
ಕೃತಿಸ್ವಾಮ್ಯ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಷಯ್ ಕುಮಾರ್ ಅಭಿನಯದ 'ಸ್ಕೈ ಫೋರ್ಸ್' ಚಿತ್ರ ಬಿಡುಗಡೆಗೆ ತಡೆ ನೀಡಲು ಬಾಂಬೆ ಹೈಕೋರ್ಟ್ ಗುರುವಾರ ನಿರಾಕರಿಸಿರುವ ಹಿನ್ನೆಲೆಯಲ್ಲಿ ಚಿತ್ರ ನಾಳೆ ತೆರೆ ಕಾಣಲಿದೆ.
ತಮ್ಮ ಮೂಲ ಕೃತಿ 'ಫೈರ್ ಬರ್ಡ್'ಗೂ ಈ ಚಿತ್ರಕ್ಕೂ ಸಾಮ್ಯತೆ ಇದೆ ಎಂದು ಆರೋಪಿಸಿ ಆನಿಮೇಟರ್/ಸೃಜನಶೀಲ ನಿರ್ದೇಶಕ ಸಂದೀಪ್ ಗಂಗಟ್ಕಾರ್ ಅವರು ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಲು ನ್ಯಾಯಮೂರ್ತಿ ಮನೀಶ್ ಪಿತಾಳೆ ಅವರಿದ್ದ ಪೀಠ ನಿರಾಕರಿಸಿತು.
ಬಿಡುಗಡೆಗೂ ಮುನ್ನ ಸಿನಿಮಾವನ್ನು ಪೂರ್ವಭಾವಿಯಾಗಿ ಪ್ರದರ್ಶಿಸಬೇಕೆಂಬ ಗಂಗಾಟ್ಕರ್ ಅವರ ಮನವಿಯನ್ನೂ ನ್ಯಾಯಾಲಯ ನಿರಾಕರಿಸಿದೆ. ಆದರೆ ಸ್ಕೈ ಫೋರ್ಸ್ ನಿರ್ದೇಶಕರು ಮತ್ತು ನಿರ್ಮಾಪಕರು ನಾಲ್ಕು ವಾರದೊಳಗೆ ಪ್ರಕರಣದ ಸಂಬಂಧ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಅಕ್ಷಯ್ ಕುಮಾರ್ ಅವರಲ್ಲದೆ ಸಾರಾ ಅಲಿ ಖಾನ್, ನಿಮ್ರತ್ ಕೌರ್ ಮತ್ತು ವೀರ್ ಪಹಾಡಿಯಾ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ತಮ್ಮ ಮೂಲ ಹಾಗೂ ಅಪ್ರಕಟಿತ ಚಿತ್ರಕಥೆ 'ಫೈರ್ ಬರ್ಡ್'ನ್ನು ಆಧರಿಸಿ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರಾದ ಸಂದೀಪ್ ಕೆವ್ಲಾನಿ, ಮ್ಯಾಡಾಕ್ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್ ಹಕ್ಕುಸ್ವಾಮ್ಯ ಉಲ್ಲಂಘಿಸಿವೆ ಎಂದು ಗಂಗಟ್ಕಾರ್ ದೂರಿದ್ದರು.
ಸ್ಕೈ ಫೋರ್ಸ್ ನಿರ್ದೇಶಕ ಮತ್ತು ನಿರ್ಮಾಪಕರಿಗೆ ತಮ್ಮ ಚಿತ್ರಕತೆಯ ಬಗ್ಗೆ ಅರಿವಿತ್ತು. ಮತ್ತು ಅನುಮತಿಯಿಲ್ಲದೆ ಆದನ್ನು ಬಳಸಿಕೊಂಡಿದ್ದಾರೆ. ಇದು 'ಫೈರ್ ಬರ್ಡ್' ಮತ್ತು 'ಸ್ಕೈ ಫೋರ್ಸ್' ನಡುವೆ ಗಣನೀಯ ಹೋಲಿಕೆಗಳಿವೆ ಎಂದು ಗಂಗಟ್ಕಾರ್ ಪರ ವಕೀಲರು ಪ್ರತಿಪಾದಿಸಿದ್ದರು.
ನ್ಯಾಯಾಲಯ ವಾದ ಆಲಿಸಿತಾದರೂ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿತು. ಬದಲಿಗೆ ನಾಲ್ಕು ವಾರಗಳಲ್ಲಿ ಉತ್ತರಿಸುವಂತೆ ಪ್ರತಿವಾದಿಗಳಿಗೆ ನೋಟಿಸ್ ನೀಡಿತು.