ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದ ಮೂವರು ಮಹಿಳಾ ಕುಸ್ತಿಪಟುಗಳು ತಮಗೆ ದೆಹಲಿ ಪೊಲೀಸರು ಒದಗಿಸಿದ್ದ ಭದ್ರತೆಯನ್ನು ಹಿಂಪಡೆದಿದ್ದಾರೆ ಎಂದು ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಮಹಿಳಾ ಕುಸ್ತಿಪಟು ಒಬ್ಬರು ನೀಡಿರುವ ದೂರಿಗೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸುವ ಮುನ್ನಾ ದಿನ ಭದ್ರತೆ ಹಿಂಪಡೆಯಲಾಗಿದೆ ಎಂದು ಕುಸ್ತಿಪಟುಗಳು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ರೋಸ್ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಿಯಾಂಕಾ ರಜಪೂತ್ ಅವರು ಮುಂದಿನ ಆದೇಶದವರೆಗೆ ಕುಸ್ತಿಪಟುಗಳಿಗೆ ಭದ್ರತೆ ಒದಗಿಸುವಂತೆ ಆದೇಶಿಸಿದ್ದಾರೆ.
“ದೂರುದಾರೆ/ಸಂತ್ರಸ್ತೆ 4 (ಸಾಕ್ಷಿಯ ಪಟ್ಟಿ ಪ್ರಕಾರ) ಅವರಿಗೆ ಮಧ್ಯಂತರ ಕ್ರಮದ ಭಾಗವಾಗಿ ಸಂಬಂಧಿತ ಡಿಸಿಪಿಯು ಹೇಳಿಕೆ ದಾಖಲಿಸುವವರೆಗೆ ತಕ್ಷಣ ಮತ್ತು ಸೂಕ್ತ ಭದ್ರತೆಯನ್ನು ಮುಂದಿನ ಆದೇಶವರೆಗೆ ಒದಗಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ. ಇಂದು ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ನಡೆಸಲಿದೆ.
2023ರ ಮೇ 10ರಂದು ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯ ಘನತಗೆ ಧಕ್ಕೆ ತಂದ ಆರೋಪಕ್ಕೆ ಸಂಬಂಧಿಸಿದಂತೆ ಬ್ರಿಜ್ ಭೂಷಣ್ ವಿರುದ್ಧ ನ್ಯಾಯಾಲಯವು ಆರೋಪ ನಿಗದಿಪಡಿಸಿತ್ತು. ಒಟ್ಟು ಆರು ಮಂದಿ ಮಹಿಳಾ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಆರೋಪ ಮಾಡಿದ್ದಾರೆ. ಕುಸ್ತಿಪುಟಗಳ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. 2023ರ ಜೂನ್ 15ರಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು.