಜಿದಾರರು ತಮ್ಮ ವಾಣಿಜ್ಯ ಚಿಹ್ನೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ, ಪ್ರತಿವಾದಿಗಳ ವಿರುದ್ಧ ಶಾಶ್ವತ ಪ್ರತಿಬಂಧಕಾಜ್ಞೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು.  

ವಾದ ಆಲಿಸಿದ್ದ ನ್ಯಾಯಾಲಯ ಜೂನ್ 30ರಂದು ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾಜ್ಞೆ ನೀಡಿತ್ತು. ಜೊತೆಗೆ ಪ್ರತಿವಾದಿಗಳ ಸರಕು ವಶಪಡಿಸಿಕೊಳ್ಳುವಂತೆ ಕೋರ್ಟ್‌ ರಿಸೀವರ್‌ ಅವರಿಗೆ ಆದೇಶಿಸಿತ್ತು.

ಆದರೆ ಅರ್ಜಿದಾರರು ವಾಸ್ತವಾಂಶಗಳನ್ನು ಸಂಪೂರ್ಣ ಮುಚ್ಚಿಹಾಕಿ ತೀರ್ಪು ಪಡೆದಿದ್ದಾರೆ ಎಂದು ಸಿಪಿಸಿ ಆದೇಶ 39 ನಿಯಮ 4ರ ಅಡಿ ಪ್ರತಿವಾದಿಗಳು ಅರ್ಜಿ ಸಲ್ಲಿಸಿದ್ದರು.

ವಾಣಿಜ್ಯ ಚಿಹ್ನೆ ನೋಂದಣಿ ಮಹಾರಾಷ್ಟ್ರ ರಾಜ್ಯಕ್ಕೆ ಸೀಮಿತವಾಗಿದ್ದರೂ ಅದು ಅಖಿಲ ಭಾರತ ವ್ಯಾಪ್ತಿ ಹೊಂದಿದೆ ಎಂದು ಅರ್ಜಿದಾರರು ಬಿಂಬಿಸಿದ್ದಾರೆ. ಪ್ರತಿವಾದಿಗಳು ವಾಣಿಜ್ಯ ಚಿಹ್ನೆಯನ್ನು 2022ರ ಏಪ್ರಿಲ್‌ನಿಂದಲೇ ಬಳಸುತ್ತಿದ್ದರೂ ಅರ್ಜಿದಾರರು ಅದನ್ನು ಬಹಿರಂಗಪಡಿಸಿರಲಿಲ್ಲ. ವಾಣಿಜ್ಯ ಚಿಹ್ನೆ ರಿಜಿಸ್ಟ್ರಿಯಲ್ಲಿ ಅರ್ಜಿದಾರರು ವ್ಯತಿರಿಕ್ತ ನಿಲುವು ತಳೆದಿದ್ದರು ಎಂಬ ಮೂರು ಅಂಶಗಳನ್ನು ಆಧರಿಸಿ ನ್ಯಾಯಾಲಯ ಅರ್ಜಿದಾರರಿಗೆ ದಂಡ ವಿಧಿಸಿತು.

ಈ ಲೋಪಗಳು ಅಜಾಗರೂಕತೆಯಿಂದಾಗಿವೆ ಎಂಬ ಅರ್ಜಿದಾರರ ವಾದವನ್ನು ತಿರಸ್ಕರಿಸಿದ ಪೀಠ ಇದು ನ್ಯಾಯಾಲಯಕ್ಕೆ ಮಾಡಿದ ಅಪಮಾನವಾಗಿದ್ದು ಈ ಬಗೆಯ ಅಜಾಗರೂಕತೆಯನ್ನೇನಾದರೂ ಕ್ಷಮಿಸಿದರೆ ಅಪ್ರಮಾಣಿಕತೆಗೆ ಮೌಲ್ಯ ತಂದಂತಾಗುತ್ತದೆ ಎಂದಿತು.

ವಾಣಿಜ್ಯ ಚಿಹ್ನೆ ನೋಂದಣಿ ಪ್ರಾದೇಶಿಕ ವ್ಯಾಪ್ತಿ ಹೊಂದಿದೆ ಎಂದು ಪ್ರತಿವಾದಿಗಳು ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಿದರೂ ಅರ್ಜಿದಾರರು ತಾತ್ಕಾಲಿಕ ಏಕಪಕ್ಷೀಯ ತಡೆಯಾಜ್ಞೆ ಮಹಾರಾಷ್ಟ್ರ ಸರ್ಕಾರದ ವ್ಯಾಪ್ತಿಗೆ ಸೀಮಿತವಾಗಿಸಲು ಯಾವುದೇ ಪ್ರಯತ್ನ ಮಾಡಲಿಲ್ಲ. ಬದಲಿಗೆ ನ್ಯಾಯಾಂಗ ನಿಂದನೆಯಾಗಿದೆ ಎಂದು ಆರೋಪಿಸಿ ವಿವಿಧ ಪ್ರಮಾಣಪತ್ರಗಳನ್ನು ಸಲ್ಲಿಸುವ ಮೂಲಕ ಏಕಪಕ್ಷೀಯ ಆದೇಶ ಮುಂದುವರೆಯುವಂತೆ ಮಾಡಿದ ತಂತ್ರಗಾರಿಕೆ ಮಾಡಿದರು ಎಂದು ಪೀಠ ಹೇಳಿತು.

Also Read
ವಿವಿಧ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು: ಸಮರ್ಥಿಸಿಕೊಂಡ ಉತ್ತರಾಖಂಡ ಎಸ್‌ಇಸಿಗೆ ಸುಪ್ರೀಂ ₹2 ಲಕ್ಷ ದಂಡ

ಸರ್ವೋಚ್ಚ ನ್ಯಾಯಾಲಯ ರಾಮ್‌ಜಾಸ್‌ ಪ್ರತಿಷ್ಠಾನ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಪೀಠ, ಸತ್ಯಕ್ಕೆ ಗೌರವ ಇರದ, ಸುಳ್ಳು ಹೇಳಿಕೆಗಳ ಮೂಲಕ ಇಲ್ಲವೇ ಸತ್ಯಾಂಶ ಮರೆಮಾಚಿ ನ್ಯಾಯಾಂಗದ ಧಾರೆಯನ್ನು ಕಲುಷಿತಗೊಳಿಸಲು ಯತ್ನಿಸುವ ಅರ್ಜಿದಾರರ ದುರುದ್ದೇಶದಿಂದ ನ್ಯಾಯಾಲಯ ತನ್ನನ್ನು ತಾನು ರಕ್ಷಿಸಿಕೊಳ್ಳುವುದು ಹಕ್ಕಷ್ಟೇ ಅಲ್ಲ ಕರ್ತವ್ಯ ಕೂಡ ಎಂದಿತು.

ಅರ್ಜಿದಾರರ ವರ್ತನೆ ದಂಡ ವಿಧಿಸುವಲ್ಲಿ ಪ್ರಮುಖ ಅಂಶವಾಗಿದೆ. ಅವರ ವರ್ತನೆ ದಂಡ ವಿಧಿಸಲು ಪೂರಕ ಕಾರಣವಾಗಿದೆ. ಏಕಪಕ್ಷೀಯ ಪ್ರತಿಬಂಧಕಾಜ್ಞೆಯಿಂದ ಪ್ರತಿವಾದಿಗಳ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ ಎಂದ ಪೀಠ ಪ್ರತಿಯೊಬ್ಬ ಪ್ರತಿವಾದಿಗಳಿಬ್ಬರಿಗೆ ತಲಾ ₹25 ಲಕ್ಷದಂತೆ ಒಟ್ಟು ₹50 ಲಕ್ಷ ಪಾವತಿಸುವಂತೆ ಅರ್ಜಿದಾರರಿಗೆ ಆದೇಶಿಸಿತು.

Kannada Bar & Bench
kannada.barandbench.com