ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಕುರಿತ ವೆಬ್ ಸರಣಿ 'ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ಬರೀಡ್ ಟ್ರೂತ್'ನ ಬಿಡುಗಡೆಗೆ ತಡೆ ನೀಡುವಂತೆ ಕೋರಿದ್ದ ಸಿಬಿಐ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ತಿರಸ್ಕರಿಸಿದೆ [ಸಿಬಿಐ ಮತ್ತು ನೆಟ್‌ಫ್ಲಿಕ್ಸ್ ನಡುವಣ ಪ್ರರಕಣ].
ವೆಬ್ ಸರಣಿ ವೀಕ್ಷಿಸಿದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜೂಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ನಡೆಯುತ್ತಿರುವ ವಿಚಾರಣೆಗೆ ಪ್ರತಿಕೂಲವಾಗುವಂತಹ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದು ನಿರ್ಣಯಿಸಿತು.
"(ವಿಚಾರಣೆಗೆ ಪ್ರತಿಕೂಲವಾಗುವಂಥದ್ದು) ಏನೋ ಇದೆ ಎಂದು ನಮಗೆ ಅನ್ನಿಸುತ್ತಿಲ್ಲ. ನಾವು ಆರಂಭದಲ್ಲಿ (ಪ್ರತಿಕೂಲವಾದ) ಏನಾದರೂ ಇರಬಹುದು ಎಂದು ಭಾವಿಸಿದ್ದೆವು. ಆದ್ದರಿಂದ ಸರಣಿ ವೀಕ್ಷಿಸಿದೆವು. ಸಾರ್ವಜನಿಕ ಗ್ರಹಿಕೆ ಬಗ್ಗೆ ಏನೂ ನಾವು ಕಳವಳಗೊಳ್ಳುತ್ತಿಲ್ಲ. ಅವರು (ಇಂದ್ರಾಣಿ) ಕೂಡ (ಸರಣಿಯಲ್ಲಿ) ಏನು ಹೇಳಿದ್ದಾರೋ ಅದೆಲ್ಲವೂ ಸಾರ್ವಜನಿಕವಾಗಿ ಲಭ್ಯ ಇರುವಂಥದ್ದೇ. ಪ್ರಾಮಾಣಿಕವಾಗಿ ಹೇಳುವುದಾದರೆ, ಪ್ರಾಸಿಕ್ಯೂಷನ್ ಗೆ ಪ್ರತಿಕೂಲವಾದ ಯಾವುದೂ ನಮಗೆ ಕಂಡುಬಂದಿಲ್ಲ. ನಿಮಗೆ (ಸಿಬಿಐಗೆ) ನಿಜವಾದ ಆತಂಕವಿದೆ ಎಂದು ನಾವು ಭಾವಿಸಿ ಸರಣಿ ವೀಕ್ಷಿಸಲು ಅನುವು ಮಾಡಿಕೊಟ್ಟೆವು. ಆ ದಿನ ಬೇರೆ ಪಕ್ಷಕಾರರು ವಾದಿಸಲು ಕೂಡ ನಾವು ಅವಕಾಶ ನೀಡಲಿಲ್ಲ. ಆರೋಪಿಗಳು ತಪ್ಪಿತಸ್ಥರು ಎಂದು ನೀವು ಊಹಿಸಲಾಗದು" ಎಂದು ನ್ಯಾಯಪೀಠ ಹೇಳಿತು.
ವೆಬ್ ಸರಣಿಗೆ ತಡೆ ನೀಡುವಂತೆ ಕೋರಿದ್ದ ತನ್ನ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದ್ದ ಹಿನ್ನೆಲೆಯಲ್ಲಿ ಸಿಬಿಐ, ಹೈಕೋರ್ಟ್ ಮೆಟ್ಟಿಲೇರಿತ್ತು. ಸರಣಿಯಲ್ಲಿ ಆರೋಪಿಗಳು ಮತ್ತು ಕೆಲ ಸಾಕ್ಷಿಗಳನ್ನು ಸಂದರ್ಶಿಸಲಾಗಿದ್ದು ತಾನು ಟ್ರೇಲರ್ ಮಾತ್ರ ನೋಡಿರುವುದರಿಂದ ಹಾಗೆ ಸಂದರ್ಶನ ನೀಡಿದವರ ನಿಖರ ಸಂಖ್ಯೆ ಒದಗಿಸುವಂತೆ ಸಿಬಿಐ ಪರ ಹಾಜರಿದ್ದ ವಕೀಲರು ವಾದಿಸಿದ್ದರು.
ಸರಣಿ ವೀಕ್ಷಿಸಿ ನಿರ್ಧಾರ ಕೈಗೊಳ್ಳಬಹುದಾದ್ದರಿಂದ ವಕೀಲರು ಮತ್ತು ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಿಗೆ ಪ್ರದರ್ಶನ ಏರ್ಪಡಿಸುವಂತೆ ಫೆಬ್ರವರಿ 22 ರಂದು ನೆಟ್‌ಫ್ಲಿಕ್ಸ್‌ಗೆ ಸೂಚಿಸಿತ್ತು. ಹೀಗಾಗಿ ತನ್ನ ವೇದಿಕೆಯಲ್ಲಿ ಸರಣಿ ಬಿಡುಗಡೆಯನ್ನು ನೆಟ್‌ಫ್ಲಿಕ್ಸ್ ಮುಂದೂಡಿತ್ತು.
ಸರಣಿಯನ್ನು ಇದೀಗ ವೀಕ್ಷಿಸಿರುವ ಪೀಠ ವಿಚಾರಣೆಗೆ ಯಾವುದೇ ಪ್ರತಿಕೂಲ ಅಂಶಗಳು ಕಂಡುಬಂದಿಲ್ಲ ಎಂದು ತಿಳಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿತು.
ನೆಟ್‌ಫ್ಲಿಕ್ಸ್ ಪರವಾಗಿ ಹಿರಿಯ ವಕೀಲ ರವಿ ಕದಮ್ ವಾದ ಮಂಡಿಸಿದ್ದರು. ಸರಣಿಯ ನಿರ್ಮಾಪಕರನ್ನು ವಕೀಲ ಅಭಿನವ್ ಚಂದ್ರಚೂಡ್ ಪ್ರತಿನಿಧಿಸಿದ್ದರು.