ಅನಿಲ್ ದೇಶಮುಖ್ ಜಾಮೀನು ಆದೇಶಕ್ಕೆ ನೀಡಿದ್ದ ತಡೆ ಮತ್ತೆ ವಿಸ್ತರಿಸಲು ಬಾಂಬೆ ಹೈಕೋರ್ಟ್ ನಕಾರ

ಜಾಮೀನು ಆದೇಶಕ್ಕೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಇಂದಿನವರೆಗೂ ಜಾರಿಯಲ್ಲಿದ್ದು ಒಂದು ವೇಳೆ ಸಿಬಿಐ ಸುಪ್ರೀಂ ಕೋರ್ಟ್‌ನಿಂದ ಪರಿಹಾರ ಪಡೆಯಲು ವಿಫಲವಾದರೆ, ದೇಶಮುಖ್ ಅವರು ಜೈಲಿನಿಂದ ಬಿಡುಗಡೆಯಾಗಲು ಇದು ಅವಕಾಶ ಒದಗಿಸುತ್ತದೆ.
Anil Deshmukh, Bombay High Court
Anil Deshmukh, Bombay High Court

ಭ್ರಷ್ಟಾಚಾರ ಪ್ರಕರಣದಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್‌ ಅವರಿಗೆ ನೀಡಿದ್ದ ಜಾಮೀನು ಆದೇಶಕ್ಕೆ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ಮತ್ತಷ್ಟು ವಿಸ್ತರಿಸಲು ಬಾಂಬೆ ಹೈಕೋರ್ಟ್‌ ರಜಾಕಾಲೀನ ಪೀಠ ಮಂಗಳವಾರ ನಿರಾಕರಿಸಿದೆ.

ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಮುಖ್‌ ಅವರಿಗೆ ನ್ಯಾಯಮೂರ್ತಿ ಎಂ ಎಸ್ ಕಾರ್ಣಿಕ್ ಅವರು ಡಿಸೆಂಬರ್ 12, 2022ರಂದು ಜಾಮೀನು ನೀಡಿದ್ದರು. ಆದರೆ ಸಿಬಿಐ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅನುವು ಮಾಡಿಕೊಡುವ ಉದ್ದೇಶದಿಂದ ತನ್ನ ಆದೇಶಕ್ಕೆ ನ್ಯಾಯಾಲಯ 10 ದಿನಗಳ ಕಾಲ ತಡೆ ನೀಡಿತ್ತು. ಈ 10 ದಿನಗಳ ಕಾಲಾವಕಾಶ ಡಿಸೆಂಬರ್ 21ರಂದು ಕೊನೆಗೊಂಡಿತ್ತು.

ಆದರೆ ತಡೆಯಾಜ್ಞೆಯನ್ನು ಇನ್ನಷ್ಟು ವಿಸ್ತರಿಸುವಂತೆ ಸಿಬಿಐ ಮಾಡಿದ ಮನವಿಯನ್ನು ನ್ಯಾಯಾಲಯ ನಿರಾಕರಿಸಿತು. ನ್ಯಾ. ಕಾರ್ಣಿಕ್‌ ಅವರು  ವಿಸ್ತರಣೆಗಾಗಿ ಮಾಡುವ ಮನವಿಯನ್ನು ಪರಿಗಣಿಸುವುದಿಲ್ಲ ಎಂದು ಆದೇಶದಲ್ಲಿ ದಾಖಲಿದ್ದನ್ನು  ನ್ಯಾ. ಎಸ್‌ ಜಿ ಚಾಪಲ್‌ಗಾಂವ್ಕರ್‌ ಅವರಿದ್ದ ರಜಾಕಾಲೀನ ಪೀಠ ಪ್ರಸ್ತಾಪಿಸಿ ತಡೆಯಾಜ್ಞೆಗೆ ನಕಾರ ವ್ಯಕ್ತಪಡಿಸಿತು.

Also Read
ಭ್ರಷ್ಟಾಚಾರ ಪ್ರಕರಣದಲ್ಲಿಅನಿಲ್‌ ದೇಶಮುಖ್ ಅವರಿಗೆ ನೀಡಿದ್ದ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐ

“ಸಾಮಾನ್ಯ ನ್ಯಾಯಾಲಯದ ಆದೇಶವನ್ನು ರಜಾಕಾಲೀನ ನ್ಯಾಯಾಲಯ ಹೇಗೆ ಮೀರಲು ಸಾಧ್ಯ? ವಿನಂತಿಯನ್ನು ಪುರಸ್ಕರಿಸಲಾಗದು. ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಲಾಗಿದೆ” ಎಂದು ಅವರು ತಿಳಿಸಿದರು.

ಸಿಬಿಐ ಪರವಾಗಿ ವಕೀಲ ಶ್ರೀರಾಮ್‌ ಶಿರ್ಸಾಟ್‌ ವಾದ ಮಂಡಿಸಿದರು. ದೇಶಮುಖ್ ಅವರನ್ನು ವಕೀಲ ಅನಿಕೇತ್‌ ನಿಕಮ್‌ ಪ್ರತಿನಿಧಿಸಿದ್ದರು.

ದೇಶಮುಖ್‌ ಅವರು ಒಂದೇ ಆರೋಪಕ್ಕೆ ಸಂಬಂಧಿಸಿದ ಎರಡು ತನಿಖೆಗಳನ್ನು ಎದುರಿಸುತ್ತಿದ್ದರು. ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದವು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ಅವರಿಗೆ ಅಕ್ಟೋಬರ್  4ರಂದು ಜಾಮೀನು ನೀಡಿತ್ತು.

Related Stories

No stories found.
Kannada Bar & Bench
kannada.barandbench.com