ಪೆಗಸಸ್‌ ಪಡೆಯಲು ಅಧ್ಯಯನ ಹೆಸರಿನಲ್ಲಿ ಇಸ್ರೇಲ್‌ಗೆ ಅಧಿಕಾರಿಗಳ ಪ್ರವಾಸ: ಮಹಾ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್‌ ನೋಟಿಸ್‌

ಮಾಧ್ಯಮ ನಿರ್ವಹಣೆ ತರಬೇತಿ ಮತ್ತು ಸಂಬಂಧಿ ಚಟುವಟಿಕೆಯ ಹೆಸರಿನಲ್ಲಿ ಇಸ್ರೇಲ್‌ಗೆ ತೆರಳಿ ಚುನಾವಣೆ ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಳ್ಳಲು ಬೇಕಾದ ಇತರ ವಿಧಾನಗಳನ್ನು ತರಲು ಸರ್ಕಾರವು ಅಧಿಕಾರಿಗಳನ್ನು ಕಳುಹಿಸಿತ್ತು ಎಂದು ಹೇಳಲಾಗಿದೆ.
Pegasus, Bombay High Court
Pegasus, Bombay High Court

ಪೆಗಸಸ್‌ನಂಥ ಬೇಹುಗಾರಿಕಾ ಸಾಫ್ಟ್‌ವೇರ್‌ ಪಡೆಯಲು ಅಧ್ಯಯನ ಪ್ರವಾಸದ ನೆಪದಲ್ಲಿ ಮಹಾರಾಷ್ಟ್ರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಹಾನಿರ್ದೇಶಕರು (ಡಿಜಿಐಪಿಆರ್‌) 2019ರಲ್ಲಿ ಹಿರಿಯ ಅಧಿಕಾರಿಗಳ ನಿಯೋಗವನ್ನು ಇಸ್ರೇಲ್‌ಗೆ ಕಳುಹಿಸಿಕೊಟ್ಟಿದ್ದರು ಎಂದು ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯಲ್ಲಿ ವಿವರಿಸಲಾಗಿದೆ.

ಇಸ್ರೇಲ್‌ ಪ್ರವಾಸ ಕೈಗೊಂಡಿದ್ದ ಮತ್ತು ಅಲ್ಲಿಗೆ ತೆರಳಲು ಅಧಿಕಾರಿಗಳಿಗೆ ಅನುಮತಿಸಿದ್ದವರ ವಿರುದ್ಧ ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಪಿಐಎಲ್‌ಗೆ ಸಂಬಂಧಿಸಿದಂತೆ ಡಿಜಿಐಪಿಆರ್‌ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಮುಖ್ಯ ನ್ಯಾಯಮೂರ್ತಿ ದೀಪಂಕರ್‌ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್‌ ಕುಲಕರ್ಣಿ ಅವರ ನೇತೃತ್ವದ ವಿಭಾಗೀಯ ಪೀಠವು ನೋಟಿಸ್‌ ಜಾರಿ ಮಾಡಿದೆ.

2019ರ ನವೆಂಬರ್‌ 15ರಂದು ವಿಧಾನಸಭಾ ಚುನಾವಣೆ ಮುಗಿದ ಬಳಿಕ ಡಿಜಿಐಪಿಆರ್‌ನ ಆಯ್ದ ಐವರು ಹಿರಿಯ ಅಧಿಕಾರಿಗಳನ್ನು ವೆಬ್‌ ಮಾಧ್ಯಮ ವರ್ಧನೆ ಅಧ್ಯಯನಕ್ಕಾಗಿ ಇಸ್ರೇಲ್‌ಗೆ 10 ದಿನಗಳ ಪ್ರವಾಸಕ್ಕೆ ಕಳುಹಿಸಿಕೊಡಲಾಗಿತ್ತು ಎಂದು ಹೇಳಲಾಗಿದೆ.

“ಸರ್ಕಾರದ ಸಾರ್ವಜನಿಕ ಸಂಪರ್ಕದಲ್ಲಿ ಹೊಸ ಸಾಧ್ಯತೆ, ವೆಬ್‌ ಮಾಧ್ಯಮವನ್ನು ಬಳಸಿಕೊಳ್ಳಲು ಇರುವ ಹೊಸ ಮಾರ್ಗಗಳು, ತುರ್ತು ಮತ್ತು ಅಸಾಮಾನ್ಯ ಸಂದರ್ಭಗಳಲ್ಲಿ ಮಾಧ್ಯಮ ಮತ್ತು ಡಿಜಿಟಲ್‌ ಮಾರ್ಕೆಟಿಂಗ್‌ ಸಾಧನಗಳ ಬಳಕೆ, ಸರ್ಕಾರದ ಸಂದೇಶವನ್ನು ರವಾನಿಸಲು ಸಮಗ್ರ ಮಾಧ್ಯಮ ಯೋಜನೆ ಸೇರಿದಂತೆ ಹಲವು ವಿಚಾರಗಳು ಪ್ರಸ್ತಾಪಿತ ಪ್ರವಾಸದಲ್ಲಿ ಸೇರಿತ್ತು” ಎಂದು ಹೇಳಲಾಗಿತ್ತು ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.

ಸಾರ್ವಜನಿಕ ಸಂಪರ್ಕ ವಿಭಾಗಕ್ಕೆ ಒಳಪಡುವ ಎಲ್ಲಾ ವಿಚಾರಗಳು ಮತ್ತು ವೆಬ್‌ ಮಾಧ್ಯಮದ ಬಳಕೆ ಹೆಚ್ಚಳವು ಪ್ರವಾಸದ ಪ್ರಮುಖ ಭಾಗವಾಗಿತ್ತು. ಆದರೆ, ಇಸ್ರೇಲ್‌ ಕೃಷಿ ಸಂಬಂಧಿ ತಂತ್ರಜ್ಞಾನ ಮತ್ತು ಯುದ್ಧ ಸಾಮಗ್ರಿಗಳಿಗೆ ಹೆಸರುವಾಸಿಯಾಗಿದೆಯೇ ಹೊರತು ವೆಬ್‌ ಮಾದ್ಯಮ ಬಳಕೆಯ ವರ್ಧನೆಯ ವಿಚಾರದಲ್ಲಿ ಅಲ್ಲ ಎಂದು ವಿವರಿಸಿದ್ದಾರೆ.

“ಮಾಧ್ಯಮ ನಿರ್ವಹಣೆ ತರಬೇತಿ ಮತ್ತು ಸಂಬಂಧಿತ ಚಟುವಟಿಕೆ ಅರಿಯುವುದರ ಜೊತೆಗೆ ಅಲ್ಲಿನ ಇತರ ವಿಧಾನಗಳನ್ನು ದೇಶಕ್ಕೆ ಪರಿಚಯಿಸುವ ಮೂಲಕ ಚುನಾವಣೆಯ ಸಂದರ್ಭದಲ್ಲಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳಲು ಸರ್ಕಾರವು ತನ್ನ ಅಧಿಕಾರಿಗಳನ್ನು ಇಸ್ರೇಲ್‌ಗೆ ಕಳುಹಿಸಿತ್ತು” ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

“ಇಸ್ರೇಲ್‌ ಪ್ರವಾಸ ಮತ್ತು 2019ರ ವಿಧಾನಸಭಾ ಚುನಾವಣೆಯ ಬಳಿಕ ಇಸ್ರೇಲ್‌ ಪ್ರವಾಸದ ಉದ್ದೇಶದ ಕುರಿತು ಹಲವು ವರದಿಗಳು ಪ್ರಕಟವಾಗಿವೆ. ಫೋನ್‌ ಬೇಹುಕಾರಿಕಾ ಪ್ರಕರಣಕ್ಕೆ ಮತ್ತು ಇಸ್ರೇಲ್‌ ಪ್ರವಾಸಕ್ಕೆ ಸಂಬಂಧವಿದೆ ಎಂಬುದು ಗಮನಾರ್ಹ” ಎಂದು ಹೇಳಲಾಗಿದೆ.

ಇಸ್ರೇಲ್‌ ಪ್ರವಾಸಕ್ಕೆ ಅನುಮತಿಸಿರುವುದು ಮತ್ತು ಅದರ ಹಿಂದಿನ ಉದ್ದೇಶಗಳು ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತದೆ ಎಂದು ಅರ್ಜಿದಾರರು ಶಂಕಿಸಿದ್ದಾರೆ. ಅಲ್ಲದೇ, 2014ರ ಡಿಸೆಂಬರ್‌ 29ರ ಸರ್ಕಾರಿ ನಿರ್ಣಯಕ್ಕೆ ವಿರುದ್ಧವಾಗಿ ಪ್ರಸ್ತಾವಿತ ಅಧ್ಯಯನ ಪ್ರವಾಸಕ್ಕೆ ಅನುಮತಿಸಲಾಗಿದೆ ಎಂದು ಅರ್ಜಿದಾರರು ಮತ್ತು ಆರ್‌ಟಿಐ ಕಾರ್ಯಕರ್ತರಾದ ಲಕ್ಷ್ಮಣ್‌ ಬುರಾ ಮತ್ತು ದಿಗಂಬರ್‌ ಜೆಂತ್ಯಾಲ್‌ ಹೇಳಿದ್ದಾರೆ.

Also Read
[ಪೆಗಸಸ್‌ ಹಗರಣ] ಆರೋಪಗಳು ಗಂಭೀರವಾಗಿದ್ದು, ಕ್ರಿಮಿನಲ್‌ ದೂರು ದಾಖಲಿಸಲಿಲ್ಲವೇಕೆ? ಅರ್ಜಿದಾರರಿಗೆ ಸುಪ್ರೀಂ ಪ್ರಶ್ನೆ

ಅಧಿಕಾರಿಗಳು ವಿದೇಶ ಪ್ರವಾಸ ಕೈಗೊಳ್ಳಲು ರಾಜ್ಯದ ಮುಖ್ಯಮಂತ್ರಿ ಅನುಮತಿ ನೀಡುವುದು ಅಗತ್ಯ ಎಂದು ಸರ್ಕಾರಿ ನಿರ್ಣಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಪ್ರವಾಸವು ಸರ್ಕಾರದ ಕಾರ್ಯಾಚರಣೆಗೆ ಅನುಕೂಲವಾಗಲಿದ್ದು, ಅದರ ವೆಚ್ಚವನ್ನು ಸರ್ಕಾರವೇ ಭರಿಸಿದೆ. ಸರ್ಕಾರದ ನಿರ್ಣಯಕ್ಕೆ ವಿರುದ್ಧವಾಗಿದೆ ಎಂದು ಹಣಕಾಸು ಇಲಾಖೆಯು ಅನುಮತಿಸದೆ ಹೋದರೂ ಪ್ರವಾಸಕ್ಕಾಗಿ ₹14 ಲಕ್ಷ ಬಿಡುಗಡೆ ಮಾಡಲಾಗಿದೆ . ಇಲ್ಲಿ ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಅರ್ಜಿದಾರರು ವಿವರಿಸಿದ್ದಾರೆ.

ನಿರ್ದಿಷ್ಟ ಸಮಯದಲ್ಲಿ ಪ್ರಸ್ತಾವವನ್ನು ಸಾಮಾನ್ಯ ಆಡಳಿತ ವಿಭಾಗಕ್ಕೆ ಸಲ್ಲಿಸಲಾಗಿಲ್ಲ ಎಂಬುದು ಆರ್‌ಟಿಐ ಪ್ರತಿಕ್ರಿಯೆಯಿಂದ ತಿಳಿದು ಬಂದಿದೆ. ಅಧ್ಯಯನದ ಪ್ರವಾಸವು ಯಾವುದೇ ಮಹತ್ವದ ಮತ್ತು ನಿರ್ದಿಷ್ಟ ಪ್ರಾಮುಖ್ಯತೆಯನ್ನು ಬಹಿರಂಗಪಡಿಸಿಲ್ಲ. ಅದಾಗ್ಯೂ ಇಸ್ರೇಲ್‌ಗೆ ಹೋಗಲು ಕೆಲವು ಅರ್ಹ ಅಧಿಕಾರಿಗಳನ್ನು ಡಿಜಿಐಪಿಆರ್ ಕಚೇರಿಯಿಂದ ನಿಯೋಜಿಸಲಾಗಿತ್ತು ಎನ್ನಲಾಗಿದೆ.

ಪ್ರವಾಸಕ್ಕೆ ಸಂಬಂಧಿಸಿದಂತೆ ದಾಖಲೆ ಸಲ್ಲಿಸುವಂತೆ ಮತ್ತು ಪ್ರವಾಸದ ಸಂದರ್ಭದಲ್ಲಿ ಅಧಿಕಾರಿಗಳು ಯಾವೆಲ್ಲಾ ವಿಶೇಷ ಜ್ಞಾನವನ್ನು ಗಳಿಸಿಕೊಂಡಿದ್ದಾರೆ. ಅದು ಹೇಗೆ ಇಲ್ಲಿ ಸದ್ಬಳಕೆಯಾಗಲಿದೆ ಎಂಬುದನ್ನು ನ್ಯಾಯಾಲಯಕ್ಕೆ ವಿವರಿಸಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

Related Stories

No stories found.
Kannada Bar & Bench
kannada.barandbench.com