ಬಕ್ರೀದ್‌ ವೇಳೆ ಮಾಂಸದಂಗಡಿಗಳಲ್ಲಿ ಪ್ರಾಣಿ ಬಲಿಗೆ ಅವಕಾಶ: ಸುತ್ತೋಲೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ

ಬೃಹನ್ಮುಂಬೈ ಮಹಾನಗರ ಪಾಲಿಕೆಯು ಮುಂಬರುವ ಜೂನ್ 17ರಂದು ಆಚರಿಸಲಾಗುವ ಹಬ್ಬಕ್ಕಾಗಿ 67 ಖಾಸಗಿ ಮಾಂಸದ ಅಂಗಡಿಗಳು ಮತ್ತು 47 ಪುರಸಭೆಯ ಮಾರುಕಟ್ಟೆಗಳಲ್ಲಿ ಪ್ರಾಣಿ ಬಲಿಗೆ ಅನುಮತಿ ನೀಡಿದೆ.
ಬಕ್ರೀದ್‌ ವೇಳೆ ಮಾಂಸದಂಗಡಿಗಳಲ್ಲಿ ಪ್ರಾಣಿ ಬಲಿಗೆ ಅವಕಾಶ: ಸುತ್ತೋಲೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ನಕಾರ
Published on

ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಜೂನ್ 17ರಂದು 67 ಖಾಸಗಿ ಮಾಂಸದ ಅಂಗಡಿಗಳು ಮತ್ತು ಪಾಲಿಕೆಯ 47 ಮಾರುಕಟ್ಟೆಗಳಲ್ಲಿ ಪ್ರಾಣಿ ಬಲಿಗೆ ಅನುಮತಿ ನೀಡಿದ್ದ ಬೃಹನ್ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಸುತ್ತೋಲೆ ಜಾರಿಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿದೆ [ಜೀವ್ ಮೈತ್ರಿ ಟ್ರಸ್ಟ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ಬಿಎಂಸಿ ಸುತ್ತೋಲೆಗೆ ತುರ್ತು ತಡೆ ನೀಡುವಂತೆ ಕೋರಿ ಜೀವ್ ಮೈತ್ರಿ ಟ್ರಸ್ಟ್ ಮತ್ತು ಅನೂಪ್ ರಾಜನ್ ಪಾಲ್ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎಂ ಎಸ್ ಸೋನಕ್ ಮತ್ತು ಕಮಲ್ ಖಾತಾ ಅವರಿದ್ದ ವಿಭಾಗೀಯ ಪೀಠ ಇಂದು ಆದೇಶ ನೀಡಿತು.

ಪ್ರಾಣಿ ಹತ್ಯೆಗೆ ಸಂಬಂಧಿಸಿದ ಬಿಎಂಸಿಯ ಸ್ವಂತ ನೀತಿಗೆ ವಿರುದ್ಧವಾಗಿ ಅದು ಸುತ್ತೋಲೆ ಹೊರಡಿಸಿದೆ. ಮುಂಬೈ ವಿಮಾನ ನಿಲ್ದಾಣಗಳ ಸಮೀಪವಿರುವ ಮಾಂಸದ ಅಂಗಡಿಗಳು ವಿಮಾನ ಕಾಯಿದೆಯನ್ನು ಉಲ್ಲಂಘಿಸಿ ಸುರಕ್ಷತಾ ಕಳವಳ ಉಂಟುಮಾಡಿವೆ ಎಂಬುದು ಅರ್ಜಿದಾರರ ವಾದವಾಗಿತ್ತು.

ಆದರೆ, ಬಿಎಂಸಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮಿಲಿಂದ್ ಸಾಠೆ, ಹಬ್ಬ ಹರಿದಿನಗಳಲ್ಲಿ ಜೂನ್ 17ರಿಂದ 19ರವರೆಗೆ ಸಂಬಂಧಪಟ್ಟ ಖಾಸಗಿ ಅಂಗಡಿಗಳು ಮತ್ತು ಪಾಲಿಕೆ ಮಾರುಕಟ್ಟೆಗಳಿಗೆ ಮಾತ್ರ ಅನುಮತಿ ನೀಡಲಾಗಿದೆ. ಈ ಹಿಂದೆ 72 ಸಂಸ್ಥೆಗಳಿಗೆ ಇಂತಹ ಅನುಮತಿಗಳನ್ನು ನೀಡಲಾಗಿದ್ದು, ಅದನ್ನು ಪ್ರಶ್ನಿಸಿರಲಿಲ್ಲ ಎಂದು ವಾದಿಸಿದರು.

ಯಾವುದೇ ಸೆಕ್ಷನ್‌ ಉಲ್ಲಂಘನೆೆಯಾದರೆ,  ಹೈಕೋರ್ಟ್ ಈ ಹಿಂದೆ ನೀಡಿರುವ ನಿರ್ದೇಶನದಂತೆ ದೂರು ಸಲ್ಲಿಸಲು ಯಾಂತ್ರಿಕ ವ್ಯವಸ್ಥೆ ಇದ್ದು ಅದೇ ಕಾರ್ಯವಿಧಾನ ಈಗಲೂ ಜಾರಿಯಲ್ಲಿರುತ್ತದೆ  ಎಂದ ನ್ಯಾಯಾಲಯ ಪರಿಹಾರ ನೀಡಲು ನಿರಾಕರಿಸಿತು.

Kannada Bar & Bench
kannada.barandbench.com