
ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಗಿರೀಶ್ ಮಹಾಜನ್ ಅವರನ್ನು ಗುರಿಯಾಗಿಸಿಕೊಂಡು ಪ್ರಸಾರ ಮಾಡಲಾದ ಆರು ಮಾನಹಾನಿಕರ ವಿಡಿಯೋಗಳನ್ನು ತೆಗೆದುಹಾಕುವಂತೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಆದೇಶಿಸಿದೆ [ಗಿರೀಶ್ ದತ್ತಾತ್ರೇಯ ಮಹಾಜನ್ ಮತ್ತು ಅನಿಲ್ ಥಟ್ಟೆ ಇನ್ನಿತರರ ನಡುವಣ ಪ್ರಕರಣ].
ಮಹಾಜನ್ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯ ತೀರ್ಪು ಬರುವವರೆಗೂ ಇಬ್ಬರು ಯೂಟ್ಯೂಬರ್‌ಗಳು ಇದೇ ರೀತಿಯ ವಸ್ತು ವಿಷಯ ಪ್ರಕಟಿಸುವುದನ್ನು ಅಥವಾ ಪ್ರಸಾರ ಮಾಡುವುದನ್ನು ಅದು ನಿರ್ಬಂಧಿಸಿತು.
ಮೇ 8, 2025ರಂದು ತಾತ್ಕಾಲಿಕ ಪರಿಹಾರ ನೀಡಿದ ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರಿದ್ದ ಏಕಸದಸ್ಯ ಪೀಠ, ಆಕ್ಷೇಪಿತ ವಸ್ತು ವಿಷಯ ಮಾನಹಾನಿಕರವಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ತಿಳಿಸಿತು.
ಇಂತಹ ಮಾನಹಾನಿಕರ ವಸ್ತು ವಿಷಯವನ್ನು ಅಪ್‌ಲೋಡ್ ಮಾಡಿದ ಆರೋಪ ಹೊತ್ತಿರುವ ಯೂಟ್ಯೂಬರ್‌ಗಳು (ಪ್ರತಿವಾದಿಗಳು) ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ನಡವಳಿಕೆ ಸಮರ್ಥಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿಲ್ಲ ಎಂದು ನ್ಯಾಯಮೂರ್ತಿಗಳು ತಿಳಿಸಿದರು.
ಯಾವುದೇ ಪ್ರತಿವಾದದ ಅನುಪಸ್ಥಿತಿಯಲ್ಲಿ, ವಿಡಿಯೋಗಳಲ್ಲಿನ ಆರೋಪಗಳು "ಮಾನಹಾನಿಕರ" ಎಂದು ಕಂಡುಬಂದಿದ್ದು, ತಕ್ಷಣದ ನಿರ್ಬಂಧ ಅಗತ್ಯವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಅಂತೆಯೇ ಮಾನಹಾನಿಕರ ವಸ್ತು ವಿಷಯ ಒಳಗೊಂಡ ಆರು ವಿಡಿಯೋಗಳನ್ನು ತೆಗೆದುಹಾಕುವಂತೆ ನ್ಯಾಯಾಲಯ ಆದೇಶಿಸಿತು. ತನ್ನ ಆದೇಶ ಪಾಲನೆಯ ಸಲುವಾಗಿ ಗೂಗಲ್ ಸಂಸ್ಥೆಗೂ ಆದೇಶದ ಪ್ರತಿ ಒದಗಿಸುವಂತೆ ಮಹಾಜನ್ ಅವರಿಗೆ ಅದು ನಿರ್ದೇಶಿಸಿತು.
ಪ್ರಜರಣದ ಮುಂದಿನ ವಿಚಾರಣೆ ಜೂನ್ 20, 2025ರಂದು ನಡೆಯಲಿದೆ.