ಗ್ರಾಹಕ ಆಯೋಗಗಳ ಪದಾಧಿಕಾರಿಗಳ ನೇಮಕಾತಿ: ಗ್ರಾಹಕ ಸಂರಕ್ಷಣಾ ನಿಯಮ 6(1) ಅನ್ನು ರದ್ದುಗೊಳಿಸಿದ ಬಾಂಬೆ ಹೈಕೋರ್ಟ್

ನ್ಯಾಯಾಂಗದ ಮೇಲೆ ಕಾರ್ಯಾಂಗ ಅತಿಕ್ರಮಣಕ್ಕೆ ಈ ನಿಬಂಧನೆ ಕಾರಣವಾಗಿದ್ದು ನ್ಯಾಯಮಂಡಳಿ ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ನ್ಯಾಯಾಂಗದ ಒಳಗೊಳ್ಳುವಿಕೆಯನ್ನು ದುರ್ಬಲಗೊಳಿಸುತ್ತಿದೆ ಎಂದು ನಾಗಪುರ ಪೀಠ ತಿಳಿಸಿದೆ.
Nagpur Bench, Bombay High Court
Nagpur Bench, Bombay High Court

ರಾಜ್ಯ ಮತ್ತು ಜಿಲ್ಲಾ ಗ್ರಾಹಕ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವ ಆಯ್ಕೆ ಸಮಿತಿಯ ರಚನೆಗೆ ಸಂಬಂಧಿಸಿದ ಗ್ರಾಹಕ ಸಂರಕ್ಷಣಾ ನಿಯಮ 6ಅನ್ನು ಈಚೆಗೆ ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ರದ್ದುಗೊಳಿಸಿದೆ [ಮಹೇಂದ್ರ ಲಿಮಾಯೆ ಮತ್ತು ಭಾರತ ಒಕ್ಕೂಟ ಮತ್ತು ಸಂಬಂಧಿತ ಪ್ರಕರಣಗಳು].z

ರಾಜ್ಯ ಆಯೋಗ ಮತ್ತು ಜಿಲ್ಲಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ನೇಮಕ ಮಾಡಬಹುದೆಂದು ನಿಯಮ 6ರಲ್ಲಿ ಹೇಳಲಾಗಿತ್ತು. ಇದು ಆಯ್ಕೆ ಸಮಿತಿಯ ರಚನೆ ಕುರಿತು ಕೂಡ ಹೇಳುತ್ತದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಇಲ್ಲವೇ ಮುಖ್ಯ ನ್ಯಾಯಮೂರ್ತಿಯವರು ನಾಮ ನಿರ್ದೇಶನ ಮಾಡಿದ ಹೈಕೋರ್ಟ್‌ನ ಯಾವುದೇ ನ್ಯಾಯಮೂರ್ತಿ ಸಮಿತಿಯ ಅಧ್ಯಕ್ಷರಾಗಿರಬೇಕು ಮತ್ತು ಗ್ರಾಹಕ ವ್ಯವಹಾರಗಳ ಉಸ್ತುವಾರಿ ಕಾರ್ಯದರ್ಶಿಯನ್ನು ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ನಾಮನಿರ್ದೇಶಿತ ಸದಸ್ಯರು ಇದು ಒಳಗೊಂಡಿರಬೇಕು ಎಂದು ನಿಯಮಾವಳಿ ತಿಳಿಸಿತ್ತು.

ನ್ಯಾಯಾಂಗದ ಮೇಲೆ ಕಾರ್ಯಾಂಗ ಅತಿಕ್ರಮಣಕ್ಕೆ ಈ ನಿಬಂಧನೆ ಕಾರಣವಾಗಿದ್ದು ನ್ಯಾಯಮಂಡಳಿ ಸದಸ್ಯರ ನೇಮಕಾತಿ ಪ್ರಕ್ರಿಯೆಯಲ್ಲಿ ನ್ಯಾಯಾಂಗದ ಒಳಗೊಳ್ಳುವಿಕೆಯನ್ನು ದುರ್ಬಲಗೊಳಿಸುತ್ತಿದೆ ಎಂಬ ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್ಕರ್ ಮತ್ತು ವೃಶಾಲಿ ಜೋಶಿ ಅವರಿದ್ದ ವಿಭಾಗೀಯ ಪೀಠ ನಿಯಮಾವಳಿಯನ್ನು ಬದಿಗೆ ಸರಿಸಿತು.

ರಾಜ್ಯ ಸರ್ಕಾರದ ಗ್ರಾಹಕ ವ್ಯವಹಾರಗಳ ಉಸ್ತುವಾರಿ ಕಾರ್ಯದರ್ಶಿ ಸದಸ್ಯರಾಗಿದ್ದರೆ, ಪ್ರಾಯೋಜಕ ಇಲಾಖೆಯು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯವಾಗಿದ್ದರೆ ಆಗ ರಾಜ್ಯ ಮತ್ತು ಜಿಲ್ಲಾ ಆಯೋಗಗಳ ನೇಮಕಾತಿಗಳಲ್ಲಿ ನಿರ್ದಿಷ್ಟ ಪಾತ್ರವನ್ನು ವಹಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಕಾರಣಕ್ಕೆ ನಿಬಂಧನೆಯ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಯನ್ನು ಎತ್ತಿಹಿಡಿದ ನ್ಯಾಯಾಲಯ ನಿಯಮಾವಳಿಯನ್ನು ರದ್ದುಗೊಳಿಸಿತು. ಆಯ್ಕೆ ಸಮಿತಿಯನ್ನು ರಚಿಸುವ ಏಪ್ರಿಲ್ 10, 2023 ಮತ್ತು ಜೂನ್ 13, 2023 ರ ಅಧಿಸೂಚನೆಗಳನ್ನು ಪ್ರಶ್ನಿಸಿ ಡಾ. ಮಹೇಂದ್ರ ಭಾಸ್ಕರ್ ಲಿಮಾಯೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. 2020ರ ನಿಯಮ 6(1) ಅನ್ನು ರದ್ದುಗೊಳಿಸಿದ್ದರಿಂದ, ನ್ಯಾಯಾಲಯ ಅಧಿಸೂಚನೆಗಳನ್ನು ಕೂಡ ರದ್ದುಪಡಿಸಿತು.

Kannada Bar & Bench
kannada.barandbench.com