ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ಅವರ ಹಸುಗೂಸಿನ ವಿರುದ್ಧ ಟ್ವಿಟರ್‌ನಲ್ಲಿ ಅತ್ಯಾಚಾರ ಬೆದರಿಕೆ ಹಾಕಿದ್ದ ಆರೋಪದ ಮೇಲೆ 25 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ರಾಮನಾಗೇಶ್ ಅಕುಬತ್ತಿನಿ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ಅನ್ನು ಬಾಂಬೆ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ.
ಆರೋಪಿ ವಿರುದ್ಧದ ಆರೋಪಗಳನ್ನು ಕೈಬಿಡಲು ಪ್ರಕರಣದ ದೂರುದಾರರಾದ ಕೊಹ್ಲಿ ಅವರ ಮ್ಯಾನೇಜರ್ ಅಕ್ವಿಲಿಯಾ ಡಿಸೋಜಾ ಅವರು ಒಪ್ಪಿಗೆ ನೀಡಿದ ಬಳಿಕ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಪಿ ಡಿ ನಾಯಕ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಪ್ರಕರಣದ ವಿವರವಾದ ಆದೇಶ ಇನ್ನಷ್ಟೇ ದೊರೆಯಬೇಕಿದೆ.
ರಾಜ್ಯಕ್ಕೆ ಅತಿಹೆಚ್ಚು ಅಂಕ ಪಡೆದಿದ್ದ ಮತ್ತು ಹೈದರಾಬಾದ್‌ನ ಐಐಟಿ ಪದವೀಧರನಾದ ಆರೋಪಿ 2021ರ ಅಕ್ಟೋಬರ್ 24ರಂದು ಭಾರತ ಕ್ರಿಕೆಟ್ ತಂಡ ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್ ಪಂದ್ಯ ಸೋತ ಹಿನ್ನೆಲೆಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದ ಕೊಹ್ಲಿ ಅವರ 10 ತಿಂಗಳ ಹೆಣ್ಣು ಶಿಶುವಿಗೆ ಅತ್ಯಾಚಾರ ಬೆದರಿಕೆ ಹಾಕಿ ಟ್ವೀಟ್ ಮಾಡಿದ್ದ ಆರೋಪ ಎದುರಾಗಿತ್ತು.
ಆದರೆ ಫೆಬ್ರವರಿ 2022ರಲ್ಲಿ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿದ್ದ ಅಕುಬತ್ತಿನಿ, ʼವಿಚಾರಣೆ ಮುಂದುವರೆಯುವುದರಿಂದ ತನ್ನ ಬಗ್ಗೆ ಕೀಳು ಭಾವನೆ ಮೂಡುತ್ತದೆ. ಅಲ್ಲದೆ ತಾನು ಜೆಇಇ (ಅಡ್ವಾನ್ಸ್ಡ್) ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿ. ಪ್ರತಿಷ್ಠಿತ ಕಂಪೆನಿಗಳಲ್ಲಿ ಇಂಟರ್ನಿಯಾಗಿ ಸೇರಿದ್ದೇನೆ. ತನಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ. ಎಫ್‌ಐಆರ್ ರದ್ದಾಗದಿದ್ದರೆ ಅಧ್ಯಯನ ಅಥವಾ ಇನ್ನಾವುದೇ ಕೆಲಸಕ್ಕೆ ವಿದೇಶಕ್ಕೆ ತೆರಳಲು ಅಡ್ಡಿಯಾಗುತ್ತದೆ. ಜೊತೆಗೆ ಆಕ್ಷೇಪಾರ್ಹ ಟ್ವೀಟ್ ತನಗೆ ಸೇರಿದ ಸಾಧನದ ಐಪಿ ವಿಳಾಸದಿಂದ ಬಂದಿದೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ ಎಂದು ವಿವರಿಸಿದ್ದ.
ದೂರು ನೀಡಿದ್ದ ಕೊಹ್ಲಿ ಅವರ ಮ್ಯಾನೇಜರ್ ಪರವಾಗಿ ಹಾಜರಾದ ವಕೀಲರು ಎಫ್‌ಐಆರ್ ರದ್ದತಿಗೆ ಒಪ್ಪಿಗೆ ನೀಡುವ ಅಫಿಡವಿಟ್ ಸಲ್ಲಿಸಿದರು. ಬಳಿಕ ನ್ಯಾಯಾಲಯ ಎಫ್‌ಐಆರ್ ರದ್ದುಗೊಳಿಸಿತು.