ಉದ್ಯಮಿ ಸಜ್ಜನ್ ಜಿಂದಾಲ್ ವಿರುದ್ಧದ ಅತ್ಯಾಚಾರ ಪ್ರಕರಣ ಮರು ವಿಚಾರಣೆಗೆ ಬಾಂಬೆ ಹೈಕೋರ್ಟ್ ನಕಾರ
ಜೆಎಸ್‌ಡಬ್ಲ್ಯು ಗುಂಪಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣವನ್ನು ಮತ್ತೆ ತೆರಯುವಂತೆ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ.
ದೂರುದಾರೆಯ ಆರೋಪಗಳು ಸತ್ಯವಲ್ಲ ಎಂದು ಪೊಲೀಸರು ನೀಡಿದ್ದ ಪ್ರಕರಣ ಮುಕ್ತಾಯ ವರದಿಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಳೆದ ವರ್ಷ ಪುರಸ್ಕರಿಸಿತ್ತು.
ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ (ಬಿಕೆಸಿ) ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್) ಸಂಬಂಧ ಬಾಂದ್ರಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಏಪ್ರಿಲ್ 24, 2024ರಂದು ಬಿ ರಿಪೋರ್ಟ್ ಪುರಸ್ಕರಿಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹಿಳೆ ಸಲ್ಲಿಸಿದ್ದ ಕ್ರಿಮಿನಲ್ ರಿಟ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಹಾಗೂ ನ್ಯಾಯಮೂರ್ತಿ ಗೌತಮ್ ಎ. ಅಂಖಾಡ್ ಅವರಿದ್ದ ಪೀಠ ಡಿಸೆಂಬರ್ 24ರಂದು ತಿರಸ್ಕರಿಸಿತು.
ಜಿಂದಾಲ್ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 376 (ಅತ್ಯಾಚಾರ), 354 (ಮಾನಭಂಗ) ಹಾಗೂ 506 (ಕ್ರಿಮಿನಲ್ ಬೆದರಿಕೆ)ಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆದರೆ ಈ ಆರೋಪಗಳು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ಜಿಂದಾಲ್ ಹೇಳಿದ್ದರು.
ದೂರು ವಿಳಂಬವಾಗಿ ದಾಖಲಾಗಿದ್ದು, ಮಹಿಳೆ ಸೆಕ್ಷನ್ 164 ಅಡಿಯಲ್ಲಿ ಹೇಳಿಕೆ ನೀಡಲು ಹಾಜರಾಗಿಲ್ಲ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಜೊತೆಗೆ ಸಂಬಂಧಿತ ದಿನಾಂಕಗಳಲ್ಲಿ ಜಿಂದಾಲ್ ಅವರು ಘಟನೆ ನಡೆದ ಸ್ಥಳದಲ್ಲಿ ಇರಲಿಲ್ಲ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದ್ದರು. ದೂರುದಾರೆಯೇ ಪ್ರಕರಣವನ್ನು ಮುಂದುವರಿಸಲು ಅಸಮರ್ಥತೆ ವ್ಯಕ್ತಪಡಿಸಿ ಬಿ ರಿಪೋರ್ಟ್‌ಗೆ ತನ್ನ ಆಕ್ಷೇಪಣೆ ಇಲ್ಲ ಎಂದಿದ್ದ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ಅವರು ಪ್ರಕರಣ ಮುಕ್ತಾಯಕ್ಕೆ ಅನುಮತಿಸಿದ್ದರು ಎಂದು ಅವರು ಹೇಳಿದ್ದರು.
ಇಂತಹ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಸ್ತಕ್ಷೇಪ ಮಾಡುವ ಅವಕಾಶ ಸೀಮಿತವಾಗಿರುತ್ತದೆ ಎಂದಿರುವ ಹೈಕೋರ್ಟ್ ತನಿಖೆ ಪುನರಾರಂಭಿಸಲು ಇಲ್ಲವೇ ಸಿಬಿಐ ಅಥವಾ ಎಸ್‌ಐಟಿಗೆ ಪ್ರಕರಣ ವರ್ಗಾಯಿಸಲು ಕಾರಣ ಇಲ್ಲವೆಂದು ಸ್ಪಷ್ಟಪಡಿಸಿದೆ. ದೂರುದಾರರು ಅರಿವಿದ್ದು ಪ್ರಜ್ಞಾಪೂರ್ವಕವಾಗಿಯೇ ಪ್ರಕರಣ ಮುಕ್ತಾಯಕ್ಕೆ ಒಪ್ಪಿದ್ದರು ಎಂಬುದನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯ ರಿಟ್ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದಿದೆ.


