ಅಕ್ರಮ ಹಣ ವರ್ಗಾವಣೆ: ಜೆಟ್ ಏರ್‌ವೇಸ್‌ನ ನರೇಶ್‌ರನ್ನು ಜ.31ರವರೆಗೆ ಬಂಧಿಸದಂತೆ ಬಾಂಬೆ ಹೈಕೋರ್ಟ್ ಆದೇಶ

ಇ ಡಿ ದಾಖಲಿಸಿರುವ ಜಾರಿ ಪ್ರಕರಣ ಮಾಹಿತಿ ವರದಿಯನ್ನು (ಇಸಿಐಆರ್) ರದ್ದುಗೊಳಿಸುವಂತೆ ಕೋರಿ ಗೋಯಲ್ ದಂಪತಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಪೀಠ ಈ ಆದೇಶ ನೀಡಿದೆ.
Naresh Goyal and Bombay High Court
Naresh Goyal and Bombay High Court

ಜಾರಿ ನಿರ್ದೇಶನಾಲಯ (ಇ ಡಿ) ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ವಿರುದ್ಧ ಜನವರಿ 31ರವರೆಗೆ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗದಂತೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ.

ಇ ಡಿ ದಾಖಲಿಸಿರುವ ಜಾರಿ ಪ್ರಕರಣ ಮಾಹಿತಿ ವರದಿಯನ್ನು (ಇಸಿಐಆರ್) ರದ್ದುಗೊಳಿಸುವಂತೆ ಕೋರಿ ಗೋಯಲ್‌ ದಂಪತಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಪಿ ಕೆ ಚವಾಣ್ ಅವರಿದ್ದ  ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಅಕ್ಟೋಬರ್ 2018 ರಿಂದ ಜೆಟ್‌ ಏರ್‌ವೇಸ್‌ ತನ್ನ ವಿಮಾನಯಾನ ಕಂಪನಿ ವಿಮಾನ ಕಾರ್ಯಾಚರಣೆ ರದ್ದಗೊಳಿಸಿದ್ದರಿಂದ ತನಗೆ ₹ 46 ಕೋಟಿಗಳಷ್ಟು ನಷ್ಟ ಉಂಟಾಗಿದೆ ಎಂದು ಅಕ್ಬರ್ ಟ್ರಾವೆಲ್ಸ್ ನೀಡಿದ ದೂರಿನ ಮೇರೆಗೆ 2020ರ ಫೆಬ್ರವರಿಯಲ್ಲಿ ಮುಂಬೈ ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ಆಧಾರದ ಮೇಲೆ ಇಸಿಐಆರ್‌ ದಾಖಲಿಸಲಾಗಿತ್ತು. ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಫೋರ್ಜರಿಗೆ ಸಂಬಂಧಿಸಿದಂತೆ ಐಪಿಸಿ ಅಡಿಯಲ್ಲಿ  ಗೋಯಲ್ ದಂಪತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು.

ವಿವಾದ ಸಿವಿಲ್‌ ಪ್ರಕರಣದ ಸ್ವರೂಪದಲ್ಲಿದ್ದು ಮಾರ್ಚ್ 2020 ರಲ್ಲಿ ಪೊಲೀಸರು ಪ್ರಕರಣವನ್ನು ಅಂತ್ಯಗೊಳಿಸಲು ವರದಿ ಸಲ್ಲಿಸಿದ್ದರು. ಪ್ರಕರಣವು ಸಿವಿಲ್‌ ಸ್ವರೂಪದಲ್ಲಿದ್ದು ಕ್ರಿಮಿನಲ್‌ ವ್ಯಾಜ್ಯಾನುಸಾರ ತನಿಖೆ ಸಾಧ್ಯವಿಲ್ಲ ಎಂದಿದ್ದರು. ಸುಪ್ರೀಂ ಕೋರ್ಟ್‌ ಕೂಡ ಮ್ಯಾಜಿಸ್ಟ್ರೇಟ್‌ ಈ ವರದಿಯನ್ನು ಒಪ್ಪಿಕೊಂಡಿರುವುದನ್ನು ಎತ್ತಿಹಿಡಿದಿದೆ ಎಂದು ದಂಪತಿ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿಗಳಾದ ರವಿ ಕದಂ ಮತ್ತು ಅಬಾದ್‌ ಪೊಂಡಾ ವಾದಿಸಿದರು.

ಇ ಡಿ ಪರ ವಾದ ಮಂಡಿಸಿದ ವಕೀಲ ಶ್ರೀರಾಮ್ ಶಿರ್ಸಾಟ್, ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕಾಲಾವಕಾಶ ಕೋರಿದರು. ಈ ಮಧ್ಯೆ, ವಕೀಲರು ಮಧ್ಯಂತರ ಪರಿಹಾರವನ್ನು ಕೋರಿದ್ದರಿಂದ, ಮುಂದಿನ ವಿಚಾರಣೆಯ ದಿನಾಂಕವಾದ ಜನವರಿ 31ರವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳದಂತೆ ನ್ಯಾಯಾಲಯ  ಇ ಡಿಗೆ ನಿರ್ದೇಶಿಸಿತು.

Related Stories

No stories found.
Kannada Bar & Bench
kannada.barandbench.com