

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ವ್ಯಕ್ತಿತ್ವ ಹಕ್ಕುಗಳಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ತುರ್ತು ಮಧ್ಯಂತರ ರಕ್ಷಣೆ ನೀಡಿದ್ದು, ಸಾಮಾಜಿಕ ಮಾಧ್ಯಮ , ಇ-ವಾಣಿಜ್ಯ ಜಾಲತಾಣಗಳು ಹಾಗೂ ಕೃತಕ ಬುದ್ಧಿಮತ್ತೆ ವಸ್ತುವಿಷಯ ಸೃಷ್ಟಿಸುವವರು ನಟನ ಹೆಸರು, ಚಿತ್ರ, ಹೋಲಿಕೆ ಮತ್ತು ಧ್ವನಿಯನ್ನು ಅನುಮತಿಯಿಲ್ಲದೆ ಬಳಸದಂತೆ ನಿರ್ಬಂಧಿಸಿದೆ [ಅಕ್ಷಯ್ ಕುಮಾರ್ ಮತ್ತು ಅನಾಮಧೇಯ ವ್ಯಕ್ತಿಗಳ ನಡುವಣ ಪ್ರಕರಣ].
ಕೃತಕ ಬುದ್ಧಿಮತ್ತೆ ಸೃಷ್ಟಿಸುವ ಡೀಪ್‌ಫೇಕ್ ತೀವ್ರ ಕಳವಳ ಹುಟ್ಟಿಸುವಂತಿದ್ದು ಸಾರ್ವಜನಿಕ ಸುವ್ಯವಸ್ಥೆ ಮತ್ತು ನಟರ ಸುರಕ್ಷತೆಗೆ ಅಪಾಯಕಾರಿಯಾಗಿವೆ ಎಂದ ನ್ಯಾಯಮೂರ್ತಿ ಆರಿಫ್ ಎಸ್ ಡಾಕ್ಟರ್ ಅವರಿದ್ದ ಏಕಸದಸ್ಯ ಪೀಠ, ಅಂತಹ ಕಪೋಲಕಲ್ಪಿತ ವಸ್ತುವಿಷಯಗಳು ಅಕ್ಷಯ್ ಕುಮಾರ್ ಅವರ ವ್ಯಕ್ತಿತ್ವ ಮತ್ತು ನೈತಿಕ ಹಕ್ಕುಗಳನ್ನು ಉಲ್ಲಂಘಿಸುವುದಷ್ಟೇಅಲ್ಲದೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಅವರ ಕುಟುಂಬದ ಸುರಕ್ಷತೆಗೂ ಗಂಭೀರ ಬೆದರಿಕೆ ಒಡ್ಡುತ್ತಿವೆ ಎಂದರು.
ಮಹರ್ಷಿ ವಾಲ್ಮೀಕಿ ಬಗ್ಗೆ ಅಕ್ಷಯ್ ಕುಮಾರ್ ಕೋಮು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವಂತೆ ಬಿಂಬಿಸಿರುವ ಡೀಪ್‌ಫೇಕ್ ವಿಡಿಯೋ ತೀವ್ರ ಕಳವಳಕಾರಿಯಾಗಿದೆ. ಅಂತಹ ವಸ್ತುವಿಷಯ ಪ್ರಸಾರ ಮಾಡುವುದರಿಂದ ಉಂಟಾಗಬಹುದಾದ ಪರಿಣಾಮಗಳು ನಿಜಕ್ಕೂ ಅತ್ಯಂತ ಗಂಭೀರವಾದವು... ಆ ಬಗೆಯ ವಸ್ತುವಿಷಯವನ್ನು ಕೂಡಲೇ ಸಾರ್ವಜನಿಕ ವೇದಿಕೆಗಳಿಂದ ತೆಗೆದು ಹಾಕಬೇಕು. ಇದು ಅರ್ಜಿದಾರರದ್ದು ಮಾತ್ರವಲ್ಲದೆ ವ್ಯಾಪಕ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದಲೂ ಸಹ ಅಗತ್ಯವಾದುದು ಎಂದು ನ್ಯಾಯಾಲಯ ಹೇಳಿದೆ.
ಡಿಜಿಟಲ್ ವೇದಿಕೆಗಳಲ್ಲಿ ತಮ್ಮ ವ್ಯಕ್ತಿತ್ವದ ಅನಧಿಕೃತ ದುರ್ಬಳಕೆ ತಡೆಯುವಂತೆ ಕೋರಿ ಕುಮಾರ್ ವಾಣಿಜ್ಯ ಬೌದ್ಧಿಕ ಆಸ್ತಿ ಹಕ್ಕು ಮೊಕದ್ದಮೆ ಹೂಡಿದ್ದರು.
ವಾಲ್ಮೀಕಿ ದೃಶ್ಯದಲ್ಲಿ ಕೋಮು ಸೌಹಾರ್ದ ಕದಡಲೆಂದು ತಮ್ಮನ್ನು ಎಳೆದು ತರಲಾಗಿದೆ. ದೃಶ್ಯ ಬಿಡುಗಡೆಯಾಗುತ್ತಿದ್ದಂತೆ ಜಲಂಧರ್‌ನಲ್ಲಿ ಪ್ರತಿಭಟನೆ ನಡೆದಿತ್ತು. ಮಹರ್ಷಿ ವಾಲ್ಮೀಕಿ ರೂಪದ ಡೀಪ್ ಫೇಕ್ ವಿಡಿಯೋ ಮತ್ರವಲ್ಲದೆ ಮತ್ತೊಂದರಲ್ಲಿ ಯೋಗಿ ಆದಿತ್ಯನಾಥ್ ರೂಪದಲ್ಲಿ ತಮ್ಮನ್ನು ಬಿಂಬಿಸಲಾಗಿದೆ. ಈ ರೀತಿಯ ಕೃತಕ ವೀಡಿಯೊಗಳು ಸಾರ್ವಜನಿಕ ಅಶಾಂತಿ ಉಂಟುಮಾಡಿದ್ದು ತಮ್ಮ ಗೌರವ ಹಾಗೂ ಕುಟುಂಬದ ಸುರಕ್ಷತೆಗೆ ಧಕ್ಕೆ ತರಲಿವೆ ಎಂದು ದಾವೆ ಹೇಳಿತ್ತು.
ನೈಜ ದೃಶ್ಯಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲದೆ ಇರುವುದರಿಂದ ಎಐ ಸೃಷ್ಟಿಸಿರುವ ಡೀಪ್‌ಫೇಕ್‌ಗಳು ಅಪಾಯಕಾರಿ ಎಂದು ನ್ಯಾ. ಡಾಕ್ಟರ್ ಹೇಳಿದರು. ಅಂತೆಯೇ ನ್ಯಾಯಾಲಯ ಅಕ್ಷಯ್ ಪರವಾಗಿ ಮಧ್ಯಂತರ ರಕ್ಷಣಾ ಆದೇಶ ನೀಡಿದ್ದು ಸಾಮಾಜಿಕ ಮಾಧ್ಯಮ ಕಂಪೆನಿಗಳಾದ ಮೆಟಾ, ಗೂಗಲ್, ಎಕ್ಸ್ ಮತ್ತು ಇ- ವಾಣಿಜ್ಯ ಜಾಲತಾಣಗಳಾದ ಫ್ಲಿಪ್‌ಕಾರ್ಟ್, ಎಟ್ಸಿ, ರೆಡ್‌ಬಬಲ್ ಮುಂತಾದವು ನಟನ ಹೆಸರು ಅಥವಾ ಭಾವಚಿತ್ರ ಬಳಸಿ ಯಾವುದೇ ವಸ್ತುವಿಷಯ ಪ್ರಕಟಿಸದಂತೆ ಸೂಚಿಸಿದೆ.
ಯಾರಾದರೂ ತನ್ನ ಆದೇಶ ಉಲ್ಲಂಘಿಸಿದರೆ ಆ ವಸ್ತುವಿಷಯವನ್ನು ಒಂದು ವಾರದೊಳಗೆ ಜಾಲತಾಣಗಳಿಂದ ತೆಗೆಯಬೇಕು ಎಂದು ಅದು ಆದೇಶಿಸಿದೆ. ಅಲ್ಲದೆ ಅಕ್ಷಯ್ ಕುಮಾರ್ ಅವರ ಹೆಸರಿನಲ್ಲಿ ಅಥವಾ ಕೃತಕ ಬುದ್ಧಿಮತ್ತೆ ತಂತ್ರದಿಂದ ನಕಲಿ ಜಾಲತಾಣಗಳು ಕಾರ್ಯನಿರ್ವಹಿಸುತ್ತಿದ್ದರೆ ಅವುಗಳ ವಿವರ ನೀಡುವಂತೆ ಸೂಚಿಸಿದ್ದು ಪ್ರಕರಣದ ಮುಂದಿನ ವಿಚಾರಣೆ 12 ನವೆಂಬರ್ 2025ರಂದು ನಡೆಯಲಿದೆ.
[ಆದೇಶದ ಪ್ರತಿ]