ರಾಜ್ಯದ 186 ಪಂಚಾಯತ್‌ಗಳಿಗೆ ಚುನಾವಣೆ ಮುಂದೂಡಿದ್ದಕ್ಕಾಗಿ ಇತ್ತೀಚೆಗೆ ಗೋವಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್ ಚುನಾವಣೆ ನಡೆಸುವ ಕುರಿತಾದ ಸಾಂವಿಧಾನಿಕ ಆದೇಶ ಪಾಲಿಸಲು ವಿಫಲವಾಗುವುದು ಸಾಮಾನ್ಯ ಸಂಗತಿಯಾಗುತ್ತಿದೆ ಎಂದಿದೆ [ಸಂದೀಪ್ ವಜರ್ಕರ್ ಮತ್ತು ಗೋವಾ ಸರ್ಕಾರ ನಡುವಣ ಪ್ರಕರಣ].
ಪಂಚಾಯತಿ ಚುನಾವಣೆಗಳನ್ನು ನಡೆಸಲು 243 ಇ ವಿಧಿಯ ಅಡಿಯಲ್ಲಿ ಹೊರಡಿಸಲಾದ ಸಾಂವಿಧಾನಿಕ ಆದೇಶ ಪಾಲಿಸಲು ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ ವಿಫಲವಾಗಿರುವುದು ಕಳೆದ ಎರಡು ದಶಕಗಳಲ್ಲಿ ಇದು ನಾಲ್ಕನೇ ಬಾರಿ ಎಂದು ನ್ಯಾಯಮೂರ್ತಿಗಳಾದ ಎಂ ಎಸ್ ಸೋನಕ್ ಮತ್ತು ಆರ್ ಎನ್ ಲಡ್ಡಾ ಅವರಿದ್ದ ಪೀಠ ಮಂಗಳವಾರ ಪ್ರಕರಣದ ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿತು.
ಸಾಂವಿಧಾನಿಕ ಆದೇಶದ ಉಲ್ಲಂಘನೆಗೆ ಕಾರಣರಾದವರ ವಿರುದ್ಧ ಯಾವುದೇ ಕ್ರಮ ಜರುಗಿಸಿದ ನಿದರ್ಶನಗಳು ವರದಿಯಾಗಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ರಾಜ್ಯ ಚುನಾವಣಾ ಆಯೋಗ ಸರ್ಕಾರ ಹೇಳಿದ್ದಕ್ಕೆ ಮೌನವಾಗಿ ತಲೆಯಾಡಿಸಿ ಅದರಂತೆ ನಡೆದುಕೊಂಡು ಅಸಹಾಯಕತೆ ವ್ಯಕ್ತಪಡಿಸುತ್ತದೆ ಎಂದು ನ್ಯಾಯಾಲಯ ಕಿಡಿ ಕಾರಿದೆ.
ಈ ಅವಲೋಕನಗಳೊಂದಿಗೆ ರಾಜ್ಯದ 186 ಪಂಚಾಯತ್‌ಗಳಿಗೆ ಚುನಾವಣೆ ಮುಂದೂಡುವ ಗೋವಾ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯ ರದ್ದುಗೊಳಿಸಿದ್ದು 45 ದಿನಗಳಲ್ಲಿ ಚುನಾವಣೆ ಪೂರ್ಣಗೊಳಿಸುವಂತೆ ಪ್ರಮೋದ್ ಸಾವಂತ್ ಸರ್ಕಾರಕ್ಕೆ ಆದೇಶಿಸಿದೆ.